ಮಡಿಕೇರಿ: ಬಾಯಾರಿಕೆ ನೀಗಿಸಿಕೊಳ್ಳಲು ತೋಟದ ಕೆರೆಗಿಳಿದ ಕಾಡಾನೆಗಳ ಹಿಂಡೊಂದು, ಕೆಸರು ಮಯವಾಗಿದ್ದರಿಂದ ದಂಡೆಯನ್ನೇರಲಾಗದೆ ಕೆಲ ಕಾಲ ಅಲ್ಲಿಯೇ ಬಂಧಿಯಾದ ಘಟನೆ ದಕ್ಷಿಣ ಕೊಡಗಿನ ಪಾಲಂಗಾಲ ಗ್ರಾಮದಲ್ಲಿ ನಡೆಯಿತು.
ಪಾಲಂಗಾಲ ಗ್ರಾಮದ ಕರಿನೆರವಂಡ ಮಿಟ್ಟು ಅಯ್ಯಪ್ಪ ಅವರ ತೋಟದ ಕೆರೆಗೆ ರಾತ್ರಿಯ ವೇಳೆ ನೀರು ಕುಡಿಯಲು ಬಂದ ಕಾಡಾನೆಗಳ ಹಿಂಡೊಂದು ಕೆರೆಗಿಳಿದು, ಹರ ಸಾಹಸಪಟ್ಟರು ಕೆರೆಯಿಂದ ಹೊರ ಬರಲು ಸಾಧ್ಯವಾಗದೆ ಅಹೋರಾತ್ರಿ ಅಲ್ಲಿಯೇ ಸಿಲುಕಿಕೊಂಡು, ಮರು ದಿನ ಅರಣ್ಯ ಇಲಾಖೆಯ ಸಿಬಂದಿಗಳ ಮತ್ತು ಗ್ರಾಮಸ್ಥರು ಕೆರೆ ಬದಿಯಲ್ಲಿ ನಿರ್ಮಿಸಿಕೊಟ್ಟ ಹಾದಿಯನ್ನು ಬಳಸಿ ಕೆರೆಯಿಂದ ಹೊರ ಬಂದ ಘಟನೆ ನಡೆಯಿತು.
ರಾತ್ರಿ ಇಡೀ ಕೆರೆಯಲ್ಲಿ ಸಿಲುಕಿಳಿಡುತ್ತಿದ್ದ ಆನೆಗಳ ಬಗ್ಗೆ ತೋಟ ಮಾಲಕರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬಂದಿಗಳು ಬೆಳಗಿನಿಂದ ಹರಸಾಹಸದಿಂದ ಕೆರೆಯ ಒಂದು ಭಾಗದ ಅಂಚನ್ನು ಜೆಸಿಬಿ ಬಳಸಿ ಅಗೆದು ಹಾದಿ ಕಲ್ಪಿಸಿದ ಬಳಿಕ ಕಾಡಾನೆಗಳ ಹಿಂಡು ಒಂದರ ಹಿಂದೆ ಮತ್ತೂಂದರಂತೆ ಕೆರೆಯಿಂದ ಹೊರಬಂದು ಕಾಡಿನತ್ತ ತೆರಳಿದವು.
ಸ್ಥಳೀಯ ಕಾಫಿ ಬೆಳೆಗಾರರಾದ ಕರಿನೆ ರವಂಡ ಅಚ್ಚಮ್ಮ ಕಸ್ತೂರಿ ಮಾತನಾಡಿ, ಪಾಲಂಗಾಲ ಗ್ರಾಮದಲ್ಲಿ ಇಂತಹ ಘಟನೆಗಳು ಮುಂದುವರಿದಿದ್ದು, ಕಾಡಾನೆಗಳಿಂದ ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಪಾಲಂಗಾಲ ಗ್ರಾಮ ದಲ್ಲಿ ಎರಡು ಬಾರಿ ಮತ್ತು ಚೇಲಾವರ ಗ್ರಾಮದಲ್ಲಿ ಒಂದು ಬಾರಿ ಕಾಡಾನೆಗಳು ದಾಂಧಲೆ ನಡೆಸಿ ಅಪಾರ ಕೃಷಿ ಹಾನಿಗೆ ಕಾರಣವಾಗಿವೆ. ವೈಜ್ಞಾನಿಕವಾಗಿ ಅರಣ್ಯದ ಅಂಚಿನಲ್ಲಿ ಕಂದಕ ಮತ್ತು ರೈಲು ಹಳಿಗಳಿಂದ ಬೇಲಿ ನಿರ್ಮಾಣ ಮಾಡದಿರುವ ಪರಿಣಾಮ ಕಾಡಾನೆಗಳು ಮೇವು ಅರಸಿಕೊಂಡು ನಾಡಿಗೆ ಬರುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಗ್ರಾಮಸ್ಥರ ಅಡ್ಡಿ-ಕಾಡಾನೆಗಳ ಉಪಟಳದಿಂದ ಬೇಸತ್ತ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬಂದಿಗಳಿಗೆ ಘೇರಾವೋ ಹಾಕಿದರಲ್ಲದೆ, ಡಿಎಫ್ಒ ಕ್ರಿಸ್ತರಾಜು ಅವರೊಂದಿಗೆ ವಾದ ವಿವಾದಕ್ಕೆ ಇಳಿದ ಘಟನೆ ನಡೆಯಿತು. ಬಳಿಕ ಅರಣ್ಯಾಧಿಕಾರಿಗಳು ಕಾಡಾನೆ ಹಾವಳಿ ನಿಯಂತ್ರಣದ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಗ್ರಾಮಸ್ಥರ ಮನವೊಲಿಸಿದರು.
ಕಾಡಾನೆಗಳನ್ನು ರಕ್ಷಿಸುವ ಕಾರ್ಯಾ ಚರಣೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬಂದಿಗಳು, ಗ್ರಾಮ ಸ್ಥರು ಹಾಗೂ ತೋಟ ಕಾರ್ಮಿಕರು ಉಪಸ್ಥಿತರಿದ್ದರು.