Advertisement

ಜಿನ್‌ಪಿಂಗ್‌ ಯುದ್ಧ ವ್ಯಾಮೋಹ ಮುಗಿಯದ ಬಿಕ್ಕಟ್ಟು

12:49 AM Oct 16, 2020 | mahesh |

ಗಡಿ ಭಾಗದಲ್ಲಿ ಚೀನ ಮತ್ತು ಭಾರತದ ನಡುವಿನ ಬಿಕ್ಕಟ್ಟು ಕಡಿಮೆಯಾಗುವ ಯಾವ ಲಕ್ಷ‌ಣಗಳೂ ಗೋಚರಿಸುತ್ತಿಲ್ಲ ಎಂದರೆ ಅದಕ್ಕೆ ಚೀನಿ ಸೇನೆ ಮತ್ತು ಜಿನ್‌ಪಿಂಗ್‌ರ ಉದ್ಧಟತನವೇ ಕಾರಣ. ಎರಡು ಬದಿಯ ಸೇನಾಧಿಕಾರಿಗಳ ನಡುವೆ ಈಗಾಗಲೇ 7 ಸುತ್ತಿನ ಮಾತುಕತೆಗಳಾದರೂ ಪರಿಸ್ಥಿತಿ ಬದಲಾಗಿಲ್ಲ. ಅತ್ತ ಚೀನ ಅಧ್ಯಕ್ಷ ಜಿನ್‌ಪಿಂಗ್‌ ಈಗ ಯುದ್ಧಕ್ಕಾಗಿ ಸಿದ್ಧರಾಗಿ ಎಂದು ತಮ್ಮ ಸೇನೆಗೆ ಕರೆಕೊಟ್ಟಿ ದ್ದಾರೆ. ಇವನ್ನೆಲ್ಲ ಗಮನಿಸಿದಾಗ ಲಡಾಖ್‌ ಭಾಗದಲ್ಲಿ ಬಿಕ್ಕಟ್ಟು ಈ ಚಳಿಗಾಲ ಮುಗಿದರೂ ನಿಲ್ಲುವುದಿಲ್ಲವೇನೋ ಎನಿಸುತ್ತಿದ್ದು, ರಕ್ಷಣಾ ಪರಿಣತರು ಈ ವಿದ್ಯಮಾನವನ್ನು ಇತ್ತೀಚಿನ ವರ್ಷಗಳಲ್ಲಿನ ಅತೀದೊಡ್ಡ ರಾಷ್ಟ್ರೀಯ ಭದ್ರತೆಯ ಸವಾಲು ಎಂದು ಕರೆಯುತ್ತಿದ್ದಾರೆ.

Advertisement

ಕೇಂದ್ರ ಸರಕಾರವು ಚೀನದ ಉದ್ಧಟತನಕ್ಕೆ ಪ್ರತ್ಯುತ್ತರ ನೀಡಲು ರಾಜತಾಂತ್ರಿಕ ವಾಗಿ, ಆರ್ಥಿಕವಾಗಿ ಹಾಗೂ ಮಿಲಿಟರಿ ರೂಪದಲ್ಲಿ ಕ್ರಮ ಕೈಗೊಳ್ಳುತ್ತಿದೆ. ರಾಜ ತಾಂತ್ರಿಕವಾಗಿ, ಇತ್ತೀಚೆಗೆ ಜಪಾನ್‌ನಲ್ಲಿ ನಡೆದ ಕ್ವಾಡ್‌ ಒಕ್ಕೂಟದ ಸಭೆಯು ಭಾರತದ ಪ್ರತಿತಂತ್ರಕ್ಕೆ ಒಂದು ಉದಾಹರಣೆ. ಇನ್ನು ಈಗಾಗಲೇ ಕೇಂದ್ರ ಸರಕಾರ ಹಲವು ಚೀನಿ ಆ್ಯಪ್‌ಗ್ಳನ್ನು ನಿಷೇಧಿಸಿರುವುದು, ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿಯಲ್ಲಿ ಬದಲಾವಣೆ ಮಾಡಿರುವುದಷ್ಟೇ ಅಲ್ಲದೇ 5ಜಿ ಟ್ರಯಲ್ಸ್‌ನ ವಿಚಾರದಲ್ಲಿ ಚೀನದ ಹುವೈಯನ್ನು ಅಡಕತ್ತರಿಯಲ್ಲಿ ಸಿಲುಕಿಸಿ ಆರ್ಥಿಕ ವಾಗಿ ಚೀನಕ್ಕೆ ಎಚ್ಚರಿಕೆ ನೀಡುತ್ತಿದೆ. ಸಾಮರಿಕವಾಗಿಯೂ ಭಾರತ ಅತ್ಯಂತ ದಿಟ್ಟ ಹೆಜ್ಜೆಗಳನ್ನಿಡುತ್ತಿದೆ. ಗಡಿ ಭಾಗದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೈನಿಕರನ್ನು, ಯುದ್ಧ ವಿಮಾನಗಳನ್ನು, ಶಸ್ತ್ರಾಸ್ತ್ರಗಳನ್ನು ನಿಯೋಜಿಸಿದೆ.

