Advertisement

ವಿದ್ಯುತ್‌ ಕೈ ಕೊಟ್ಟರೆ ಕೆಲಸಗಳು ಸ್ತಬ್ಧ

11:07 AM Nov 18, 2019 | Suhan S |

ಗುಳೇದಗುಡ್ಡ: ಪಟ್ಟಣದ ತಹಶೀಲ್ದಾರ್‌ ಕಚೇರಿ, ಉಪನೋಂದಣಿ ಕಚೇರಿ, ಪುರಸಭೆ ಕಚೇರಿಗಳಿಗೆನಿತ್ಯ ಒಂದಿಲ್ಲೊಂದು ಕೆಲಸಗಳಿಗೆ ನೂರಾರು ಜನರು ಬರುತ್ತಿದ್ದು, ವಿದ್ಯುತ್‌ ಕೈ ಕೊಟ್ಟರೆ ಮಾತ್ರ ಕಚೇರಿಗಳು ಸ್ತಬ್ದವಾಗಿ ಬಿಡುತ್ತವೆ. ಕಚೇರಿಗಳಲ್ಲಿ ಯುಪಿಎಸ್‌ ಸೌಲಭ್ಯ ಇಲ್ಲದೇ ಇರುವುದರಿಂದ ಜನರು ಕಚೇರಿಗಳಿಗೆ ಅಲೆಯುವುದು ತಪ್ಪುತ್ತಿಲ್ಲ. ತಹಶೀಲ್ದಾರ್‌ ಕಚೇರಿಯಲ್ಲಿ ವಿದ್ಯುತ್‌ ವ್ಯತ್ಯಯವಾದರೆ ತೊಂದರೆಯಾಗಬಾರದೆಂದು ಜನರೇಟರ್‌ ಅಳವಡಿಸಲಾಗಿದೆ. ಅದು ಕೆಟ್ಟು ತಿಂಗಳು ಕಳೆದಿದೆ. ದುರಸ್ತಿಗೆ ಇದುವರೆಗೂ ಯಾರೊಬ್ಬರೂ ಗಮನ ಹರಿಸಿಲ್ಲ.

Advertisement

ಹಳೇ ತಹಶೀಲ್ದಾರ್‌ ಕಚೇರಿ ಮುಂದೆ ಇದ್ದ ಜನರೇಟರ್‌ ಅನ್ನು ಬಾದಾಮಿ ನಾಕಾ ಹತ್ತಿರದ ಹೊಸ ತಹಶೀಲ್ದಾರ್‌ ಕಚೇರಿಗೆ ಸ್ಥಳಾಂತರಿಸಲಾಗಿದೆ. ಆದರೆ ಇದುವರೆಗೂ ಅದಕ್ಕೆ ಕನೆಕ್ಷನ್‌ ಕೊಟ್ಟಿಲ್ಲ. ಇನ್ನೂ ಉಪನೋಂದಣಿ ಕಚೇರಿಯಲ್ಲಿ ವಿದ್ಯುತ್‌ ವ್ಯತ್ಯಯವಾದರೆ ಭೂ ಖರೀದಿ, ಹೆಸರು ಬದಲಾವಣೆ ಸಂಬಂಧಿತ ಕೆಲಸಗಳೆಲ್ಲವು ಸ್ಥಗಿತಗೊಳ್ಳುತ್ತವೆ.

