ಬಾಗಲಕೋಟೆ: ಸಮಾಜದ ರಕ್ಷಣೆಯಲ್ಲಿ ತೊಡಗಿರುವ ಪೊಲೀಸರ ಕಾರ್ಯ ಶ್ಲಾಘನೀಯವಾದುದು ಎಂದು ನಿವೃತ್ತ ಆರ್.ಎಸ್ .ಐ ಎಂ.ಎಚ್. ಗುಡದಿನ್ನಿ ಹೇಳಿದರು.
ನವನಗರದ ಪೊಲೀಸ್ ಕವಾಯತ ಮೈದಾನದಲ್ಲಿ ಹಮ್ಮಿಕೊಂಡ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಸಮಾಜದ ಸುರಕ್ಷತೆಯ ಹೊಣೆಹೊತ್ತು ಕಾರ್ಯನಿರ್ವಹಿಸುತ್ತಿರುವ ಪೊಲೀಸ್‌ರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವ ಮೂಲಕ ಇಲಾಖೆಗೆ ಗೌರವ ತರುವ ಕೆಲಸ ಮಾಡಬೇಕು. ರಕ್ಷಣೆಯಲ್ಲಿ ಪೊಲೀಸ್ ವೃತ್ತಿ ಮಹತ್ವವಾಗಿದೆ. ಸೇವೆಯಿಂದ ನಿವೃತ್ತಿಗೊಂಡ ನಂತರ ನೆನಪಿಸಿಕೊಳ್ಳುವ ದಿನವಾಗಿದೆ. ಪೊಲೀಸ ವೃತ್ತಿಯಿಂದ ನಿವೃತ್ತರಾಗಬೇಕೇ ವಿನಃ ಕರ್ತವ್ಯ ಪ್ರಜ್ಞೆಯಿಂದಲ್ಲ ಎಂದು ಹೇಳಿದರು. ತುರ್ತು ಸಂದರ್ಭದಲ್ಲಿಯೂ ನಿವೃತ್ತರಾದವು ಕರ್ತವ್ಯಕ್ಕೆ ಸಿದ್ಧರಾಗಿರಬೇಕು. ತಮ್ಮ 40 ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ ನಿರ್ವಹಿಸಿದ ಕಾರ್ಯ ತಿಳಿಸಿದರು.
ತಮ್ಮ ಸೇವೆಯನ್ನು ಗುರುತಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮಾತನಾಡಿ, ಪ್ರಾಣದ ಹಂಗು ತೊರೆದು ಸಾರ್ವಜನಿಕರ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳ ರಕ್ಷಣೆಗೆ ಇಲಾಖೆ ಬದ್ಧವಾಗಿದೆ. ಈ ವಿಶೇಷ ದಿನದಂದು ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ನೆನಪಿಸಿ ಅವರ ಸೇವೆಯನ್ನು ಸ್ಮರಿಸುವುದಾಗಿದೆ. ಕಳೆದ ಸಾಲಿನಲ್ಲಿ ನಿವೃತ್ತ ಪೊಲೀಸ್ ಕಲ್ಯಾಣ ನಿಧಿಯಿಂದ ವೈದ್ಯಕೀಯ ವೆಚ್ಚಕ್ಕಾಗಿ 6,76,988 ರೂ.ಗಳ ಸಹಾಯಧನ ಹಾಗೂ 19 ಜನ ನಿವೃತ್ತ ಪೊಲೀಸರಿಗೆ ಚಿಕಿತ್ಸೆ ಒದಗಿಸಲಾಗಿದೆ ಎಂದರು.
ಆರೋಗ್ಯ ಭಾಗ್ಯ ಯೋಜನೆಯಡಿ ಪೊಲೀಸ್ ಸಿಬ್ಬಂದಿ ಹಾಗೂ ಅವರ ಅವಲಂಬಿತ 280 ಕುಟುಂಬ ಸದಸ್ಯರಿಗೆ ವೈದ್ಯಕೀಯ ಚಿಕಿತ್ಸೆ, 3.09 ಲಕ್ಷ ರೂ. ಗಳ ಶೈಕ್ಷಣಿಕ ಸಹಾಯಧನ, 11.50 ಸಾವಿರ ರೂ. ಗಳ ಸಹಾಯಧನ ನೀಡಲಾಗಿದೆ. ಕರ್ತವ್ಯದಲ್ಲಿದ್ದಾಗ ಮೃತಪಟ್ಟ 6 ಜನರ ಅಂತ್ಯಸಂಸ್ಕಾರಕ್ಕೆ 60 ಸಾವಿರ ರೂ. ನೀಡಲಾಗಿದೆ. ಮುಧೋಳದಲ್ಲಿ ಆಧುನಿಕ ಸುಸಜ್ಜಿತ ಪೊಲೀಸ್ ಸಮುದಾಯ ಭವನ ಸೇರಿದಂತೆ ಅನೇಕ ಕಲ್ಯಾಣ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಸಿಬ್ಬಂದಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು.