Advertisement

ಕಾರ್ಮಿಕನ ಮಗನಿಗೆ 14 ಚಿನ್ನ

06:40 AM Mar 25, 2018 | Team Udayavani |

ಬಾಗಲಕೋಟೆ: ತಂದೆ, ತಾಯಿ ಕೂಲಿ ಕಾರ್ಮಿಕರು. ಮಗನಿಗೆ ಉನ್ನತ ಶಿಕ್ಷಣ ಕಲಿಸುವ ಆಸೆ ಇದ್ದರೂ ಆರ್ಥಿಕ ಸಮಸ್ಯೆ. ಆಗ ಆ ಪ್ರತಿಭಾವಂತನ ಕೈ ಹಿಡಿದವರು ಅತ್ತೆ, ಮಾವ. ಅವರ ಆಶ್ರಯದಲ್ಲೇ ಬೆಳೆದ ಆ ಹುಡುಗನಿಗೆ ಈಗ ಬರೋಬ್ಬರಿ 14 ಚಿನ್ನದ ಪದಕ ಪಡೆದ ಖುಷಿ.

Advertisement

ಆ ಪ್ರತಿಭಾವಂತ ವಿದ್ಯಾರ್ಥಿ ಹೆಸರು ರವಿಕಿರಣ ಎ.ಆರ್‌. ಈತನ ಮೂಲ ರಾಮನಗರ ಜಿಲ್ಲೆಯ ಅದೂರು. ತಂದೆ ರಾಜಣ್ಣ, ತಾಯಿ ಗಂಗಮ್ಮ ಅವರೊಂದಿಗೆ ಬೆಂಗಳೂರು ನಗರ ಜಿಲ್ಲೆ ಆನೇಕಲ್‌ ತಾಲೂಕಿನ ಕಚನಾಯಕನಹಳ್ಳಿಯಲ್ಲಿ ವಾಸವಾಗಿದ್ದಾರೆ.

ಅಲ್ಲಿಯೇ ಎಂಟಿಆರ್‌ ಕಂಪನಿಯಲ್ಲಿ ಕೂಲಿ ಕಾರ್ಮಿಕರಾಗಿ ತಂದೆ, ತಾಯಿ ಕೆಲಸ ಮಾಡಿಕೊಂಡಿದ್ದಾರೆ. ರವಿಕಿರಣಗೆ ರಾಧಮ್ಮ ಎಂಬ ಸಹೋದರಿ ಇದ್ದು, ಅವಳು ಲ್ಯಾಬ್‌ ಟೆಕ್ನಿಶಿಯನ್‌ ಆಗಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಳೆ.

ರವಿಕಿರಣ ಅವರು ಬೆಂಗಳೂರು ಹೆಬ್ಬಗೋಡಿಯ ಸೆಂಟ್‌ ಮೇರಿಸ್‌ ಇಂಗ್ಲಿಷ್‌ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿ, ಚಂದಾಪುರದ ಸ್ವಾಮಿ ವಿವೇಕಾನಂದ ಗ್ರಾಮೀಣ ಪಿಯು ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದಿದ್ದಾರೆ. ದ್ವಿತೀಯ ಪಿಯು ಬಳಿಕ ವೈದ್ಯರಾಗಬೇಕೆಂಬ ಆಸೆ ಇತ್ತಾದರೂ, ಸರ್ಕಾರಿ ಕೋಟಾದಡಿ ಸೀಟು ಸಿಗಲಿಲ್ಲ. ಬಳಿಕ, ಬಿಎಸ್ಸಿಗೆ (ತೋಟಗಾರಿಕೆ) ಸೇರಿದರು. ಈಗ ಅವರಿಗೆ 14 ಚಿನ್ನದ ಪದಕ ಬಂದಿದೆ. ಸದ್ಯ ರವಿಕಿರಣ,ಬೆಂಗಳೂರಿನ ಜಿಕೆವಿಕೆಯಲ್ಲಿ ಎಂಎಸ್ಸಿ ವಂಶವಾಯಿ ವಿಜ್ಞಾನ (ಜನಟಿಕ್‌ ಸೈನ್ಸ್‌)ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಮುಂದೆ ಕೃಷಿ ಸಂಶೋಧಕರಾಗಿ, ರೈತ ಮಿತ್ರನಾಗಬೇಕೆಂಬ ಗುರಿ ಹೊಂದಿದ್ದಾರೆ.