ಕಚೇರಿಯಲ್ಲಿ ಬ್ಯಾಟರಿ ವ್ಯವಸ್ಥೆಯಿದೆ. ಆದರೆ ಕಳೆದ ಕೆಲ ದಿನಗಳ ಹಿಂದೆ ಸುಟ್ಟು ಹೋಗಿದೆ. ಹೀಗಾಗಿ ವಿದ್ಯುತ್‌ ಕೈ ಕೊಟ್ಟಾಗ ಕಚೇರಿಯಲ್ಲಿ ಕೆಲಸಗಳು ನಿಲ್ಲುತ್ತವೆ. ಕಚೇರಿಯಲ್ಲಿ ಸದ್ಯ ಒಂದು ಜನರೇಟರ್‌ ವ್ಯವಸ್ಥೆ ಮಾಡಿದ್ದು, ಅದಕ್ಕೆ ಡಿಸೇಲ್‌ ಹಾಕಿ ಕಚೇರಿ ಕೆಲಸಗಳಿಗೆ ತೊಂದರೆಯಾಗದಂತೆ ಮಾಡಿದ್ದಾರೆ. ಆದರೆ ಡಿಸೇಲ್‌ ಸಮಸ್ಯೆ ತಲೆದೋರಿದಾಗ ಕೆಲಸ ಸ್ಥಗಿತಗೊಳ್ಳುತ್ತದೆ. ಉಪ ನೋಂದಣಿ ಕಚೇರಿಯಲ್ಲಿ ಹೊಸ ಟೆಂಡರ್‌ ಕರೆಯಬೇಕಿದೆ. ಆ ಟೆಂಡರ್‌ ಕರೆಯದೇ ಇರುವುದರಿಂದ ಕಚೇರಿಯಲ್ಲಿ ಸುಟ್ಟು ಹೋದ ಬ್ಯಾಟರಿ ಬದಲಿಸಿ, ಕನೆಕ್ಷನ್‌  ಕೊಡಲು ಸಾಧ್ಯವಾಗಿಲ್ಲ. ಟೆಂಡರ್‌ ಕರೆದರೆ ಈ ಸಮಸ್ಯೆ ಬಗೆಹರಿಯಲಿದೆ ಎಂಬುದು ಅಧಿಕಾರಿಗಳ ಮಾತು.

ಪುರಸಭೆಯಲ್ಲೂ ಇಲ್ಲ ಯುಪಿಎಸ್‌: ಪಟ್ಟಣದ ಎಲ್ಲ ಜನರ ಮುಖ್ಯ ಸೇವೆಗಳು ಸಿಗುವುದೇ ಪುರಸಭೆಯಲ್ಲಿ. ಆದರೆ, ಇಲ್ಲಿ ಸರಿಯಾದ ಯುಪಿಎಸ್‌ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯುತ್‌ ಕೈ ಕೊಟ್ಟಾಗ ಜನರಿಗೆ ನಿತ್ಯ ನೀಡುವ ಸೇವೆಗಳಿಗೆ ತೊಂದರೆಯಾಗುತ್ತಿದೆ. ಪುರಸಭೆಯಲ್ಲಿ ಕಿರಿಯ ಅಭಿಯಂತರರ ವಿಭಾಗಕ್ಕೆ ಬ್ಯಾಟರಿಯಿದೆ. ಅಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಜನನ-ಮರಣ, ನೀರಿನ ಕರ ಸೇರಿದಂತೆ ಆನ್‌ಲೈನ್‌ ಸಂಬಂಧಿ ಕೆಲಸಗಳ ವಿಭಾಗಕ್ಕೆ ಯುಪಿಎಸ್‌ ಇಲ್ಲ. ಇದರಿಂದ ಕರೆಂಟ್‌ ಹೋದಾಗ ಕೆಲಸಗಳು ಸ್ಥಗಿತಗೊಳ್ಳುತ್ತಿವೆ. ಎಲ್ಲವೂ ಕಂಪ್ಯೂಟರೀಕರಣ ಗೊಂಡಿರುವುದರಿಂದ ವಿದ್ಯುತ್‌ ಅವಶ್ಯವಿದ್ದು, ಕಚೇರಿಗೆ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ಅಳವಡಿಸಿದರೆ ಸೇವೆ ನೀಡುವಲ್ಲಿ ಯಾವುದೇ ತೊಂದರೆಯಾಗಲ್ಲ ಎಂಬುದು ಸಾರ್ವಜನಿಕರ ಮಾತು.

