Advertisement

ಮಾನವೀಯತೆ ಮೂಡಿಸುವುದು ಸಾಹಿತ್ಯದ ಕೆಲಸ: ಡಾ|ವಿಶ್ವನಾಥ ಕಾರ್ನಾಡ್‌

01:17 PM Mar 21, 2021 | Team Udayavani |

ಮುಂಬಯಿ: ನನಗೆ ಜೀವನದಲ್ಲಿ ಹಣ ಸಂಪಾದಿಸುವ ಅನೇಕ ದಾರಿಗಳು ತೆರೆದುಕೊಂಡಿದ್ದರೂ ನಾನು ಆಯ್ದುಕೊಂಡದ್ದು ಅಧ್ಯಯನ, ಅಧ್ಯಾಪನದ ಕ್ಷೇತ್ರವನ್ನು. ಓದು ಮನುಷ್ಯನನ್ನು ಸಂಸ್ಕಾರಿಯನ್ನಾಗಿಸುತ್ತದೆ. ಸಾಹಿತ್ಯದ ಕೆಲಸ ಮಾನವೀಯತೆಯನ್ನು ಮೂಡಿಸುತ್ತದೆ. ಇದರಿಂದ ನಯ, ವಿನಯ, ಕರುಣೆ, ದಯೆ ನಮ್ಮಲ್ಲಿ ಮೂಡುತ್ತದೆ. ಹಾಗಂತ ನಾನು ಸಾಹಿತಿ ಅಲ್ಲ, ಬರಹಗಾರ ಮಾತ್ರ ಎಂದು ಹೇಳಬಯಸುತ್ತೇನೆ. ನಾನು ನನ್ನ ಖುಷಿಗಾಗಿ ಬರೆದು ಬರಹಗಾರ ಎನಿಸಿಕೊಂಡವನು ಎಂದು ನಿವೃತ್ತ ಪ್ರಾಧ್ಯಾಪಕ ಡಾ| ವಿಶ್ವನಾಥ ಕಾರ್ನಾಡ್‌ ಅವರು ನುಡಿದರು.

Advertisement

ಅವರು ಮಾ. 16ರಂದು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಆನ್‌ಲೈನ್‌ ಮೂಲಕ ಆಯೋಜಿಸಿದ್ದ ಡಾ| ವಿಶ್ವನಾಥ ಕಾರ್ನಾಡ ಸಾಹಿತ್ಯ ಸಂಭ್ರಮದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಾಹಿತಿಗಳು ಎಂದಿಗೂ ಶ್ರೀಮಂತರಾಗುವುದಿಲ್ಲ. ನಾನು ಸುಮಾರು 40 ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಎಂಎ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದೇನೆ. ಸದ್ಯ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಗುಣಮಟ್ಟದ ಅಧ್ಯಾಪನ, ಅಧ್ಯಯನ, ಸಂಶೋಧನೆಯನ್ನು ನೋಡಿ ಸಂತೋಷವಾಗುತ್ತದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಡಾ| ಜಿ. ಎನ್‌. ಉಪಾಧ್ಯ ಅವರಂತಹ ಸಮರ್ಥ ಮಾರ್ಗದರ್ಶಕರಿದ್ದಾರೆ. ಒಳ್ಳೆಯ ಪ್ರತಿಭಾವಂತ ವಿದ್ಯಾರ್ಥಿ ವರ್ಗವಿದೆ. ಆದ್ದರಿಂದ ಇದೊಂದು ಶ್ರೀಮಂತ ವಿಭಾಗವಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾರ್ನಾಡರ ಕನ್ನಡ ಪರಿಚಾರಿಕೆಯ ಕುರಿತು ಮಾತನಾಡಿದ ವಿಭಾಗದ ಮುಖ್ಯಸ್ಥರಾದ ಡಾ| ಜಿ. ಎನ್‌. ಉಪಾಧ್ಯ ಅವರು, ಡಾ| ವಿಶ್ವನಾಥ ಕಾರ್ನಾಡರು ಸಾಂಸ್ಕೃತಿಕ ಪರಿಚಾರಿಕೆಯಲ್ಲಿ ತೊಡಗಿಸಿಕೊಂಡವರು. ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೈಯಾಡಿಸಿದ್ದಾರೆ. ಕಾವ್ಯದ ಮುಖಾಂತರ ಅವರು ಬರವಣಿಗೆಯನ್ನು ಆರಂಭಿಸಿದರು. ಲವಲವಿಕೆಯ ಕವಿತೆಗಳನ್ನು ಬರೆಯುವ ಸಾಮರ್ಥ್ಯ ಇದ್ದರೂ ಅವರು ಕಥೆಗಳನ್ನು ಬರೆಯುವುದರತ್ತ ತನ್ನ ಒಲವನ್ನು ತೋರಿಸಿದರು. ಸುಮಾರು 50 ಕಥೆಗಳನ್ನು ಅವರು ಬರೆದಿದ್ದು, ವಿಶೇಷವಾಗಿ ಮುಂಬಯಿ ಕೇಂದ್ರಿತ ಕಥೆಗಳು ಗಮನಸೆಳೆಯುತ್ತವೆ. ಕಾರ್ನಾಡರು ಒಳ್ಳೆಯ ಅನುವಾದಕರೂ ಹೌದು. ಅನೇಕ ಭಾಷೆಗಳಲ್ಲಿ ಅವರಿಗೆ ಹಿಡಿತವಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕŒƒತ ಪ್ರತಿಭಾರೇ ಅವರ ಒಡಿಸ್ಸಿ ಕಾದಂಬರಿ ಯಾಜ್ಞಸೇನಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಸಂಶೋಧಕರಾಗಿ, ವಿಮರ್ಶಕರಾಗಿಯೂ ಅವರು ಹೆಸರಾಗಿದ್ದಾರೆ. ಅವರ ತುಳುವರ ಮುಂಬಯಿ ವಲಸೆ ಬಹುಮುಖ್ಯ ಆಕರಗ್ರಂಥ ಎಂದು ಅನೇಕ ಅಗ್ನಿದಿವ್ಯಗಳನ್ನು ಹಾದು ಬಂದ ಕಾರ್ನಾಡರ ಸಾಂಘಿಕ, ಸಾಹಿತ್ಯಿಕ ಕಾರ್ಯಗಳ ಕುರಿತು ಬೆಳಕು ಚೆಲ್ಲಿದರು.

