Advertisement

ಅಮ್ಮನನ್ನು ಕೊಲ್ಲುತ್ತಾರೆಂದು ಹೇಳಿ ಕೊಳಕ್ಕೆ ಹಾರಿದ ಯುವತಿ

08:15 AM Sep 06, 2017 | Team Udayavani |

ಜೋಧ್‌ಪುರ್‌/ಅಹಮದಾಬಾದ್‌: “ಟಾಸ್ಕ್ ಪೂರೈಸದಿದ್ದರೆ ತಾಯಿಯನ್ನು ಕೊಲ್ಲುತ್ತಾರೆ’. ಹೀಗೆಂದು ಹೇಳಿ 17ರ ಹರೆಯದ ಯುವತಿ ಕೊಳಕ್ಕೆ ಧುಮುಕಿದ್ದಳು. ಕೂಡಲೇ ಆಕೆಯನ್ನು ಪಾರು ಮಾಡಲಾಗಿದೆ. ಮಾರಕ ಬ್ಲೂವೇಲ್‌ ಗೇಮ್‌ಗೆ ಬಲಿಯಾಗಲಿದ್ದ ರಾಜಸ್ಥಾನದ ಜೋಧ್‌ಪುರದ ಯುವತಿಯ ಕತೆ ಇದು. ಬಿಎಸ್‌ಎಫ್ ಯೋಧರೊಬ್ಬರ ಪುತ್ರಿಯಾದ ಆಕೆ ಸೋಮವಾರ ರಾತ್ರಿ ಮಾರುಕಟ್ಟೆಗೆ ಹೋಗುವ ನೆಪದಲ್ಲಿ ದ್ವಿಚಕ್ರ ವಾಹನದಲ್ಲಿ ಮನೆಯಿಂದ ಹೊರಟಿದ್ದಳು. 

Advertisement

ಬಹಳ ಹೊತ್ತಾದರೂ ಪುತ್ರಿ ಮನೆಗೆ ಬರದೇ ಇದ್ದಾಗ ಪೋಷಕರು ಆತಂಕಗೊಂಡರು. ದ್ವಿಚಕ್ರ ವಾಹನದಲ್ಲಿ ಜೋಧ್‌ಪುರ್‌ನ ಕೊಳವೊಂದರ ಸುತ್ತ ಆಕೆ ಸುತ್ತುತ್ತಿದ್ದುದನ್ನು ಪರಿಚಿತರೊಬ್ಬರು ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. “ವಾಹನ ನಿಲ್ಲಿಸಿ, ಆಕೆ ಅಳುತ್ತಾ ಕುಳಿತಿದ್ದುದನ್ನು ನೋಡಿದೆ. ಏಕೆ ಅಳುತ್ತಿದ್ದೀಯಾ ಎಂದು ಕೇಳಿದೆ. ನಾನು ಅಂತಿಮ ಟಾಸ್ಕ್ ಅನ್ನು ಪೂರೈಸಲೇಬೇಕಿದೆ. ಇಲ್ಲದಿದ್ದರೆ ನನ್ನ ಅಮ್ಮ ಸಾಯುತ್ತಾರೆ ಎಂದು ಹೇಳುತ್ತಾ, ಓಡಿ ಹೋಗಿ ಕೊಳಕ್ಕೆ ಹಾರಿದಳು. ಕೂಡಲೇ ನಾನೂ ಹಾರಿ, ಆಕೆಯನ್ನು ರಕ್ಷಿಸಿದೆ,’ ಎಂದು ಅವರು ಹೇಳಿದ್ದಾರೆ. ಪೊಲೀಸರೂ ತಮಗೆ ಸೋಮವಾರ ರಾತ್ರಿ 11ರ ವೇಳೆಗೆ ಮಾಹಿತಿ ಸಿಕ್ಕಿತು. ವ್ಯಕ್ತಿ ಧುಮುಕಿ ಆಕೆಯನ್ನು ಪಾರು ಮಾಡುವಷ್ಟರಲ್ಲಿ ನಾವು ಸ್ಥಳಕ್ಕೆ ಹೋಗಿದ್ದೆವು ಎಂದು ಖಚಿತಪಡಿಸಿದ್ದಾರೆ.

ಕೆಲ ದಿನಗಳ ಹಿಂದೆ ತಮಿಳುನಾಡು, ಅಸ್ಸಾಂ, ಮಹಾರಾಷ್ಟ್ರ, ಕೇರಳದಲ್ಲಿ ಈ ಗೇಮ್‌ನ ಸೆಳೆತಕ್ಕೊಳಗಾಗಿ 4 ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಸೋಮವಾ ರವಷ್ಟೇ ಮದ್ರಾಸ್‌ ಹೈಕೋರ್ಟ್‌ ಗೇಮ್‌ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸೂಚಿಸಿತ್ತು. 

ಗುಜರಾತ್‌ನಲ್ಲಿ ನಿಷೇಧ: ಈ ನಡುವೆ ಮಾರಕ ಗೇಮ್‌ ಅನ್ನು ನಿಷೇಧಿಸಲು ಗುಜರಾತ್‌ ನಿರ್ಧರಿಸಿದೆ. ಈ ಬಗ್ಗೆ ಗೃಹ ಖಾತೆಗೆ ಸೂಚನೆ ನೀಡಿರುವುದಾಗಿ ಸಿಎಂ ವಿಜಯ ರುಪಾಣಿ ಹೇಳಿದ್ದಾರೆ. ಅಗತ್ಯ ಬಿದ್ದರೆ ಸುಗ್ರೀವಾಜ್ಞೆ ಹೊರಡಿಸಲೂ ಸೂಚಿಸಲಾಗಿದೆ ಎಂದಿದ್ದಾರೆ. ಇತ್ತೀಚೆಗೆ ಬನಾಸ್‌ಕಾಂತಾದಲ್ಲಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದ.

Advertisement

Udayavani is now on Telegram. Click here to join our channel and stay updated with the latest news.

Next