ಡೊಂಬಿವಲಿ, ಮಾ. 24 : ಕೋವಿಡ್ ಮಹಾಮಾರಿಯಿಂದ ಉದ್ಯೋಗ, ಉದ್ಯಮ ಕ್ಷೇತ್ರ ಸಂಪೂರ್ಣವಾಗಿ ಮುಗ್ಗರಿಸಿದ್ದು, ಇದರಿಂದ ಆರ್ಥಿಕ ಕ್ಷೇತ್ರವು ತಲ್ಲಣಗೊಂಡಿದೆ. ಇಂತಹ ಸಂಕಷ್ಟದ ಸಮಯದಲ್ಲಿಯೂ ಡೊಂಬಿವಲಿ ಹೊರನಾಡ ಕನ್ನಡಿಗರ ಪ್ರತಿಷ್ಠಿತ ಆರ್ಥಿಕ ಸಂಸ್ಥೆಗಳಲ್ಲಿ ಒಂದಾದ ತುಳುಶ್ರೀ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯ ಪ್ರಶಂಸನೀಯವಾಗಿದೆ ಎಂದು ತುಳುಶ್ರೀ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷೆ ಪ್ರತಿಭಾ ಕರ್ಕೇರ ತಿಳಿಸಿದರು.
ಮಾ. 21ರಂದು ಸಂಜೆ ಡೊಂಬಿವಲಿ ಪೂರ್ವದ ಅಗರ್‌ವಾಲ್ ಸಭಾಗೃಹದಲ್ಲಿ ನಡೆದ ತುಳುಶ್ರೀ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ 21ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿರಿಯರ ಮಾರ್ಗದರ್ಶನ, ಆಡಳಿತ ಮಂಡಳಿಯ ಸದಸ್ಯರ ಅಮೂಲ್ಯ ಸಹಕಾರದಿಂದ ಸಂಸ್ಥೆ ಪ್ರಗತಿ ಪಥದಲ್ಲಿ ಸಾಗಿ ರಜತ ಮಹೋತ್ಸವದತ್ತ ದಾಪುಗಾಲು ಹಾಕುತ್ತಿರುವುದು ಸಂತೋಷದ ಸಂಗತಿ. ಪ್ರಸಕ್ತ ವರ್ಷ ನಮ್ಮ ಸದಸ್ಯರಿಗೆ ಶೇ. 6ರಷ್ಟು ಲಾಭಾಂಶ ನೀಡುವುದಾಗಿ ಘೋಷಿಸಿದ ಅವರು, ಗ್ರಾಹಕರ ಸಹಾಯ, ಸಹಕಾರ ಸದಾಯಿರಲಿ ಎಂದು ಶುಭ ಹಾರೈಸಿದರು.
ಮಹಾಸಭೆಯಲ್ಲಿ ಸಂಸ್ಥೆಯ 20ನೇ ವಾರ್ಷಿಕ ವರದಿಯನ್ನು ಸಂಸ್ಥೆಯ ಕಾರ್ಯದರ್ಶಿ ಲಕ್ಷ್ಮಣ್ ಸುವರ್ಣ ವಾಚಿಸಿದರು. ಹಿರಿಯ ಸದಸ್ಯ ರವಿ ಸನಿಲ್ ಸೂಚಿಸಿದರೆ, ಪ್ರಕಾಶ ಅಮೀನ್ ಅವರು ವಾರ್ಷಿಕ ವರದಿಯನ್ನು ಅನುಮೋದಿಸಿದರು. 2019-2020ನೇ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಲಕ್ಷ್ಮಣ್ ಸುವರ್ಣ ಸಭೆಯಲ್ಲಿ ಮಂಡಿಸಿದರು. ಹಿರಿಯ ಸದಸ್ಯ ವಸಂತ ಸುವರ್ಣ ಅವರ ಸೂಚನೆಯೊಂದಿಗೆ ಗಂಗಾಧರ ಶೆಟ್ಟಿಗಾರ್ ಅವರು ಅನುಮೋದಿಸಿದರು. 2019-2020ನೇ ಸಾಲಿನ ಮಾರ್ಚ್‌ವರೆಗಿನ ಲೆಕ್ಕಪತ್ರವನ್ನು ಕೋಶಾಧಿಕಾರಿ ನಾರಾಯಣ ಪೂಜಾರಿ ಮಂಡಿಸಿದ್ದು, ಜಾರ್ಜ್ ಅವರ ಸೂಚನೆಯೊಂದಿಗೆ ವಿನೋದಾ ಶೆಟ್ಟಿ ಅನುಮೋದಿಸಿದರು.
ಸಭೆಯಲ್ಲಿ 2020-2021ನೇ ಸಾಲಿನ ಆಂತರಿಕ ಲೆಕ್ಕ ಪರಿಶೋಧಕಕ ರಾಗಿ ಮೆ| ಯು. ಪಿ. ಪೈ ಹಾಗೂ ಬಾಹ್ಯ ಲೆಕ್ಕ ಪರಿಶೋಧಕರಾಗಿ ಪ್ರಕಾಶ್ ನಿಕಮ್ ಅವರನ್ನು ಹಿರಿಯ ಸದಸ್ಯ ವಸಂತ ಸುವರ್ಣ ಅವರ ಸೂಚನೆಯ ಮೇರೆಗೆ ಅನುಮೋದಿಸಲಾಯಿತು. ಮಹಾಸಭೆಯಲ್ಲಿ ಗಣ್ಯರಾದ ಎಂ. ಪಿ. ಪೈ, ಯು. ಪಿ. ಪೈ, ದೇವದಾಸ್ ಕುಲಾಲ್ ಮೊದಲಾದವರು ಸೊಸೈಟಿಯ ಕಾರ್ಯವೈಖರಿಯನ್ನು ಅಭಿನಂದಿಸಿ ಸಲಹೆ-ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಸದಸ್ಯ, ಸಮಾಜ ಸೇವಕರಾದ ಮೋಹನದಾಸ ಪೈ ಅವರ 75ನೇ ಹುಟ್ಟುಹಬ್ಬದ ಪ್ರಯುಕ್ತ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು. ವಿನೋದಾ ಶೆಟ್ಟಿ ಸಮ್ಮಾನಿತರನ್ನು ಪರಿಚಯಿಸಿದರು. ವಸಂತ ಸುವರ್ಣ ಅವರು ಮೋಹನದಾಸ ಪೈ ಅವರ ಸಾಧನೆಗಳನ್ನು ವಿವರಿಸಿದರು. ಇದೇ ಸಂದರ್ಭ ಸಂಸ್ಥೆಯ ವತಿಯಿಂದ ನಡೆದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಅಂಜಲಿ ತೋರವಿ, ಪ್ರಿಯಾಂಕಾ ಕೋಟ್ಯಾನ್, ಹೇಮಾ ಹೆಗಡೆ, ಸಮಾಧಾನಕರ ಬಹುಮಾನ ಪಡೆದ ಶ್ವೇತಾ ಶೆಟ್ಟಿ ಹಾಗೂ ಕೀರ್ತನ್ ಪ್ರಭು ಅವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು.
ಗಣ್ಯರಾದ ಪ್ರತಿಭಾ ಕರ್ಕೇರ, ಯು. ಲಕ್ಷ್ಮಣ್ ಸುವರ್ಣ, ನಾರಾಯಣ ಪೂಜಾರಿ, ಎಂ. ಪಿ. ಪೈ, ದೇವದಾಸ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು. ಕೋವಿಡ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಮಹಾಸಭೆಯನ್ನು ನಡೆಸಲಾಯಿತು. ದೇವದಾಸ್ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.