ದೇಶದಲ್ಲಿ ಕೋವಿಡ್‌ನ ಮೊದಲ ಪ್ರಕರಣ ಪತ್ತೆಯಾಗಿ ಇಂದಿಗೆ ಒಂದು ವರ್ಷ. ಮೊದಲ ಪ್ರಕರಣ ದೇಶಾದ್ಯಂತ ಹುಟ್ಟುಹಾಕಿದ ಆತಂಕ ಅಷ್ಟಿಷ್ಟಲ್ಲ. 138 ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ ಪ್ರಕರಣ, ಸಾವುಗಳ ಸಂಖ್ಯೆ ಮಿತಿಮೀರಲಿದೆ ಎಂದು ಜಾಗತಿಕ ತಜ್ಞರು ಎಚ್ಚರಿಸಿದ್ದರು.
ಲಾಕ್‌ಡೌನ್, ಹಲವು ಕಠಿನ ನಿರ್ಬಂಧಗಳಿಲ್ಲದೇ ನಿಯಂತ್ರಣ ಸಾಧಿಸುವುದು ಗಂಭೀರ ಸವಾಲೇ ಆಗಿತ್ತು. ಆದರೆ ಹಲವಾರು ನಿರ್ಬಂಧ ಗಳ ಹೊರತಾಗಿಯೂ ಒಂದು ವರ್ಷದಲ್ಲಿ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖೆ 1.72 ಕೋಟಿಗೆ ತಲುಪಿದೆ. ಇದು ವರೆಗೂ 1.52 ಲಕ್ಷ ಭಾರತೀಯರು ಸೋಂಕಿನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವನ್ನು ಅಂಕಿಸಂಖ್ಯೆಗಳಲ್ಲೇ ಅಳೆಯುವುದಕ್ಕೆ ಸಾಧ್ಯವಾಗದು. ಪ್ರತಿಯೊಂದು ಜೀವವೂ ಅಮೂಲ್ಯವಾದದ್ದು. ಒಂದು ಸಾವು, ಆ ಇಡೀ ಕುಟುಂಬದ ಮೇಲೆ ದೀರ್ಘಾವಧಿ ಉಂಟುಮಾಡುವ ಪರಿಣಾಮ ಅಷ್ಟಿಷ್ಟಲ್ಲ. ಅದರಲ್ಲೂ ಕುಟುಂಬಕ್ಕೆ ಆಧಾರವಾಗಿದ್ದವರೇ ತೀರಿ ಹೋದಾಗ, ಅತಂತ್ರದ ಕಾರ್ಮೋಡ ಕುಟುಂಬದ ಮೇಲೆ ಕವಿದುಬಿಡುತ್ತದೆ.
ಹೀಗಾಗಿ ಈ ಮಹಾಮಾರಿಯ ಮೇಲೆ ಸಂಪೂರ್ಣ ಜಯ ಸಾಧಿಸುವುದು ಅತ್ಯಗತ್ಯ. ಗಮನಾರ್ಹ ಸಂಗತಿಯೆಂದರೆ ಈಗ ಭಾರತ ಲಸಿಕೆ ಪ್ರಕ್ರಿಯೆಯನ್ನು ಆರಂಭಿಸಿದೆ. ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳು ಭಾರತೀಯರಿಗೆ ಸಂಜೀವಿನಿಯಾಗಿ ಪರಿಣಮಿಸಲಿವೆ. ಇನ್ನು ಪರೀಕ್ಷೆಯ ಕಿಟ್‌ಗಳು, ಪಿಪಿಇ ಕಿಟ್‌ಗಳ ಅಭಾವವನ್ನೂ ಮೆಟ್ಟಿನಿಂತು ಅನ್ಯ ದೇಶಗಳಿಗೆ ರಫ್ತುಮಾಡುವಷ್ಟು ಉತ್ಪಾದನೆ ಹೆಚ್ಚಾಗಿದೆ. ಇದುವರೆಗೂ 19.5 ಕೋಟಿ ಜನರನ್ನು ಪರೀಕ್ಷಿಸಲಾಗಿದೆ. ದೇಶದಲ್ಲೀಗ ಚೇತರಿಕೆ ಪ್ರಮಾಣ 96.96 ಪ್ರತಿಶತಕ್ಕೆ ಏರಿಕೆಯಾಗಿದೆ.
