Advertisement

ರಾಸಾಯನಿಕ ಮುಕ್ತ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡ ತಂದೆ, ಮಗ

10:02 AM Dec 19, 2019 | mahesh |

ಹೆಸರು : ಮಿಥುನ್‌ ಶೆಟ್ಟಿ
ಏನೇನು ಕೃಷಿ: ಭತ್ತ, ಅಡಿಕೆ, ತೆಂಗು, ಕಾಳುಮೆಣಸು, ಬಾಳೆ, ಇತರ ಉಪಬೆಳೆ
ಎಷ್ಟು ವರ್ಷ: ಸುಮಾರು ಐದು ವರ್ಷಗಳಿಂದ
ಕೃಷಿ ಪ್ರದೇಶ: ಸುಮಾರು 8 ಎಕ್ರೆ

Advertisement

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಹೆಬ್ರಿ: ಚಾರ ಬಾವಿಗದ್ದೆ ನಿವಾಸಿ, ಪ್ರಗತಿಪರ ಕೃಷಿಕ ಸಾಧು ಶೆಟ್ಟಿ ಅವರ ಪುತ್ರ ಮಿಥುನ್‌ ಶೆಟ್ಟಿ ತನ್ನ ತಂದೆಯ ಕೃಷಿ ಚಟುವಟಿಕೆಯಿಂದ ಪ್ರಭಾವಿತರಾಗಿ ದೂರದ ಊರಿನ ಉದ್ಯೋಗ ತೊರೆದು 5ವರ್ಷಗಳಿಂದ ತಂದೆಯೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡು ಇತರರಿಗೆ ಮಾದರಿ ಯುವ ಕೃಷಿಕ ಎನಿಸಿಕೊಂಡಿದ್ದಾರೆ.

ತಂದೆ ಮಗ ಸೇರಿ ದಿನದ 24 ಗಂಟೆ ಕೃಷಿಯಲ್ಲಿ ಹೊಸ ಆವಿಸ್ಕಾರಗಳನ್ನು ಮಾಡಿ, ಯಾವುದೇ ರಾಸಾಯನಿಕ ಬಳಸದೆ ಕೃಷಿ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಭತ್ತದ ಕೃಷಿಯಲ್ಲಿ ಉತ್ತಮ ಫ‌ಸಲು ಪಡೆದು ಕೃಷಿ ಕ್ಷೇತ್ರೋತ್ಸವ ಮಾಡಿ ಕೃಷಿ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸುಮಾರು 8 ಎಕ್ರೆ ಜಾಗದಲ್ಲಿ ಸುಮಾರು 2ಸಾವಿರ ಅಡಿಕೆ ಕೃಷಿ, 3ಎಕ್ರೆ ಜಾಗದಲ್ಲಿ ಬಾಳೆ ಕೃಷಿ ಮಾಡಲಾಗಿದ್ದು, ಅತ್ಯಾಧುನಿಕ ಪದ್ಧತಿಯಲ್ಲಿ ಕೋಳಿಸಾಕಾಣಿಕೆ (ಸುಮಾರು 10ಸಾವಿರ ಕೋಳಿ) ಮಾಡಲಾಗುತ್ತಿದೆ. ಅಲ್ಲದೆ ಭತ್ತ, ತೆಂಗು, ಕಾಳುಮೆಣಸು ಅಲ್ಲದೆ ಸಮಗ್ರ ಕೃಷಿ ಅಡಿಯಲ್ಲಿ ಇತರ ಉಪಬೆಳೆಗಳನ್ನು ಬೆಳೆಯಲಾಗುತ್ತಿದೆ.

ಉಡುಪಿ ಪರ್ಯಾಯಕ್ಕೆ ಬಾಳೆಎಲೆ
ಪರ್ಯಾಯ ಅದಮಾರು ಸ್ವಾಮೀಜಿಗಳು ರೈತರ ಕೃಷಿ ಭೂಮಿಗೆ ಬಂದು ಬಾಳೆ ಮುಹೂರ್ತ ನೆರವೇರಿಸಿ ಅಲ್ಲಿಯ ಬಾಳೆ ಬೆಳೆಯಲಾಗುತ್ತಿದೆ. ಮಿಥುನ್‌ ಅವರ ಜಾಗ ಹಾಗೂ ಸುತ್ತಮುತ್ತಲಿನ ಜಾಗದಲ್ಲಿ ಬೆಳೆದ ಬಾಳೆ ಎಲೆಯನ್ನು ನೇರವಾಗಿ ಸ್ಥಳೀಯ ಕಾರ್ಯಕ್ರಮಕ್ಕೆ ಮತ್ತು ಶ್ರೀ ಅದಮಾರು ಮಠ ಪರ್ಯಾಯೋತ್ಸವಕ್ಕೆ ಬೇಕಾದ ಬಾಳೆಎಲೆ ಇಲ್ಲಿಂದಲೆ ಕಳುಹಿಸಲಾಗುತ್ತಿದೆ.