ಪಾಂಗಾಂಗ್‌ ತೂÕ ಸರೋವರದ ದಕ್ಷಿಣ ಭಾಗದ ಎತ್ತರದ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿದೆ. ಇನ್ನು ಫ್ರಾನ್ಸ್‌ನೊಂದಿಗಿನ ಭಾರತ ಸರಕಾರ ಮಾಡಿಕೊಂಡಿರುವ ರಫೇಲ್‌ ಯುದ್ಧವಿಮಾನ ಖರೀದಿ ಒಪ್ಪಂದದ ಭಾಗವಾಗಿ ಮುಂದಿನ ಕೆಲವೇ ವಾರಗಳಲ್ಲಿ ಎರಡನೇ ಬ್ಯಾಚ್‌ನ 3-4 ಯುದ್ಧ ವಿಮಾನಗಳು ನಮ್ಮ ನೆಲೆಗಳಿಗೆ ಬಂದಿಳಿಯಲಿವೆ. ಚೀನದ ಪ್ರತಿರೋಧದ ನಡುವೆಯೂ ರಕ್ಷಣಾ ಇಲಾಖೆಯ ಬಾರ್ಡರ್‌ ರೋಡ್ಸ್‌ ಆರ್ಗನೈಸೇಷನ್‌ ಲಡಾಖ್‌ನ ಆಯಕಟ್ಟಿನ ಜಾಗಗಳಲ್ಲಿ ವೇಗವಾಗಿ ರಸ್ತೆ, ಸೇತುವೆ, ಮೂಲಸೌಕರ್ಯಾಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುತ್ತಿದೆ (ಅತ್ತ ಚೀನ ಕೂಡ ತನ್ನ ಭಾಗದಲ್ಲಿ ಇಂಥ ನಿರ್ಮಾಣ ಕಾರ್ಯಗಳನ್ನು ಕೈಗೊಂಡಿದೆ. ಆದರೆ ಭಾರತದ ನಡೆ ಅದಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ)

ಈ ಎಲ್ಲ ಸಂಗತಿಗಳೂ ಚೀನದ ಪರದಾಟ ಹೆಚ್ಚಿಸಿರುವುದು ಸುಳ್ಳಲ್ಲ. ಆದರೆ ಚೀನ ಈಗಲೂ ಹಿಂದೆ ಸರಿಯುವ ಲಕ್ಷಣ ತೋರಿಸುತ್ತಿಲ್ಲ. ಸತ್ಯವೇನೆಂದರೆ, ಈ ಸಂಗತಿ ಜಿನ್‌ಪಿಂಗ್‌ ಆಡಳಿತಕ್ಕೆ ಪ್ರತಿಷ್ಠೆಯ ವಿಚಾರವಾಗಿಯೂ ಬದಲಾಗಿಬಿಟ್ಟಿದೆ, ಈ ಕಾರಣಕ್ಕಾಗಿಯೇ ಚೀನ ಅನಗತ್ಯವಾಗಿ ಬಿಕ್ಕಟ್ಟು ಮುಂದುವರಿಸುತ್ತಿದ್ದು, ಅದು ಮುಂದಿನ ದಿನಗಳಲ್ಲಿ, ನೇಪಾಲ ಹಾಗೂ ಪಾಕಿಸ್ಥಾನವನ್ನು ಭಾರತ ವಿರೋಧಿ ಕೃತ್ಯಗಳಿಗೆ ಮತ್ತಷ್ಟು ಬಳಸಿಕೊಳ್ಳಲು ಪ್ರಯತ್ನಿಸಲಿದೆ ಎನ್ನುತ್ತಾರೆ ರಕ್ಷಣ ಪರಿಣತರು. ಈ ಸಂಗತಿಯನ್ನು ಕೇಂದ್ರ ಸರಕಾರ ಹಾಗೂ ರಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿ, ಚೀನದ ವಿಸ್ತರಣಾವಾದಿ ಆಕಾಂಕ್ಷೆಯನ್ನು ಹೊಸಕಿ ಹಾಕಲು ಸರ್ವಸನ್ನದ್ಧವಾಗಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ.

Advertisement

Udayavani is now on Telegram. Click here to join our channel and stay updated with the latest news.

Next