ಮಹದೇವಪುರ: ನಗರದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರೀತಿಯ ವಿಚಾರವಾಗಿ ಯುವತಿಯ ಪೋಷಕರೊಂದಿಗೆ ಜಗಳವಾಡಿ ಗಾಯಗೊಂಡಿದ್ದ ಯುವಕನೊಬ್ಬ ಮಂಗಳವಾರ ಆಸ್ಪತ್ರೆ ಮೃತಪಟ್ಟಿದ್ದಾನೆ. ಸಾವಿಗೆ ಯುವತಿಯ ಪೋಷಕರು ಮತ್ತು ಪೊಲೀಸರೇ ಕಾರಣ ಎಂದು ಆರೋಪಿಸಿದ ಮೃತ ಯುವಕನ ಪೋಷಕರು ಮತ್ತು ಸಾರ್ವಜನಿಕರು ಪೊಲೀಸ್ ಠಾಣೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದರು.
ಆವಲಹಳ್ಳಿ ಗ್ರಾಮದ ಮೋಹನ್ ರಾಜು(26) ಮೃತ ಯುವಕ. ವಾಹನ ಚಾಲಕನಾಗಿದ್ದ ಈತ ಇದೇ ಗ್ರಾಮದ ಮೇಲ್ಜಾತಿಯ ಯುವತಿಯೊಬ್ಬಳನ್ನು ಕೆಲ ವರ್ಷಗಳಿಂದ ಪ್ರೀತಿಸುತಿದ್ದ. ಪೋಷಕರು ಇಬ್ಬರ ನಡುವಿನ ಪ್ರೇಮಕ್ಕೆ ವಿರೋಧ ವ್ಯಕ್ತಪಡಿಸಿದ್ದು. ಎರಡು ಕುಟುಂಬಗಳ ನಡುವೆ ಜಗಳ ನಡೆದಿದದ್ದವು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಗ್ರಾಮದ ಹಿರಿಯರು ಎರಡೂ ಕುಟುಂಬಗಳ ನಡುವೆ ರಾಜಿ ಸಂಧಾನ ಮಾಡಿ ಪ್ರೇಮಿಗಳಿಗೆ ಬುದ್ದಿವಾದ ಹೇಳಿದ್ದರು. ಆದರೆ, ಇಬ್ಬರ ಪ್ರೀತಿ ಮುಂದುವರಿದಿತ್ತು. ಇದು ಯುವತಿಯ ಪೋಷಕರ ಕೆಂಗಣ್ಣಿಗೆ ಗುರಿಯಾಗಿತ್ತು, ಈ ನಡುವೆ ಮೋಹನ್ ರಾಜುಗೆ ಕರೆ ಮಾಡಿದ್ದ ಯುವತಿ ಪೋಷಕರು ತನ್ನನ್ನು ಮನೆಯಲ್ಲಿ ಕೂಡಿಟ್ಟಿರುವುದಾಗಿ ತಿಳಿಸಿದ್ದಳು.
ಈ ಹಿನ್ನೆಲೆ ಕಳೆದ 14 ರಂದು ಮಧ್ಯರಾತ್ರಿ ವೇಳೆ ಯುವತಿಯ ಮನೆಗೆ ತೆರಳಿದ್ದ ಮೋಹನ್‌ರಾಜು, ಪೋಷಕರೊಡನೆ ಜಗಳವಾಡಿದ್ದಾನೆ. ಈ ವೇಳೆ ಮೋಹನ್ ರಾಜ್‌ನನ್ನು ಯುವತಿಯ ತಂದೆ ತಳ್ಳಿ ಕೊಲೆಗೆ ಯತ್ನಿಸಿದ್ದಾರೆಂದು ಯುವಕನ ಪೋಷಕರು ದೂರು ನೀಡಿದ್ದಾರೆ. ಮಹಡಿ ಮೇಲಿಂದ ಬಿದ್ದು ತಲೆಗೆ ಗಂಭೀರ ಗಾಯಗಳಾಗಿದ್ದ ಮೋಹನ್ ರಾಜ್‌ನನ್ನು ಪೋಷಕರು ನಗರದ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಯುವಕ ಸೋಮವಾರ ರಾತ್ರಿ ಮೃತಪಟ್ಟಿದ್ದಾನೆ.
ಶನಿವಾರವೇ ದೂರು ನೀಡಿದ್ದರೂ ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮಜರುಗಿಸಲಿಲ್ಲ ಎಂದು ಆರೋಪಿಸಿ ಯುವಕನ ಪೋಷಕರು ಶವವನ್ನು ಠಾಣೆಯ ಮುಂದೆ ಇಟ್ಟು ಮಂಗಳವಾರ ಪ್ರತಿಭಟಿಸಿದರು. ಈ ವೇಳೆ ಪೊಲೀಸರು ಮತ್ತು ಪೋಷಕರ ನಡುವೆ ಮಾತಿನ ಚಕಮಕಿ ನಡೆದಿದೆ. ಕೆಲ ಸಮಯ ಬಿಗುವಿನ ವಾತಾವರಣ ಮನೆ ಮಾಡಿತ್ತು. ಸ್ಥಳಕ್ಕಾಗಮಿಸಿದ ವೃತ್ತ ನಿರೀಕ್ಷಕ ಚನ್ನೇಶ್ ಎಲ್ಲರನ್ನೂ ಸಮಾಧಾನಪಡಿಸಿ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು.