Advertisement

ಮಟ್ಟುಗುಳ್ಳ ,ಮಲ್ಲಿಗೆ ಕೃಷಿಯಲ್ಲಿ ಅಪಾರ ನಿರೀಕ್ಷೆ 

06:25 AM Mar 23, 2018 | Team Udayavani |

ಮಟ್ಟು, ಕೈಪುಂಜಾಲು, ಪಾಂಗಾಳ, ಉಳಿಯಾರಗೋಳಿ ಗ್ರಾಮಗಳ ಪರಿಸರದ ಜನರು ಮಟ್ಟುಗುಳ್ಳ ಬೆಳೆಯುತ್ತಿದ್ದಾರೆ. ಶಂಕರಪುರ, ಕುರ್ಕಾಲು, ಬಂಟಕಲ್ಲು, ಶಿರ್ವ, ಮೂಡುಬೆಳ್ಳೆ, ಮುದರಂಗಡಿ, ಎಲ್ಲೂರು, ಮಜೂರು, ಹೇರೂರು, ಇನ್ನಂಜೆ, ಬೆಳಪು ಸಹಿತ ತಾಲೂಕು ವ್ಯಾಪ್ತಿಯ ಹೆಚ್ಚಿನ ಕಡೆ ಮಲ್ಲಿಗೆ ಬೆಳೆಯಲಾಗುತ್ತದೆ. 

Advertisement

ಕಾಪು: ಕಾಪು ತಾಲೂಕನ್ನು ಬ್ರ್ಯಾಂಡ್‌ ಆಗಿಸುವಲ್ಲಿ ಹೆಸರು ಮಾಡಿರುವುದು ಶಂಕರಪುರ ಮಲ್ಲಿಗೆ ಮತ್ತು ಮಟ್ಟುಗುಳ್ಳ. ಅತ್ಯಂತ ಸುವಾಸನೆ ಕಾರಣ ಶಂಕರಪುರ ಮಲ್ಲಿಗೆ ದೇಶ-ವಿದೇಶಗಳಲ್ಲಿ ಹೆಸರು ಮಾಡಿದ್ದರೆ, ಸ್ವಾದಿಷ್ಟ ರುಚಿ ಕಾರಣಕ್ಕೆ  ಮಟ್ಟುಗುಳ್ಳ ಹೆಸರು ಮಾಡಿದೆ. ಆದರೆ ಈ ಪ್ರಸಿದ್ಧ ಬೆಳೆಯ ಬೆಳೆಗಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. 

1,750 ಮಲ್ಲಿಗೆ, 165ಕ್ಕೂ 
ಅಧಿಕ ಮಟ್ಟುಗುಳ್ಳ ಬೆಳೆಗಾರರು

ತಾಲೂಕಿನಲ್ಲಿ  ಭತ್ತ ಹೊರತು ಪಡಿಸಿ, ಉತ್ತಮ ಆದಾಯ ತಂದುಕೊಡುವ ಬೆಳೆಗಳು ಮಲ್ಲಿಗೆ ಮತ್ತು ಮಟ್ಟುಗುಳ್ಳ. ಶಂಕರಪುರ ಮಲ್ಲಿಗೆಯನ್ನು ಕ್ರೈಸ್ತ ಮಿಷನರಿಗಳು ಕರಾವಳಿಗೆ ಪರಿಚಯಿಸಿದರೆ, ಮಟ್ಟುಗುಳ್ಳ ಸೋದೆ ವಾದಿರಾಜ ಶೀÅಗಳು ಮಂತ್ರಿಸಿ ನೀಡಿದ ವರಪ್ರಸಾದವೆಂದು ನಂಬಲಾಗಿದೆ. ಅಂದಾಜು 104 ಹೆಕ್ಟೇರ್‌ ಪ್ರದೇಶದಲ್ಲಿ ಮಲ್ಲಿಗೆ ಬೆಳೆಸಲಾಗುತ್ತಿದ್ದು 1,750 ಕುಟುಂಬಗಳು ಮಲ್ಲಿಗೆ ಕೃಷಿಯನ್ನು ಆಶ್ರಯಿಸಿವೆ. ಸುಮಾರು 120 ಎಕರೆ ಪ್ರದೇಶದಲ್ಲಿ ಮಟ್ಟುಗುಳ್ಳ ಬೆಳೆಯಲಾಗುತ್ತಿದ್ದು, 165ಕ್ಕೂ ಅಧಿಕ ಕುಟುಂಬಗಳು ಈ ಕೃಷಿಯನ್ನು ನೆಚ್ಚಿಕೊಂಡಿವೆ. ಮಟ್ಟುಗುಳ್ಳದ ಬೆಳೆ ಸುಮಾರು 6 ತಿಂಗಳು ಇದ್ದರೆ, ಮಲ್ಲಿಗೆ ಕೃಷಿ ವರ್ಷಪೂರ್ತಿ ಇರುತ್ತದೆ.

