ಕಾಸರಗೋಡು: ಗಾಂಜಾ ಮಾಫಿಯಾ ತಂಡಗಳ ನಡುವಿನ ಘರ್ಷಣೆಯ ಮಧ್ಯೆ ಅಕಸ್ಮಾತ್ ಗುಂಡು ಸಿಡಿದು ಯುವಕನೋರ್ವ ಗಾಯಗೊಂಡ ಘಟನೆ ಕೋಟಿಕುಳಂನಲ್ಲಿ ಸಂಭವಿಸಿದೆ.
ಗಾಯಗೊಂಡ ಪಾಲಕುನ್ನು ನಿವಾಸಿ ಫಯಾಸ್(19)ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಕೋಟಿಕುಳಂ ಸಿಟಿ ಸೆಂಟರ್ ಕಟ್ಟಡದಲ್ಲಿ ರವಿವಾರ ರಾತ್ರಿ 10 ಗಂಟೆಗೆ ಈ ಘಟನೆ ನಡೆದಿದೆ. ಕೋಲಚ್ಚಿ ನಾಸರ್ ಫಯಾಸ್ ಕೈಯಿಂದ ಗುಂಡು ಹಾರಿದ್ದಾಗಿ ಬೇಕಲ ಪೊಲೀಸರಿಗೆ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿ ಬೇಕಲ ಪೊಲೀಸರು ಕೇಸು ದಾಖಲಿಸಿದ್ದಾರೆ.
ರವಿವಾರ ಸಿಟಿ ಸೆಂಟರ್ ಕಟ್ಟಡದ ಎಲ್ಲ ಅಂಗಡಿಗಳು ಮುಚ್ಚಿದ್ದವು. ಈ ಮಧ್ಯೆ ಗಾಂಜಾ ಮಾಫಿಯಾ ಸಕ್ರಿಯವಾಗಿ ಇಲ್ಲಿ ವ್ಯವಹಾರ ನಡೆಸುತ್ತಿತ್ತೆನ್ನಲಾಗಿದೆ.
ಪಾಲಕುನ್ನು ಪರಿಸರದಲ್ಲಿ ಗಾಂಜಾ ಮಾಫಿಯಾ ಸಕ್ರಿಯವಾಗಿದ್ದು, ಇವರ ವಿರುದ್ಧ ಯಾವುದೇ ಕಠಿನ ಕ್ರಮಕ್ಕೆ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಪೊಲೀಸರಿಗೆ ಮಾಫಿಯಾ ತಂಡವನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಇವುಗಳ ವ್ಯವಹಾರ ಜೋರಾಗಿದೆ ಎನ್ನಲಾಗಿದೆ.
ಗುಂಡು ಅಕಸ್ಮಾತ್ ಹಾರಿಧ್ದೋ ಅಥವಾ ಉದ್ದೇಶ ಪೂರ್ವಕವಾಗಿ ಹಾರಿಸಿಧ್ದೋ ಎಂಬ ಬಗ್ಗೆ ಬೇಕಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.