Advertisement

ಯಂತ್ರೋಪಕರಣ ಬಳಕೆ
ಗದ್ದೆ ಉಳುಮೆಗೆ ಟಿಲ್ಲರ್‌, ಬ್ರಷ್‌ ಕಟರ್‌ ಹಾಗೂ ಸ್ಪ್ರೆ ಎಂಜಿನ್‌ ಮತ್ತು ಭತ್ತ ಕೊಯ್ಲು ಯಂತ್ರ ಇತ್ಯಾದಿ ಯಂತ್ರಗಳ ಬಳಕೆ ಮಾಡಲಾಗುತ್ತದೆ.

ಲಭಿಸಿದ ಪ್ರಶಸ್ತಿಗಳು
2019ರ ಜಿಲ್ಲಾ ಕೃಷಿಕ ಪ್ರಶಸ್ತಿ, 2018ರ ತಾಲೂಕು ಉತ್ತಮ ಕೃಷಿಕ ಪ್ರಶಸ್ತಿ ಹಾಗೂ ಹೆಬ್ರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳದಲ್ಲಿ ಉತ್ತಮ ಯುವ ಕೃಷಿಕ ಪ್ರಶಸ್ತಿ ಲಭಿಸಿದೆ.

ಸಂಶೋಧನೆ
ಕೋಳಿಸಾಕಣೆ ಘಟಕದಲ್ಲಿ ಬಿಸಿಲಿನ ತಾಪವನ್ನು ನಿಯಂತ್ರಿಸಲು ಸ್ಪ್ರೆ ಎಂಜಿನ್‌ಗೆ ಫಾಗರ್‌ ಸಿಸ್ಟಮ್‌ ಅಳವಡಿಕೆ ಮಾಡಲಾಗಿದೆ. ಅಧಿಕಾರಿಗಳ ಸಹಾಯದಿಂದ ಕೋಳಿ ಸಾಕಾಣಿಕೆ ತರಬೇತಿ ಮತ್ತು ಕೃಷಿ ಪಾಠವನ್ನು ಸ್ಥಳೀಯ ರೈತರಿಗೆ ನೀಡಲಾಗುತ್ತಿದೆ. ಕೃಷಿ ಇಲಾಖೆ ಸಹಾಯಧನದಿಂದ ಕೃಷಿ ಹೊಂಡ, ಹನಿ ನೀರಾವರಿ ಪದ್ಧತಿ, ಸ್ಲರಿ ಹೊಂಡ, ಎರೆಹುಳು ಘಟಕ ಮಾಡಲಾಗಿದೆ.

ಸಾಧನೆಯ ಹಂಬಲ
ದೂರದ ಊರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ನನಗೆ ಸ್ವಂತವಾಗಿ ಏನಾದರೂ ಮಾಡಬೇಕು ಎಂಬ ಹಂಬಲ ಮೂಡಿತು. ನನ್ನ ತಂದೆ ಕೃಷಿಕರಾಗಿ ನಿರಂತರ ಕೃಷಿಯಲ್ಲಿ ತೊಡಗಿಕೊಂಡು ಕಾರ್ಮಿಕರ ಕೊರತೆಯ ನಡುವೆಯೂ ಶ್ರಮವಹಿಸುತ್ತಿರುವಾಗ ಅವರಿಗೆ ಬೆನ್ನೆಲುಬಾಗಿ ನಿಲ್ಲಬೇಕು ಎಂಬ ಇಚ್ಛೆಯಿಂದ ಕೃಷಿಯತ್ತ ಮುಖಮಾಡಿದೆ. ಸುಮಾರು ಐದು ವರ್ಷಗಳ ಹಿಂದೆ ತಂದೆ-ತಾಯಿ, ತಮ್ಮಂದಿರು ಹಾಗೂ ಹಿರಿಯರ ಮಾರ್ಗದರ್ಶನದೊಂದಿಗೆ, ಕೃಷಿ ಅಧಿಕಾರಿಗಳ ಸಹಕಾರದಿಂದ ಒಣಭೂಮಿಯಲ್ಲಿ ನೀರಾವರಿ ವ್ಯವಸ್ಥೆ ಮಾಡಿ ಹಂತಹಂತವಾಗಿ ಅಡಿಕೆ, ತೆಂಗು, ಕೋಳಿ ಸಾಕಾಣಿಕೆ, ಸಮಗ್ರ ಕೃಷಿ ಚಟುವಟಿಕೆಗೆ ಪೂರಕವಾಗಿ ಬಾಳೆಕೃಷಿ ಗೆ ಆದ್ಯತೆ ನೀಡಲಾಗಿದೆ. ಸಾವಯುವ ಕೃಷಿಗೆ ಒತ್ತು ನೀಡಿದ್ದು, ಯಂತ್ರೋಪಕರಣ ಬಳಕೆ ಮಾಡಲಾಗುತ್ತಿದೆ. ಮುಂದಿನ ಪೀಳಿಗೆಯವರಿಗೆ ಸಾವಯವ ಕೃಷಿ ಬಗ್ಗೆ ಮಾಹಿತಿ ಮತ್ತು ಕೃಷಿ ಭೂಮಿ ಉಳಿಸಿಕೊಳ್ಳುವ ಸಣ್ಣಮಟ್ಟದ ಹೋರಾಟಮಾಡಬೇಕು ಎಂಬ ಬಯಕೆ ನನ್ನದು.
-ಮಿಥುನ್‌ ಶೆಟ್ಟಿ ಚಾರ

ಹೆಬ್ರಿ ಉದಯಕುಮಾರ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next