ಜಿಐ ಪ್ರಮಾಣಪತ್ರ 
ಶಂಕರಪುರ ಮಲ್ಲಿಗೆ ಮತ್ತು ಮಟ್ಟು ಗುಳ್ಳವನ್ನು ನಿರ್ದಿಷ್ಟ ಪ್ರದೇಶದ್ದೆಂದು ನಿಖರಪಡಿಸುವ ಜಿಯೋಗ್ರಾಫಿಕಲ್‌ ಇಂಡಿಕೇಷನ್‌ ರಿಜಿಸ್ಟ್ರಿ (ಜಿಐ ಪ್ರಮಾಣಪತ್ರ) ನೀಡಿದೆ.  ಮಟ್ಟುಗುಳ್ಳ ಬೆಳೆಗೆ 2010-2011ರಲ್ಲಿ ಜಿ.ಐ. ಸರ್ಟಿಫಿಕೇಟ್‌ – ನಂ. 199 ಮತ್ತು ಶಂಕರಪುರ ಮಲ್ಲಿಗೆಗೆ 2011-12ರಲ್ಲಿ ಜಿಐ ಸರ್ಟಿಫಿಕೇಟ್‌ -ಎಸ್‌. 92 ದೊರೆತಿದೆ. ಇದು ನಕಲಿ ಬೆಳೆ ತಡೆಯಲು ಸಹಕಾರಿಯಾಗಿದೆ. ಇದರೊಂದಿಗೆ ಮಟ್ಟುಗುಳ್ಳ ಬೆಳೆಗಾರರ ಸಂಘ ಟ್ರೇಡ್‌ ಮಾರ್ಕ್‌ ನೋಂದಣಿ ಮಾಡಿಸಿದೆ. ಮಲ್ಲಿಗೆ ಬೆಳೆಗಾರರ ಸಂಘವೂ ಟ್ರೇಡ್‌ಮಾರ್ಕ್‌ ನೋಂದಣಿ ಮಾಡಿಸಿದೆ. 

ಮಲ್ಲಿಗೆ ಬೆಳೆಗಾರರ ನಿರೀಕ್ಷೆಗಳು 
-  ಮಲ್ಲಿಗೆಗೆ ರೋಗಭಾದೆಯ ಬಗ್ಗೆ ಸಂಶೋಧನೆಗಾಗಿ ಪ್ರತ್ಯೇಕ ಸಂಶೋಧನಾ ಕೇಂದ್ರ ಸ್ಥಾಪನೆ 
– ಸರಕಾರದ ಸಹಾಯಧನ, ಸಬ್ಸಿಡಿಗಳು ಸಂಘದ ಮೂಲಕ ನೇರ ಬೆಳೆಗಾರರಿಗೆ ದೊರಕುವಂತಾಗಬೇಕು 
– ಮಾರುಕಟ್ಟೆ ವಿಸ್ತರಣೆಗೆ ಆದ್ಯತೆ, ಆಧುನಿಕ ತಂತ್ರಜ್ಞಾನದ ಶೀತಲೀಕರಣ ಕೇಂದ್ರ ಸ್ಥಾಪನೆ 
– ಮಲ್ಲಿಗೆ ರಫ್ತಿಗೆ ಪೂರಕವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ವಾಹನ ವ್ಯವಸ್ಥೆ   
– ಮಲ್ಲಿಗೆ ಸಂಗ್ರಹಣೆಗಾರು / ಮಾರುಕಟ್ಟೆಯವರಿಗೆ ರಕ್ಷಣಾ ಕೊಠಡಿ ನಿರ್ಮಾಣಕ್ಕೆ ಆದ್ಯತೆ.  

