ಆ ಬಸ್‌ಗಾಗಿ ಜನ ಜಂಗುಳಿಯೇ ಕಾದಿತ್ತು, ಅದು ನಮ್ಮೂರಿಗೆ ರಾತ್ರಿಯ ಕೊನೆಯ ಬಸ್. ಅದು ಬಂದಾಗ ಜನ ನುಗ್ಗಿದ್ದೇ ನುಗ್ಗಿದ್ದು, ನಾನೂ ಅದೇ ಜೋಶ್‌ನಲ್ಲಿ ಬಲಭೀಮನಂತೆ ಬಾಗಿಲಿನ ಒಳನುಗ್ಗಿ 2 ಸೀಟು ಹುಡುಕಿ ಅದರ ಮೇಲೆ ಕೈ ಚೀಲಗಳನ್ನಿರಿಸಿ, ನನ್ನ ಹೆಸರಿಗೆ ರಿಸರ್ವ್ ಮಾಡಿಕೊಂಡು ಉಸಿರು ಬಿಟ್ಟೆ. ಅಷ್ಟರಲ್ಲಿ, ಕಿಟಕಿಯಿಂದ ಕೈಯೊಂದು ಸೀಟಿನ ಮೇಲೆ ಎರಡು ಚಪ್ಪಲಿ ತೂರಿ ಹಾಕಿತ್ತು! ಈ ವೇಳೆಗೆ, ನನ್ನ ಪತ್ನಿಯೂ ಹತ್ತಿ ಬಂದಳು. ನಾವು ಆ ಚಪ್ಪಲಿಗಳನ್ನು ಕೆಳಗೆ ಹಾಕಿ ಕುಳಿತೆವು. ಐದು ನಿಮಿಷದ ಬಳಿಕ, ದಢಿಯನೊಬ್ಬ ಮೇಲೆ ಬಂದವನೇ ತಾನು ಚಪ್ಪಲಿ ಹಾಕಿ ಸೀಟು ಹಿಡಿದಿರುವುದಾಗಿ ಗಲಾಟೆ ಆರಂಭಿಸಿದ.
“ನಾನು ನಿನಗಿಂತ ಮೊದಲೇ ಒಳಬಂದು ಸೀಟು ಹಿಡಿದಿದ್ದೇನೆ’ ಎಂದೆ. ಹೊಡೆಯುವ ರೀತಿಯಲ್ಲಿ ಕೈ, ಬಾಯಿ ಹಾರಿಸುತ್ತಾ ಚಪ್ಪಲಿ ತೋರಿಸುತ್ತಾ ಗದರತೊಡಗಿದ. ನನ್ನ ಪತ್ನಿ, ಬೆದರಿದ ಜಿಂಕೆಯಂತಾಗಿದ್ದಳು. “ಏಳ್ರಿ ಮೇಲೆ ‘ ಎಂದು ನನ್ನ ಕೈ ಹಿಡಿದು ಎಳೆಯಲಾರಂಭಿಸಿದ. ಯಾರಾದರೂ ಮಧ್ಯೆ ಪ್ರವೇಶಿಸಬಾರದೇ ಎಂದು ಹಿಂದೆ ಮುಂದೆಲ್ಲ ನೋಡಿದೆ. ಅಷ್ಟರಲ್ಲಿ ಪಕ್ಕದ ಸೀಟಿನ ಬಳಿ ನಿಂತಿದ್ದ ಸುಪುಷ್ಠ ಯುವಕನೊಬ್ಬ ಏನೆಂದು ವಿಚಾರಿಸಿದ. ಇಬ್ಬರೂ ನಮ್ಮ ನಮ್ಮ ಅಹವಾಲು ಹೇಳಿಕೊಂಡೆವು.
“ಅಪ್ಪಾ ಮಹಾರಾಯ, ಅವರು ಬಾಗಿಲಿನಿಂದ ಒಳಬಂದು ಖಾಲಿಯಿದ್ದ ಸೀಟಿಗೆ ಬ್ಯಾಗ್ ಹಾಕಿದ್ದನ್ನು ನಾನೇ ನೋಡಿದ್ದೇನೆ. ನೀನು ಆ ಮೇಲೆ ಕಿಟಕಿಯಿಂದ ರಿಸರ್ವೇಷನ್ ಮಾಡಿದ್ದೀಯ, ಅದೂ ಚಪ್ಪಲಿ ಎಸೆದು! ಆದರೂ, ನಿನ್ನ ಪರ ಹೇಳುತ್ತೇನೆ. ಅವರು ಬಾಗಿಲಿನಿಂದ ಒಳ ಬಂದು ಸೀಟ್ ಹಿಡಿದಿದ್ದು ಕುಳಿತಿದ್ದಾರೆ. ನೀನು ಕಿಟಕಿಯಿಂದ ಸೀಟು ಹಿಡಿದಿರುವುದರಿಂದ ಕಿಟಕಿಯಿಂದಲೇ ಒಳಬಾ ಸೀಟು ಕೊಡಿಸುತ್ತೇನೆ’ ಎಂದು ಬಿಟ್ಟರು. ಸಹಪ್ರಯಾಣಿಕರೆಲ್ಲ ಒಮ್ಮೆಲೇ ಹೋ! ಎಂದರು, “ಹೌದು, ಹೌದು’ ಎಂದರು. ದಢಿಯನಿಗೆ ಅವಮಾನವೆನಿಸಿತು. ಕಿಟಕಿಯ ಕಡೆ ನೋಡಿದ. ಅದರಲ್ಲಿ ತನ್ನ ಬಲಭೀಮನ ದೇಹ ತೂರಿಸಲು ಸಾಧ್ಯವೇ?.
ನಿಧಾನವಾಗಿ ಕಾಲಿಗೆ ಚಪ್ಪಲಿಗಳನ್ನು ಧರಿಸಿ, ಭುಸುಗುಡುತ್ತ ಹಿಂದೆ ಹೋಗಿ, ಕಂಬಿ ಹಿಡಿದು ನಿಂತುಕೊಂಡ. ಅಬ್ಟಾ! ಬದುಕಿದೆಯಾ ಬಡಜೀವವೇ ಎಂದುಕೊಂಡೆ. ಬಸ್ ಹೊರಡುವಾಗ ಅವನಿರಲಿಲ್ಲ. ಅವನ ಚಿಕ್ಕಪ್ಪನನ್ನು ಬಸ್ ಹತ್ತಿಸಲು ಬಂದಿದ್ದನಂತೆ. ಇಳಿದು ಹೋಗಿದ್ದ. ಆ ಮೂರು ನಿಮಿಷದ ರಕ್ಷಕನಿಗೆ ಮನದಲ್ಲಿಯೇ ನೂರು ಬಾರಿ ವಂದಿಸಿದೆ.
ಕೆ. ಶ್ರೀನಿವಾಸರಾವ್