Advertisement

ಹದಗೆಟ್ಟ ಬರಬೈಲ್‌ ನಿಟ್ಟೆ ಕೆಮ್ಮಣ್ಣು ರಸ್ತೆ: ಗ್ರಾಮಸ್ಥರ ಆಕ್ರೋಶ

06:00 AM Aug 03, 2018 | |

ಬೆಳ್ಮಣ್‌:  ಬೋಳ ಬರಬೈಲ್‌ ನಿಂದ ಮಿತ್ತಬೈಲ್‌ ಮಾರ್ಗವಾಗಿ ನಿಟ್ಟೆ ಕೆಮ್ಮಣ್ಣನ್ನು ಸಂಪರ್ಕಿಸುವ ಮಣ್ಣಿನ ರಸ್ತೆ ತೀರ ಹದಗೆಟ್ಟಿದ್ದು ನಡೆದಾಡಲೂ ಕಷ್ಟ ಸಾಧ್ಯವಾಗಿದೆ. ಈ ರಸ್ತೆಯ ಬಗ್ಗೆ   ಸ್ಥಳೀಯಾಡಳಿತ, ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿರುವ ಹಿನ್ನೆಲೆ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.

Advertisement

ಬೋಳ ಗ್ರಾ.ಪಂ. ವ್ಯಾಪ್ತಿಯ ಬರಬೈಲ್‌ ಮಾರ್ಗದಿಂದ ಸಂಪರ್ಕ ಪಡೆದು ನಿಟ್ಟೆ ಕೆಮ್ಮಣ್ಣು ಪರಿಸರ ಸೇರುವ ಈ ಕೂಡು ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ಬರಬೈಲ್‌ನಿಂದ ಸುಮಾರು 5ರಿಂದ 6 ಕಿ.ಮೀ ಉದ್ದದ ರಸ್ತೆ ಹೊಂಡಗುಂಡಿಗಳಿಂದ ತುಂಬಿದೆ. 

ಗ್ರಾಮಸ್ಥರಿಂದಲೇ ನಿರ್ಮಾಣಗೊಂಡ‌ ರಸ್ತೆ!
ಬರಬೈಲ್‌ ನಿಂದ ಮಿತ್ತಬೈಲ್‌ ಮಾರ್ಗವಾಗಿ ನಿಟ್ಟೆ  ಕೆಮ್ಮಣ್ಣು ಪರಿಸರ ತಲುಪಲು ಇದೇ ಹತ್ತಿರದ ಮಾರ್ಗ. 20 ವರ್ಷಗಳ ಹಿಂದೆ ಇಲ್ಲಿನ ಗ್ರಾಮಸ್ಥರು ರಸ್ತೆಯಾಗಬೇಕೆಂದು ತಮ್ಮ ಜಮೀನನ್ನು ಬಿಟ್ಟು ಕೊಟ್ಟು ಸ್ವತಃ ತಾವೇ ಕೆಲಸವನ್ನು ಮಾಡಿ ಮಣ್ಣಿನ ರಸ್ತೆಯನ್ನು ನಿರ್ಮಿಸಿದ್ದರು. ಆದರೆ  ಅಲ್ಲಿಂದ ಇಲ್ಲಿಯವರೆಗೂ ರಸ್ತೆ ಡಾಮರು ಮಾತ್ರ ಕಂಡಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಜನಪ್ರತಿನಿ ಧಿಗಳು ಡಾಮರು ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡುತ್ತಾರೆಯೇ ವಿನಾ ಇಲ್ಲಿಯವರೆಗೆ   ಜಲ್ಲಿ  ಕೂಡ ರಸ್ತೆಗೆ ಹಾಕಿಲ್ಲ  ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾಹನ ಚಾಲಕರ ಹಿಂದೇಟು
ಈ ಭಾಗದಲ್ಲಿ ಸುಮಾರು 40ಕ್ಕೂ ಹೆಚ್ಚಿನ ಮನೆಗಳಿವೆ. ರಸ್ತೆಯ ದುಃಸ್ಥಿತಿಯ ಕಾರಣ ತುರ್ತು ಸಂದರ್ಭಗಳಲ್ಲಿಯೂ ವಾಹನಗಳ ಚಾಲಕರುಬಾಡಿಗೆಗೆ ಬರಲು ಹಿಂದೇಟು ಹಾಕುತ್ತಾರೆ ಎಂಬುದು ಗ್ರಾಮಸ್ಥರ ಆರೋಪ.

ಮೋರಿಯೂ ಕುಸಿದಿದೆ
ರಸ್ತೆಯ ತಗ್ಗು ಪ್ರದೇಶದಲ್ಲಿ  ಮಳೆ ನೀರು ಹರಿದು ಹೋಗಲು ಮೋರಿಯೊಂದನ್ನು ನಿರ್ಮಿಸಲಾಗಿತ್ತು. ಆದರೆ ಆ ಮೋರಿಯೂ ಈಗ ಶಿಥಿಲಾವಸ್ಥೆ ತಲುಪಿದ್ದು, ಯಾವುದೇ ಸಂದರ್ಭ ಕುಸಿಯಬಹುದಾದ ಭೀತಿಯಿದೆ. ಮೋರಿ ಕುಸಿದದ್ದೇ ಆದಲ್ಲಿ  ರಸ್ತೆ ಸಂಪರ್ಕವೂ ಕಡಿತಗೊಳ್ಳಲಿದೆ. 

Advertisement

ಪ್ರಯೋಜನ ಆಗಿಲ್ಲ
ನಾವೇ ನಮ್ಮ ಸ್ವಂತ ಜಮೀನನ್ನು ಬಿಟ್ಟು ಕೊಟ್ಟು ರಸ್ತೆಯನ್ನು ನಿರ್ಮಿಸಿಕೊಟ್ಟರೂ ಅದಕ್ಕೊಂದು ಡಾಮರೂ ಹಾಕಿಲ್ಲ. ಕಳೆದ 20 ವರ್ಷದಿಂದಲೂ ನಾವು ಈ ಬಗ್ಗೆ ಬೇಡಿಕೆ ಇಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
– ವಾಸುದೇವ, ಸ್ಥಳೀಯರು

ಮನವಿ ಮಾಡಲಾಗಿದೆ
ಈ ರಸ್ತೆಯನ್ನು ಸಿ.ಆರ್‌.ಎಫ್‌. ಯೋಜನೆಯಡಿಯಲ್ಲಿ  ಸೇರಿಸಿಕೊಳ್ಳುವಂತೆ ಜಿ.ಪಂ. ಸದಸ್ಯರು ಹಾಗೂ ಶಾಸಕರಿಗೆ ಮನವಿ ಮಾಡಲಾಗಿದೆ. ಮುಂದಿನ ದಿನದಲ್ಲಿ ಅನುದಾನದ ಲಭ್ಯತೆಯಲ್ಲಿ  ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುವಂತೆ ನೋಡಿಕೊಳ್ಳುತ್ತೇವೆ.
– ಪುಷ್ಪಾ ಸತೀಶ್‌ ಪೂಜಾರಿ
ತಾ.ಪಂ. ಸದಸ್ಯೆ

Advertisement

Udayavani is now on Telegram. Click here to join our channel and stay updated with the latest news.

Next