Advertisement

World’s Highest Shiva Temple; ವಾಲುತ್ತಿದೆ ವಿಶ್ವದ ಅತಿ ಎತ್ತರದ ಶಿವ ದೇಗುಲ!

10:31 AM May 19, 2023 | Pranav MS |

ಡೆಹ್ರಾಡೂನ್‌: ಜಗತ್ತಿನಲ್ಲೇ ಅತಿ ಎತ್ತರದಲ್ಲಿರುವ ಶಿವ ದೇಗುಲ ಎಂದೇ ಖ್ಯಾತಿ ಪಡೆದಿರುವ ತುಂಗನಾಥ ದೇವಾಲಯವು 5ರಿಂದ 6 ಡಿಗ್ರಿಯಷ್ಟು ವಾಲಿದೆಯಂತೆ!

Advertisement

ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಅಧ್ಯಯನದಿಂದ ಈ ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ. ಉತ್ತರಾಭಿಮುಖವಾಗಿ ಮತ್ತು ಸಮುದ್ರಮಟ್ಟದಿಂದ ಬರೋಬ್ಬರಿ 12,800 ಅಡಿ ಎತ್ತರದಲ್ಲಿ ತುಂಗನಾಥ ದೇಗುಲವಿದೆ. ಗವ್ಹಾಲ್‌ ಹಿಮಾಲಯದ ರುದ್ರಪ್ರಯಾಗ್‌ ಜಿಲ್ಲೆಯಲ್ಲಿರುವ ಈ ಶಿವ ದೇವಸ್ಥಾನವು 5ರಿಂದ 6 ಡಿಗ್ರಿಯಷ್ಟು ವಾಲಿದರೆ, ದೇಗುಲದ ಸಂಕೀರ್ಣದಲ್ಲಿರುವ ಇತರೆ ಸಣ್ಣಪುಟ್ಟ ಕಟ್ಟಡಗಳು 10 ಡಿಗ್ರಿಗಳಷ್ಟು ವಾಲಿದೆ ಎಂದು ವರದಿ ತಿಳಿಸಿದೆ.

ಈ ವರದಿ ಕುರಿತು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿರುವ ಪುರಾತತ್ವ ಅಧಿಕಾರಿಗಳು, ಆದಷ್ಟು ಹೇಗ ತುಂಗನಾಥ ದೇಗುಲವನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ಇದನ್ನು ರಾಷ್ಟ್ರೀಯ ಮಹತ್ವ ಹೊಂದಿರುವ ಸಂರಕ್ಷಿತ ಸ್ಮಾರಕ ಎಂದು ಘೋಷಿಸುವ ಪ್ರಕ್ರಿಯೆ ಆರಂಭಿಸಿದೆ. ಜತೆಗೆ, ಈ ಕುರಿತು ಸಾರ್ವಜನಿಕರ ಅಭಿಪ್ರಾಯಗಳನ್ನೂ ಆಹ್ವಾನಿಸಿದೆ.

ಹಾನಿಗೆ ಕಾರಣ?

ದೇವಾಲಯವು ಏಕಾಏಕಿ ವಾಲಲು ಕಾರಣವೇನು ಎಂಬುದರ ಬಗ್ಗೆ ಪರಿಶೀಲಿಸಲು ಕ್ರಮ ಕೈಗೊಳ್ಳುತ್ತೇವೆ. ಸಂರಕ್ಷಣೆ ಅಗತ್ಯವಿದೆಯೇ, ಸ್ಮಾರಕದ ಪುನಸ್ಥಾಪನೆ ಮಾಡಬೇಕೇ, ಮಾಡುವುದಿದ್ದರೆ ಎಷ್ಟನ್ನು ಮಾಡಬೇಕು, ದೇಗುಲ ಮತ್ತಷ್ಟು ವಾಲುವ ಸಾಧ್ಯತೆಯಿದೆಯೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತದೆ ಎಂದು ಪುರಾತತ್ವ ಸರ್ವೇ ಅಧಿಕಾರಿಗಳು ಹೇಳಿದ್ದಾರೆ.

Advertisement

ತುಂಗನಾಥ ಎನ್ನುವುದು 8ನೇ ಶತಮಾನದಲ್ಲಿ ನಿರ್ಮಿಸಲಾದ ಜಗತ್ತಿನ ಅತಿ ಎತ್ತರದ ಶಿವ ದೇಗುಲ. ಪ್ರತಿ ವರ್ಷ ಇಲ್ಲಿಗೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಕೇದಾರನಾಥ ಮತ್ತು ಬದ್ರಿನಾಥ ದೇಗುಲಗಳನ್ನು ನಿರ್ವಹಿಸುತ್ತಿರುವ ಬದ್ರಿ-ಕೇದಾರ ದೇಗುಲ ಸಮಿತಿಯೇ ಈ ದೇಗುಲದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next