ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಇಡೀ ವಿಶ್ವವೇ ಭಾರತದ ಕಡೆಗೆ ನೋಡುವಂತೆ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪಕ್ಷದ ವತಿಯಿಂದ ಏರ್ಪಡಿಸಿದ್ದ “ಅಮೃತ ಭಾರತಿಗೆ ಕರುನಾಡ ಜಾತ್ರೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ 25ನೇ ಹಾಗೂ 50ನೇ ಸ್ವಾತಂತ್ರ್ಯೋತ್ಸವವನ್ನು ಹೇಗೆ ಆಚರಣೆ ಮಾಡಿದ್ದಾರೊ ಗೊತ್ತಿಲ್ಲ. ಆದರೆ 75ನೇ ವರ್ಷವನ್ನು ನರೇಂದ್ರ ಮೋದಿಯವರು ಇಡೀ ರಾಷ್ಟ್ರ ನೋಡುವಂತೆ ಮಾಡಿದ್ದಾರೆ ಎಂದು ಹೇಳಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ವಾತಂತ್ರ್ಯವನ್ನು ನಾವು ತಂದು ಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ಸಿದ್ದರಾಮಯ್ಯ ಸ್ವಾತಂತ್ರ್ಯ ತಂದು ಕೊಟ್ಟಿಲ್ಲ. ಅವರದು ಈಗ ಮೂರನೇ ಪಕ್ಷ. ಕಾಂಗ್ರೆಸ್‌ನವರು ಗರೀಬಿ ಹಠಾವೋ ಅಂದರು, ಗರೀಬಿ ಹಠಾವೋ ಆಯ್ತಾ? ದೇಶಕ್ಕೆ ಅನೇಕ ಪ್ರಧಾನಿಗಳನ್ನು ಕೊಟ್ಟರು, ಲಾಲ್ ಬಹಾದ್ದೂರ್ ಶಾಸ್ತ್ರಿಬಿಟ್ಟರೆ ಯಾರೂ ಕೆಲಸ ಮಾಡಲಿಲ್ಲ. ದೇಶಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರನ್ನು ಸಂಸತ್ತಿಗೆ ಬಿಡಲಿಲ್ಲ. ಅಂಬೇಡ್ಕರ್ ಸತ್ತಾಗ ಮೂರಡಿ, ಆರಡಿ ಜಾಗ ಕೊಡಲಿಲ್ಲ. ಇಂದು ಅವರ ಫೋಟೋ ಹಾಕಿಕೊಳ್ಳುತ್ತಾರೆ ಎಂದರು.
ಕಾಶ್ಮೀರದಲ್ಲಿ, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ತಿರಂಗಾ ಹಾರಿಸಲು ಅವಕಾಶ ಇರಲಿಲ್ಲ. ಆದರೆ, ಈಗ ಪ್ರಧಾನಿ ಮೋದಿ ಅವರು ದೇಶದೆಲ್ಲೆಡೆ ತಿರಂಗಾ ಹಾರಿಸುವಂತೆ ಮಾಡಿದ್ದಾರೆ. ಇಡೀ ಜಗತ್ತು ಭಾರತವನ್ನು ನೋಡುತ್ತಿದೆ.
-ನಳಿನ್‌ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