Advertisement

ತೀರಾ ಹದಗೆಟ್ಟಿದೆ ಪ್ರಾಥಮಿಕ ಆರೋಗ್ಯ ಕೇಂದ್ರ ರಸ್ತೆ

11:53 PM Apr 25, 2019 | Team Udayavani |

ಅರಂತೋಡು: ಕೊಡಗು ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳುವ ತೆರಳುವ ರಸ್ತೆಯ ಸ್ಥಿತಿ ತೀರಾ ಹದಗೆಟ್ಟಿದ್ದು, ವಾಹನಗಳಿಗೆ ಮಾತ್ರವಲ್ಲದೆ ಪಾದಚಾರಿಗಳೂ ನಡೆದಾಡಲು ಕಷ್ಟಪಡುವ ಸ್ಥಿತಿಗೆ ಬಂದು ತಲುಪಿದೆ. ಸಂಪಾಜೆ ಪ್ರಾಥಮಿಕ ಆರೋಗ್ಯದ ವ್ಯಾಪ್ತಿಗೆ ಸೇರಿದ ರಸ್ತೆಯ ಡಾಮರು ಸಂಪೂರ್ಣ ಕಿತ್ತು ಹೋಗಿದೆ. ಆಸ್ಪತ್ರೆಗೆ ವಾಹನದಲ್ಲಿ ತೆರಳುವ ರೋಗಿಗಳ ಗೋಳು ಹೇಳ ತೀರದಾಗಿದೆ. ರೋಗಿಗಳು ವಾಹನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿದರೆ ಇಲ್ಲಿನ ಗುಂಡಿಗಳಲ್ಲಿ ವಾಹನಗಳು ಜಂಪ್‌ ಮೇಲೆ ಜಂಪ್‌ ಹೊಡೆಯುತ್ತವೆ. ಈ ಕಾರಣದಿಂದ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ.

Advertisement

ನಿರ್ವಹಣೆ ಖಾಸಗಿ ಸಂಸ್ಥೆಗೆ!
ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ ಕಳೆದ ಎರಡು ಮೂರು ತಿಂಗಳ ಹಿಂದೆ ಸಿಬಂದಿ ಕೊರತೆಯಿಂದ ಸಮಸ್ಯೆಗೆ ಸಿಲುಕಿತ್ತು. ಇದರಿಂದ ಹೆಚ್ಚಿನ ರೋಗಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳದೆ ಇತರ ಆರೋಗ್ಯ ಕೇಂದ್ರ ಹಾಗೂ ಖಾಸಗಿ ಆಸ್ಪತ್ರೆಗೆ ತೆರಳುತ್ತಿದ್ದರು. ಕಳೆದ ಮೂರು ತಿಂಗಳಿನಿಂದ ಈ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೂರು ವರ್ಷಗಳ ತನಕ ಉದ್ಭವ ಎನ್ನುವ ಖಾಸಗಿ ಸಂಸ್ಥೆಗೆ ನಿರ್ವಹಣೆ ಮಾಡಲು ಉಸ್ತುವಾರಿ ನೀಡಲಾಗಿದೆ. ಇದರಿಂದ ಖಾಲಿ ಇದ್ದ ಎಲ್ಲ ಹುದ್ದೆಗಳನ್ನು ಸಂಸ್ಥೆ ತಾತ್ಕಾಲಿಕ ನೆಲೆಯಲ್ಲಿ ಭರ್ತಿ ಮಾಡಿಕೊಂಡಿದೆ. ಇದರಿಂದ ರೋಗಿಗಳಿಗೆ ಉತ್ತಮ ಸೇವೆ ನೀಡುತ್ತಿದ್ದಾರೆ.
ದಿನಕ್ಕೆ ಸರಾಸರಿ 40 ಮಂದಿ ರೋಗಿಗಳು ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಾರಕ್ಕೆ ಒಂದು ಬಾರಿ ಹಾಗೂ ಉಪಕೇಂದ್ರದಲ್ಲಿ ತಿಂಗಳಿಗೆ ಒಂದು ಬಾರಿ ಲಸಿಕೆ ಹಾಕಲಾಗುತ್ತಿದೆ.

ವಸತಿಗೃಹ ದುರಸ್ತಿ
ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಎ.ಎನ್‌.ಎಮ್‌. ವಸತಿಗೃಹ ನಾದರಸ್ತಿಯಲ್ಲಿದೆ. ಇದರ ದುರಸ್ತಿ ಕಾರ್ಯ ಈಗ ಆರಂಭಗೊಂಡಿದೆ. ಇದೀಗ ಆಸ್ಪತ್ರೆಯಲ್ಲಿ ದಿನದ 24 ಗಂಟೆಗಳ ಆರೋಗ್ಯ ಸೇವೆ ಲಭ್ಯವಾಗುತ್ತಿದ್ದು, ಸಿಬಂದಿ ಪ್ರಾಥಮಿಕ ಆರೋಗ್ಯ ಕೇಂದ್ರದ ವಸತಿಗೃಹದಲ್ಲಿ ಉಳಿದುಕೊಳ್ಳುತ್ತಿದ್ದಾರೆ.

ಗಮನಕ್ಕೆ ತರಲಾಗಿದೆ
ಎ.ಎನ್‌.ಎಮ್‌. ವಸತಿಗೃಹದ ದುರಸ್ತಿ ಕಾರ್ಯ ಆರಂಭಗೊಂಡಿದೆ. ಮೇಲ್ಛಾವಣಿ ಕೆಲಸ ನಡೆದು ಬಣ್ಣ ಬಳಿಯಲಾಗುತ್ತಿದೆ. ಇಲ್ಲಿನ ರಸ್ತೆ ಮಾತ್ರ ದುರಸ್ತಿ ಆಗಿಲ್ಲ. ಈ ಸಮಸ್ಯೆಯ ಬಗ್ಗೆ ಗ್ರಾಮ ಪಂಚಾಯತ್‌ನ ಗಮನಕ್ಕೆ ತಂದು ಜಿಲ್ಲಾ ಪಂಚಾಯತ್‌ನಲ್ಲಿ ಮಾತನಾಡುತ್ತೇವೆ.
– ಡಾ| ವಿನುಫ್ ವೈದ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪಾಜೆ

ಅನುದಾನ ಬಿಡುಗಡೆ
ಪ್ರಾಥಮಿಕ ಆರೋಗ್ಯ ಕೇಂದ್ರದ ರಸ್ತೆ ಹದಗೆಟ್ಟಿರುವ ಬಗ್ಗೆ ತಿಳಿದಿದೆ. ಈ ರಸ್ತೆಯ ಅಭಿವೃದ್ಧಿಗೆ ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಕೆಲಸ ಆರಂಭವಾಗಲಿದೆ.
– ಕುಮಾರ್‌ ಚಿದಾರ್‌ ಅಧ್ಯಕ್ಷರು, ಕೊಡಗು-ಸಂಪಾಜೆ ಗ್ರಾ.ಪಂ.

Advertisement

ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next