Advertisement

ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ! ಡಿಸಿ ಕಚೇರಿಗೆ ಹಾವು ಬಿಟ್ಟ ಯುವಕ !

10:55 AM Sep 10, 2019 | Team Udayavani |

ಬಾಗಲಕೋಟೆ : ಹಾವುಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡುವ ಕಾಯಕದಲ್ಲಿ ತೊಡಗಿರುವ ಇಲ್ಲಿನ ಹಾವು ರಕ್ಷಕ ಡ್ಯಾನಿಯಲ್ ನ್ಯೂಟನ್, ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಸೋಮವಾರ ಸಂಜೆ, ಹಾವುಗಳನ್ನೇ ಡಿಸಿ ಕಚೇರಿಗೆ ಬಿಟ್ಟು ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.

Advertisement

ಉರಗ ರಕ್ಷಕ ಎಂದೇ ಖ್ಯಾತಿ ಪಡೆದ ಡ್ಯಾನಿಯಲ್ ನ್ಯೂಟನ್, ಕಳೆದ ಹಲವು ವರ್ಷಗಳಿಂದ ಮನೆ, ಜನವಸತಿಗಳಲ್ಲಿ ಕಂಡು ಬರುವ ಹಾವುಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡುತ್ತಾರೆ. ಈ ವರೆಗೆ 2800ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ. ವಾಸ್ತವದಲ್ಲಿ ಹಾವುಗಳನ್ನು ಹಿಡಿದು, ಸುರಕ್ಷಿತ ಸ್ಥಳಕ್ಕೆ ಬಿಡುವುದು ಅರಣ್ಯ ಇಲಾಖೆಯ ಕೆಲಸ. ಆದರೂ, ಜನರ ಸುರಕ್ಷತೆ ಹಾಗೂ ಹಾವುಗಳ ರಕ್ಷಣೆಗಾಗಿ ಈ ಕಾರ್ಯ ಮಾಡುತ್ತಿದ್ದು, ಹಾವು ಹಿಡಿಯಲು ಇಲಾಖೆಯಿಂದ ಸೂಕ್ತ ಪರಿಕರ ಒದಗಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸಲಿಲ್ಲ . ಹೀಗಾಗಿ ಇಂತಹ ಪ್ರತಿಭಟನೆಯ ದಾರಿ ಹಿಡಿಯಬೇಕಾಯಿತು ಎಂದು ಡ್ಯಾನಿಯಲ್ ನ್ಯೂಟನ್ ಉದಯವಾಣಿಗೆ ತಿಳಿಸಿದರು.

ಸೋಮವಾರ ಒಂದೇ ದಿನ ಏಳು ಹಾವುಗಳನ್ನು ಹಿಡಿದಿದ್ದು, ಅವುಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ಒಪ್ಪಿಸಲು ದೂರವಾಣಿ ಕರೆ ಮಾಡಿದ್ದರು. ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಂದಿಸಿಲ್ಲ. ಡ್ಯಾನಿಯಲ್ ನ್ಯೂಟನ್, ಸೈಕಲ್ ಮೇಲೆ ಎಲ್ಲೆಡೆ ತಿರುಗುತ್ತಿದ್ದು, ದೂರದ ಅರಣ್ಯ ಪ್ರದೇಶಕ್ಕೆ ಏಳೂ ಹಾವುಗಳನ್ನು ಬಿಟ್ಟು ಬರಲು ನೆರವಾಗಿ ಎಂದು ಕೇಳಿಕೊಂಡಿದ್ದರು. ಆದರೆ, ಅರಣ್ಯ ಇಲಾಖೆ ಸಿಬ್ಬಂದಿ ನೆರವಾಗಲಿಲ್ಲ. ಅಲ್ಲದೇ ಹಾವು ಹಿಡಿಯಲು ಇಲಾಖೆಯಿಂದ ಸ್ನೇಕ್ ಸ್ಟಿಟ್, ಶೂ ಸಹಿತ ವಿವಿಧ ಪರಿಕರ ನೀಡುವಂತೆ ಮನವಿ ಮಾಡಿದರೂ ಸ್ಪಂದಿಸಲಿಲ್ಲ.

Advertisement

ಇದರಿಂದ ರೊಚ್ಚಿಗೆದ್ದು, ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಅವರ ಚೇಂಬರ್‌ನ ಮುಖ್ಯ ಕೊಠಡಿ ಎದುರು ಹಾವುಗಳ ಸಮೇತ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿಗಳೂ ಕಚೇರಿಯಲ್ಲಿ ಇರಲಿಲ್ಲ. ಇತ್ತ ಅರಣ್ಯ ಇಲಾಖೆ ಅಧಿಕಾರಿಗಳೂ ಬರಲಿಲ್ಲ. ಅಷ್ಟೊತ್ತಿಗೆ ಬೇರೊಂದು ಸ್ಥಳದಲ್ಲಿ ಹಾವು ಬಂದಿದೆ ಎಂಬ ದೂರವಾಣಿ ಕರೆ ಬಂತು. ಹೀಗಾಗಿ ಎಲ್ಲಾ ಏಳೂ ಹಾವುಗಳನ್ನು ಚೀಲದಲ್ಲಿ ಕಟ್ಟಿ, ಡಿಸಿ ಕೊಠಡಿ ಮುಂದೆ ಬಿಟ್ಟು ಹೋಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next