ತೋಟಗಾರಿಕೆ ವಿವಿ ಘಟಿಕೋತ್ಸವ
ಬಾಗಲಕೋಟೆ
: ರಾಜ್ಯದ 23 ಜಿಲ್ಲೆಯ ವ್ಯಾಪ್ತಿ ಹೊಂದಿರುವ ದೇಶದ 2ನೇ ಅತಿ ದೊಡ್ಡ ತೋಟಗಾರಿಕೆ ವಿವಿ ಎಂಬ ಖ್ಯಾತಿ
ಪಡೆದ ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ 7ನೇ ಘಟಿಕೋತ್ಸವ ಶನಿವಾರ ನಡೆಯಿತು. ಘಟಿಕೋತ್ಸವದಲ್ಲಿ
22 ಜನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 55 ಚಿನ್ನದ ಪದಕ ನೀಡಲಾಯಿತು.

Advertisement

ತೋಟಗಾರಿಕೆ ವಿವಿಯ ಸಹ ಕುಲಾಧಿಪತಿಯೂ ಆಗಿರುವ ತೋಟಗಾರಿಕೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ಪದವಿ ಪ್ರದಾನ ಮಾಡಿದರು. ನವ ದೆಹಲಿಯ ಭಾರತೀಯ ಕೃಷಿ ಅನು ಸಂಧಾನ ಪರಿಷತ್‌ ಮತ್ತು ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯ ಮಾಜಿ ಅಧ್ಯಕ್ಷ ಡಾ|ಸಿ.ಡಿ. ಮಾಯಿ, ಘಟಿಕೋತ್ಸವ ಭಾಷಣ ಮಾಡಿದರು. ವಿವಿಯ ಕುಲಪತಿ ಡಾ|ಡಿ.ಎಲ್‌. ಮಹೇಶ್ವರ ಅವರು ವಿವಿಯ ಪ್ರಗತಿ ವರದಿ ವಾಚಿಸಿದರು.

ವೈದ್ಯರ ಮಗಳಿಗೆ 7 ಚಿನ್ನದ ಪದಕ: ಸ್ವಂತ ಭೂಮಿ ಇಲ್ಲ. ಕೃಷಿ, ತೋಟಗಾರಿಕೆ ಅಂದ್ರೆ ಗೊತ್ತೂ ಇಲ್ಲ. ಆದರೂ, ಸತತ ಅಧ್ಯಯನ, ಪ್ರಾಯೋಗಿಕ ತೋಟಗಾರಿಕೆ ಮೂಲಕ ತೋಟಗಾರಿಕೆ ಎಂಎಸ್ಸಿಯಲ್ಲಿ 7 ಚಿನ್ನದ ಪದಕ ಪಡೆದ ಸಂಭ್ರಮ. ಜಾರ್ಖಂಡ್‌ನ‌ ಹಾಜಾರಿಬಾಗ್‌ ಜಿಲ್ಲೆಯ ಬಾಹ್ರಿ ಗ್ರಾಮದ ನುಸ್ರತ್‌ ಪರ್ವೀಣ ತಂದೆ ನಿಜಾಮುದ್ದೀನ್‌ ವೈದ್ಯರು. ತಾಯಿ ಶಕೀಲಾ ಖಾತೂನ್‌ ಗೃಹಿಣಿ. ತಂದೆ, ತನ್ನಂತೆಯೇ ನೀನೂ ವೈದ್ಯಳಾಗು ಎಂದರು. ಆದರೆ, ನುಸ್ರತ್‌ ಪರ್ವೀಣಗೆ ಕೃಷಿ ಮತ್ತು ತೋಟಗಾರಿಕೆ ಅಂದ್ರೆ ಅಚ್ಚು ಮೆಚ್ಚು. ಹೀಗಾಗಿ, ಬಾಗಲ ಕೋಟೆಯ ತೋಟಗಾರಿಕೆ ವಿವಿಯಲ್ಲಿ ಎಂಎಸ್ಸಿ (ಹಣ್ಣು ವಿಜ್ಞಾನ) ಮಾಡಿ, ಈಗ ಇಡೀ ವಿವಿಗೆ ಎಂಎಸ್ಸಿಯಲ್ಲಿ ಮೊದಲ ರ್‍ಯಾಂಕ್‌ ಪಡೆದು, 7 ಚಿನ್ನದ ಪದಕ ಪಡೆದಿದ್ದಾಳೆ. ಸದ್ಯ ಹೆಸರುಘಟ್ಟ ಕೃಷಿ ಸಂಶೋಧನೆಯಲ್ಲಿ ಪಿಎಚ್‌.ಡಿ ಅಧ್ಯಯನ ಮಾಡುತ್ತಿದ್ದು, ಬಳಿಕ ತೋಟಗಾರಿಕೆ ಕೃಷಿ ವಿಜ್ಞಾನಿಯಾಗಿ ಕೆಲಸ ಮಾಡುವ ಬಯಕೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next