ಯಾವ್ಯಾವ ಸೇವೆಗಳಿಗೆ ತೊಂದರೆ: ತಹಶೀಲ್ದಾರ್‌ ಕಚೇರಿಯಲ್ಲಿ ಕರೆಂಟ್‌ ಹೋದರೆ ಅಟಲ್‌ಜಿ ಜನಸ್ನೇಹಿ ಕೇಂದ್ರದಲ್ಲಿ ಜಾತಿ ಆದಾಯ, ವಾರಸಾ ಸೇರಿದಂತೆ ಸಾಮಾಜಿಕ ಭದ್ರತಾ ಸೇವೆಗಳು ಅಷ್ಟೇ ಅಲ್ಲದೇ ಕಚೇರಿ ಕೆಲಸಗಳು ಸ್ಥಗಿತಗೊಳ್ಳುತ್ತವೆ. ಪುರಸಭೆಯಲ್ಲಿ ಜನನ, ಮರಣ, ನೀರಿನ ಕರ ಸೇರಿದಂತೆ ಆನ್‌ಲೈನ್‌ ಸೇವೆಗಳು, ಕಚೇರಿ ಕೆಲಸಗಳು ಸ್ಥಗಿತಗೊಳ್ಳುತ್ತವೆ. ಉಪನೋಂದಣಿ ಕಚೇರಿಯಲ್ಲಿ ಭೂ ಖರೀದಿ, ವಾಟ್ನಿ, ಭೋಜಾ, ಖರೀದಿ ಕರಾರು ಪತ್ರ ಸೇರಿದಂತೆ ಇನ್ನಿತರ ಸೇವೆ ಸ್ಥಗಿತಗೊಳ್ಳಲಿವೆ.

Advertisement

ಭೂಮಿ ಕೇಂದ್ರ ಹಾಗೂ ಅಟಲ್‌ಜಿ ಜನಸ್ನೇಹಿ ಕೇಂದ್ರಕ್ಕೆ ತೊಂದರೆಯಾಗಬಾರದೆಂದು ಸೋಲಾರ್‌ ಕನೆಕ್ಷನ್‌ ಕೊಡಲಾಗುತ್ತಿದೆ. ವಾರದಲ್ಲಿ ವಿದ್ಯುತ್‌ ಸಮಸ್ಯೆಬಗೆಹರಿಯಲಿದ್ದು, ಕಂಪ್ಯೂಟರ್‌ ಆಪರೇಟರ್‌ ಬೇರೆ ಕಡೆ ನಿಯೋಜಿಸಿರುವುದರಿಂದ ಆಧಾರ್‌ ಸ್ಥಗಿತಗೊಂಡಿದ್ದು, 15 ದಿನಗಳಲ್ಲಿ ಆಧಾರ್‌ ಕಾರ್ಡ್‌ ಕೇಂದ್ರ ಸಹ ಆರಂಭಗೊಳ್ಳಲಿದೆ.  –ಜಿ.ಎಂ. ಕುಲಕರ್ಣಿ, ತಹಶೀಲ್ದಾರ್‌, ಗುಳೇದಗುಡ್ಡ

 ನಮ್ಮ ಕಚೇರಿಯಲ್ಲಿ ಬ್ಯಾಟರಿ ದುರಸ್ತಿಯಲ್ಲಿದೆ. ಇದರಿಂದ ವಿದ್ಯುತ್‌ ಸಮಸ್ಯೆ ಉಂಟಾಗಿದೆ. ಸರಕಾರ ಟೆಂಡರ್‌ ಕರೆದರೆ ಹೊಸ ಬ್ಯಾಟರಿ ಅಳವಡಿಸಲಾಗುತ್ತದೆ. ಎಸ್‌.ವೈ. ಕಾಮರಡ್ಡಿ,ಉಪನೋಂದಣಾಧಿಕಾರಿ

 

-ಮಲ್ಲಿಕಾರ್ಜುನ ಕಲಕೇರಿ

Advertisement

Udayavani is now on Telegram. Click here to join our channel and stay updated with the latest news.

Next