ಇದೇ ಸಂದರ್ಭದಲ್ಲಿ ಡಾ| ವಿಶ್ವನಾಥ ಕಾರ್ನಾಡರು ರಚಿಸಿದ ಕೃತಿಗಳ ಸಮೀಕ್ಷೆ ಮಾಡಲಾಯಿತು. ವಿಭಾಗದ ಸಹಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ತುಳುವರ ಮುಂಬಯಿ ವಲಸೆ ಕೃತಿ, ವಿದ್ಯಾರ್ಥಿ ಮಿತ್ರರಾದ ಕಲಾ ಭಾಗÌತ್‌ ಅವರು ಸಮಾಲೋಕ ಅಭಿನಂದನ ಗ್ರಂಥ, ರುದ್ರಮೂರ್ತಿ ಪ್ರಭು ಅವರು ಕಾರ್ನಾಡರ ಲೇಖನಗಳ ಸಂಗ್ರಹ ಸಮಚಿಂತನ ಹಾಗೂ ಅನಿತಾ ಪೂಜಾರಿ ತಾಕೋಡೆ ಅವರು ಕಾರ್ನಾಡರ ನಿರಂತರ ಕವನ ಸಂಕಲನದ ಕುರಿತು ಮಾತನಾಡಿದರು.

ಶಾಲಿನಿ ಡಿ. ಕೆ ಅವರು ಕಥಾಸಂಕಲನ ಮೌನಸೆಳೆತದ ಡಾ| ಮಮತಾ ರಾವ್‌ ಅವರ ಲೇಖನ ಮತ್ತು ಡಾ| ಜ್ಯೋತಿ ಸತೀಶ್‌ ಅವರು ಯಾಜ್ಞಸೇನಿಯ ಕುರಿತು ಡಾ| ಮುರಳೀಧರ ಉಪಾಧ್ಯಾಯ ಹಿರಿಯಡಕ ಅವರ ಲೇಖನಗಳನ್ನು ವಾಚಿಸಿದರು. ಡಾ| ಜೀವಿ ಕುಲಕರ್ಣಿ ವಿರಚಿತ ಸುನೀತವನ್ನು ಗೀತಾ ಮಂಜುನಾಥ್‌ ಅವರು ಪ್ರಸ್ತುತಪಡಿಸಿದರು. ಕಾರ್ನಾಡ್‌ ಅವರ ಆಯ್ದ ಎರಡು ಕಥೆಗಳನ್ನು ಶಶಿಕಲಾ ಹೆಗಡೆ ಹಾಗೂ ಲೇಖಕ ಪೇತ್ರಿ ವಿಶ್ವನಾಥ ಶೆಟ್ಟಿ ಅವರು ವಾಚಿಸಿದರು. ನಳಿನಾ ಪ್ರಸಾದ್‌ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next