Advertisement

ಮಟ್ಟುಗುಳ್ಳ ಬೆಳೆಗಾರರ ನಿರೀಕ್ಷೆಗಳೇನು?
- ಉಪ್ಪು ನೀರು ಸಮಸ್ಯೆಗೆ ಶಾಶ್ವತ ಪರಿಹಾರ  
– ಮಟ್ಟು ಡ್ಯಾಂ ನಿರ್ಮಾಣ, ವಿಸ್ತರಣೆ 
– ತಾಲೂಕು ಕೃಷಿ ಮಾರುಕಟ್ಟೆ / ಕೃಷಿ ಸಂತೆ ಪ್ರಾರಂಭ 
– ರೈತರಿಗೆ ಆರೋಗ್ಯ ವಿಮೆ – ವಿಮಾ ಬದ್ಧತೆ ಒದಗಿಸುವುದು
– ಕೀಟ ಬಾಧೆ ಕುರಿತ ಪ್ರತ್ಯೇಕ ಸಂಶೋಧನಾ ಕೇಂದ್ರ ಸ್ಥಾಪನೆ  
– ಹಾಪ್‌ಕಾಮ್ಸ್‌ ಮಾರುಕಟ್ಟೆ ನಿರ್ಮಾಣದ ಬೇಡಿಕೆ  
– ಇಳುವರಿ ರಕ್ಷಣೆಗೆ ಶೀತಲೀಕೃತ ವ್ಯವಸ್ಥೆ 
– 60 ವರ್ಷ ದಾಟಿದ ಗುಳ್ಳ ಬೆಳೆಗಾರರಿಗೆ ವಿಶೇಷ ಆರ್ಥಿಕ ಭದ್ರತೆ 

ಶಿವಳ್ಳಿ ಮಾರುಕಟ್ಟೆ ಪ್ರಯೋಜನವಿಲ್ಲ 
ಶಿವಳ್ಳಿ ಪುಷ್ಪ ಮಾರುಕಟ್ಟೆಯಲ್ಲಿ ಮಲ್ಲಿಗೆ ಮಾರಾಟಕ್ಕೆ ಸರಕಾರ ಚಿಂತನೆ ನಡೆಸಿದೆ. ಆದರೆ ಅಲ್ಲಿ ಶೀತಲೀಕೃತ ವ್ಯವಸ್ಥೆ ಇಲ್ಲ. ಹೆಚ್ಚಿನ ಧಾರಣೆಗೆ ಶಿವಳ್ಳಿ ಮಾರುಕಟ್ಟೆಗೆ ಹೋದಲ್ಲಿ ಮಲ್ಲಿಗೆ ಬಾಡಿ/ಹಾಳಾಗಿ ಮಾರುಕಟ್ಟೆ ಮೌಲ್ಯ ಕುಸಿಯುವ ಸಾಧ್ಯತೆಗಳಿವೆ. 
– ಬಂಟಕಲ್ಲು ರಾಮಕೃಷ್ಣ ಶರ್ಮ, ಅಧ್ಯಕ್ಷರು ಮಲ್ಲಿಗೆ ಬೆಳೆಗಾರರ ಸಂಘ 

ರೋಗಬಾಧೆ: ರಕ್ಷಣೆ
ತಾಲೂಕಾದ ಬಳಿಕ ಕಾಪುವಿಗೆ ಪ್ರತ್ಯೇಕ ತೋಟಗಾರಿಕಾ ಇಲಾಖೆ ಬರುವ ಸಾಧ್ಯತೆಗಳಿದ್ದು, ಹಲವು ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ಇದೆ. ಬೆಳೆಗೆ ಉಪ್ಪು ನೀರಿನ ತೊಂದರೆ, ಹುಳ, ರೋಗಬಾಧೆಯಿಂದ ರಕ್ಷಣೆ ಬೇಕಿದೆ. ಕೃಷಿ ಮಾರುಕಟ್ಟೆ ಸಮಸ್ಯೆಗೂ ಪರಿಹಾರ ದೊರಕಬೇಕಿದೆ. 
-ದಯಾನಂದ ಬಂಗೇರ, 
ಮಟ್ಟುಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ

ಸಲಹೆ ನೀಡಿ
“ಪ್ರಗತಿ ಪಥ’ ನಮ್ಮ ಊರಿನ  ಪ್ರಗತಿಯ  ಗತಿ ಗುರುತಿಸುವ ಪ್ರಯತ್ನ.  ಕಾಪು  ತಾಲೂಕು ಪ್ರಗತಿ ಕುರಿತು ಸಲಹೆ ಗಳಿದ್ದರೆ    91485 94259ಗೆ ವಾಟ್ಸಾಪ್‌ಮಾಡಿ. ಸೂಕ್ತವಾದುದನ್ನು ಪ್ರಕಟಿಸುತ್ತೇವೆ. ನಿಮ್ಮ ಹೆಸರು, ಊರು  ಹಾಗೂ  ಭಾವಚಿತ್ರವಿರಲಿ.

– ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next