Advertisement
ಜೂ. 8ರಂದು ಶ್ರೀ ಮಂಗಳಾದೇವಿ ದೇವಸ್ಥಾನದ ಎದುರಿನ ನಾಗನಕಟ್ಟೆಯ ಬೃಹತ್ ಅಶ್ವತ್ಥ ಮರದ ದೊಡ್ಡ ಗಾತ್ರದ ಗೆಲ್ಲೊಂದು ಬಿರುಗಾಳಿ ಮಳೆಗೆ ದಿಢೀರನೆ ಮುರಿದು ಬಿದ್ದು ನಂದಿಗುಡ್ಡೆಯ ಪ್ರವೀಣ್ ಸುವರ್ಣ(49), ಮಾರ್ನಮಿಕಟ್ಟೆಯ ಸುರೇಖಾ ಕೋಟ್ಯಾನ್ (53) ಮತ್ತು ತೇಜಸ್ವಿನಿ (20) ಹಾಗೂ ಜಪ್ಪು ಕುಡುಪಾಡಿಯ ರಿಕ್ಷಾ ಚಾಲಕ ನವೀನ್ ಮಡಿವಾಳ (45) ಗಾಯಗೊಂಡಿದ್ದರು. ದೇಗುಲದ ಎದುರಿನ ಛಾವಣಿ ಶೀಟ್ ಮತ್ತು ಎರಡು ದ್ವಿಚಕ್ರ ವಾಹನಗಳು ಹಾನಿಗೀಡಾಗಿದ್ದವು.
ಸುರೇಖಾ ಅವರ ತಲೆ, ಕುತ್ತಿಗೆ ಮತ್ತು ಕಾಲುಗಳಿಗೆ ಗಾಯಗಳಾಗಿದ್ದು, ಅತ್ತಾವರ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ್ದು, ಅದು ಗುಣವಾಗಿದೆ. ತಲೆಯ ಗಾಯದಿಂದಲೂ ಗುಣಮುಖರಾಗಿದ್ದಾರೆ. ಆದರೆ ಕುತ್ತಿಗೆಗೆ ಆಗಿರುವ ಪೆಟ್ಟಿನಿಂದಾಗಿ ಇನ್ನೂ ಆಸ್ಪತ್ರೆಯಲ್ಲಿ ಉಳಿಯಬೇಕಾಗಿದೆ. ಕುತ್ತಿಗೆಯ ಹಾನಿಯನ್ನು ಸರಿಪಡಿಸಲು ಟ್ರಾಕ್ಷನ್ ಅಳವಡಿಸಲಾಗಿದೆ. ಟ್ರಾಕ್ಷನ್ ಹಾಕಿ ಮೂರು ವಾರ ಕಳೆದಿದ್ದು, ಅದನ್ನು ಇನ್ನೂ 3ವಾರಗಳಿಗೆ ವಿಸ್ತರಿಸಲಾಗಿದೆ. ಅಷ್ಟು ಸಮಯ ಆಸ್ಪತ್ರೆಯಲ್ಲಿರುವುದು ಅನಿವಾರ್ಯ.
Related Articles
Advertisement
ಸುರೇಖಾ ಅವರ ಪತಿ ರತ್ನಾಕರ ಕೋಟ್ಯಾನ್ ಮಾಜಿ ಸೈನಿಕರಾಗಿದ್ದು, ಅವರು ಮತ್ತು ಇಬ್ಬರು ಪುತ್ರರು ಸೇರಿ ಆರೈಕೆ ಮಾಡುತ್ತಿದ್ದಾರೆ. ಹಿರಿಯ ಪುತ್ರ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಉದ್ಯೋಗವನ್ನು ಬಿಟ್ಟು ಮಂಗಳೂರಿಗೆ ಬಂದು ತಾಯಿಯ ಆರೋಗ್ಯ ನೋಡಿ ಕೊಳ್ಳುತ್ತಿದ್ದಾರೆ.
ಚಿಕಿತ್ಸೆಯ ವೆಚ್ಚಕ್ಕಾಗಿ ರತ್ನಾಕರ ಕೋಟ್ಯಾನ್ ತಮ್ಮ ವಿಮಾ ಸೌಲಭ್ಯ ವನ್ನು ಬಳಸಿಕೊಂಡಿದ್ದರೂ ಅದು ಸಾಕಾಗದ ಕಾರಣ ಸರಕಾರದ ನೆರವು ಯಾಚಿಸಿದ್ದಾರೆ. ಶಾಸಕ ವೇದವ್ಯಾಸ ಕಾಮತ್ ಆಸ್ಪತ್ರೆಗೆ ಭೇಟಿ ನೀಡಿ ತನ್ನಿಂದಾಗುವ ಸಹಾಯ ಒದಗಿಸುವ ಭರವಸೆ ನೀಡಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಮಕೃಷ್ಣ ರಾವ್ ಅವರೂ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.