ಈಗಲೂ ಜಗತ್ತಿನ ಕೋವಿಡ್ ಹಾಟ್‌ಸ್ಪಾಟ್‌ಗಳಲ್ಲಿ ಅಮೆರಿಕ ಅನಂತರ ಭಾರತ ಎರಡನೇ ಸ್ಥಾನದಲ್ಲಿದೆಯಾದರೂ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗುತ್ತಿದ್ದು, ಭಾರತವೀಗ ಹದಿನೈದನೇ ಸ್ಥಾನಕ್ಕೆ ಜಾರಿದೆ. ಶುಕ್ರವಾರದ ವೇಳೆಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1.72 ಲಕ್ಷಕ್ಕೆ ಇಳಿದಿರುವುದು ಗಮನಾರ್ಹ. ಇನ್ನು ದೇಶದ 146 ಜಿಲ್ಲೆಗಳಲ್ಲಿ ಕಳೆದ ಏಳು ದಿನಗಳಿಂದ ಒಂದೇ ಒಂದು ಕೊರೊನಾ ಸೋಂಕಿನ ಪ್ರಕರಣ ಪತ್ತೆಯಾಗಿಲ್ಲ. ಸೋಂಕಿನ ಪ್ರಭಾವ ತಗ್ಗಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್ ಹೇಳಿದ್ದಾರೆ.
ಇವೆಲ್ಲ ಗುಣಾತ್ಮಕ ಬೆಳವಣಿಗೆಯ ಮಧ್ಯೆಯೇ, ಈಗಲೂ ಹಣೆಯಲ್ಲಿ ಚಿಂತೆಯ ಗೆರೆಗಳು ಮೂಡುವಂತೆ ಮಾಡುತ್ತಿರುವ ಸಂಗತಿಯೆಂದರೆ, ಜನಸಾಮಾನ್ಯರ ವರ್ತನೆ. ಎಲ್ಲ ಆಶಾದಾಯಕ ಬೆಳವಣಿಗೆಯನ್ನು ಗಮನಿಸಿ ಕೋವಿಡ್ ದೂರವಾಗಿಬಿಟ್ಟಿದೆಯೇನೋ ಎಂಬಂತೆ ಜನರು ವರ್ತಿಸುತ್ತಿದ್ದಾರೆ.
ನೆನಪಿರಲಿ, ಲಸಿಕೆ ಪ್ರಕ್ರಿಯೆ ಆರಂಭವಾಗಿದೆಯಾದರೂ, ಅಗತ್ಯ ಇರುವ ಎಲ್ಲರಿಗೂ ಲಸಿಕೆಗಳು ತಲುಪುವುದಕ್ಕೆ ಇನ್ನೂ ಸಮಯ ಹಿಡಿಯ ಲಿದೆ. ಹೀಗಾಗಿ ಮುಂದಿನ ಕೆಲವು ತಿಂಗಳುಗಳು ಭಾರತಕ್ಕೆ ಅತ್ಯಂತ ನಿರ್ಣಾಯಕ ಘಳಿಗೆಗಳಾಗಲಿವೆ. ಈ ಹೊತ್ತಿನಲ್ಲಿ ನಾವೆಲ್ಲ ಮೈಮರೆತು ಬೇಜ ವಾಬ್ದಾರಿಯಿಂದ ವರ್ತಿಸಿದರೆ, ಆರೋಗ್ಯ ವಲಯದ ಮೇಲೆ ಮತ್ತೆ ಅಪಾರ ಹೊರೆ ಸೃಷ್ಟಿಯಾಗುವುದು ಖಚಿತ. ಹೀಗಾಗಿ ಪ್ರತಿದಿನವೂ ತಪ್ಪದೇ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವಿಕೆ, ಕೈಗಳನ್ನು ಆಗಾಗ ಸೋಪಿನಿಂದ ತೊಳೆಯುವ ಎಚ್ಚರಿಕೆ ಕ್ರಮಗಳು ಮುಂದುವರಿಯಲಿ.