ಯಾದಗಿರಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಡಳಿತವನ್ನು ವಿಶ್ವವೇ ಒಪ್ಪಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದ ವಿದ್ಯಾಂಮಗಲ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಮೋದಿ ವಿಜಯ ಸಂಕಲ್ಪ ಯಾತ್ರೆ ಸಮಾರಂಭದಲ್ಲಿ ಅವರು ಮಾತನಾಡಿದರು. ಸಮೀಕ್ಷೆಗಳ ಪ್ರಕಾರ 100ಕ್ಕೆ 84 ಜನರು ಮೋದಿ ಪ್ರಧಾನಿಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ಮೋದಿ ಅವರು ಭ್ರಷ್ಟಾಚಾರ ವಾಸನೆ ಇಲ್ಲದ ಆಡಳಿತ ನೀಡಿ ದೇಶದ ಆರ್ಥಿಕ ಸ್ಥಿತಿ ಸುಧಾರಿಸುವ ಕೆಲಸ ಮಾಡಿದ್ದಾರೆ. ಸೂರ್ಯ ಚಂದ್ರ ಹುಟ್ಟುವುದೆ ಎಷ್ಟು ಸತ್ಯವೋ ಮೋದಿ ಪ್ರಧಾನಿಯಾಗುವುದು ಅಷ್ಟೇ ಸತ್ಯ. ಪಾಕಿಸ್ತಾನಕ್ಕೆ ಪಾಠ ಕಲಿಸುವ ಶಕ್ತಿ ಮೋದಿ ಅವರಿಗಿದೆ ಎಂದು ಹೇಳಿದರು.
ದೇಶದ ರಕ್ಷಣೆ, ಅಭಿವೃದ್ಧಿಗಾಗಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿಸಲು ಕಲಬುರಗಿ ಮತ್ತು ರಾಯಚೂರು ಲೋಕಸಭಾ ಕ್ಷೇತ್ರದ ಮತದಾರರು ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು. ರಾಜ್ಯದಲ್ಲಿ ಯಡಿಯೂರಪ್ಪ ಸಿಎಂ ಆಗಬಾರದು ಎನ್ನುವ ದುರುದ್ದೇಶದಿಂದ ಕಾಂಗ್ರೆಸ್ 37 ಸ್ಥಾನಗೆದ್ದ ಜೆಡಿಎಸ್‌ಗೆ ಬೆಂಬಲ ನೀಡಿದೆ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದರು. ಸಮ್ಮಿಶ್ರ ಸರ್ಕಾರದಲ್ಲಿ ರೈತರ ಸಾಲ ಮನ್ನಾ ಹೆಸರಿನಲ್ಲಿ ಖಜಾನೆ ಲೂಟಿ ಮಾಡುವ ಕೆಲಸ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, 2019ರ ಚುನಾವಣೆ ದೇಶದ ಇತಿಹಾಸದಲ್ಲಿಯೇ ಐತಿಹಾಸಿಕ ಚುನಾವಣೆಯಾಗಲಿದೆ. ಮೋದಿ ಅವರು ಬಡವರು, ನಿರ್ಗತಿಕರು, ರೈತರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಸೌಲಭ್ಯ ನೀಡುವ ಮೂಲಕ ಎಲ್ಲರ ಮನೆ ಬಾಗಿಲಿಗೆ ತಲುಪಿದ್ದಾರೆ. ಸ್ವಾತಂತ್ರ್ಯಾ ಸಿಕ್ಕಾಗಿನಿಂದ ಕಾಂಗ್ರೆಸ್ ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸಿದೆ ಎಂದು ಹೇಳಿದರು.
ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಯಲ್ಲಿದೆ. 79 ಗೆದ್ದವರು 39 ಗೆದ್ದವರನ್ನು ಮುಖ್ಯಮಂತ್ರಿಯಾಗಿದ್ದಾರೆ. ದೇಶದ ಜನರಿಗೆ ಮೋದಿ ಅವರು ಬಂಪರ್ ಕೊಡುಗೆ ನೀಡಿದ್ದಾರೆ ಎಂದು ಚಿಂಚನಸೂರ ಹೇಳಿದರು.
ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಗೌಡ ಮಾಗನೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ, ಮಾಜಿ ಶಾಸಕ ಡಾ| ವೀರಬಸವಂತರೆಡ್ಡಿ ಮುದ್ನಾಳ, ವಿಶ್ವನಾಥ ಹೆಬ್ಟಾಳ, ಖಂಡಪ್ಪ ದಾಸನ, ದೇವೇಂದ್ರನಾಥ ನಾದ, ಶರಣಭೂಪಾಲರೆಡ್ಡಿ ನಾಯ್ಕಲ್, ಶರಣಗೌಡ ಬಾಡಿಯಾಳ ಇದ್ದರು.