Advertisement

ಕೊಟ್ಟ ಮಾತು ತಪ್ಪಿದ ಕಾರ್ಗಿಲ್‌ ಕಂಪನಿ: ರಾಮಪ್ಪ

09:56 AM Jun 23, 2018 | |

ಹರಿಹರ: ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವುದಾಗಿ ಹೇಳಿದ್ದ ಕಾರ್ಗಿಲ್‌ ಕಂಪನಿ ಅಧಿಕಾರಿಗಳು ಮಾತಿಗೆ ತಪ್ಪಿದ್ದಾರೆ ಎಂದು ಶಾಸಕ ಎಸ್‌. ರಾಮಪ್ಪ ಆರೋಪಿಸಿದರು.

Advertisement

ಮಲೆಬೆನ್ನೂರಿನಿಂದ ನಗರಕ್ಕೆ ಬರುವ ಮಾರ್ಗ ಮಧ್ಯೆ ಶುಕ್ರವಾರ ನಗರ ಹೊರವಲಯದ ಕಾರ್ಗಿಲ್‌ ಕಾರ್ಖಾನೆಗೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ಹಿಂದೆ ಕಂಪನಿ ಉದ್ಘಾಟನೆಗೆ ಬಂದಿದ್ದ ಅಂದಿನ ಸಿಎಂ ಸಿದ್ದರಾಮಯ್ಯ ಸ್ಥಳೀಯರಿಗೆ ಉದ್ಯೋಗ ನೀಡಲು ಸೂಚಿಸಿದ್ದಕ್ಕೆ ತಲೆಯಾಡಿಸಿ ಒಪ್ಪಿಕೊಂಡಿರಿ. ಆದರೆ ಈಗ ನಮ್ಮವರನ್ನು ಕಡೆಗಣಿಸಿ ಹೊರ ರಾಜ್ಯದವರಿಗೆ ಮಣೆ ಹಾಕುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ಪ್ರದೇಶದಲ್ಲಿ ಯಾವುದೆ ಕಾರ್ಖಾನೆ ಆರಂಭಿಸಿದರೆ ಕೈಗಾರಿಕೆ ನಿಯಮಾವಳಿ ಪ್ರಕಾರ ಸ್ಥಳೀಯರಿಗೆ ಶೇ. 60ರಷ್ಟು ಉದ್ಯೋಗ ನೀಡುವುದು ಕಡ್ಡಾಯ. ಆದರೂ ಸಹ ನೀವು ಕಾನೂನು, ಮಾಜಿ ಸಿಎಂ ಸೂಚನೆಯನ್ನು ಗಾಳಿಗೆ ತೂರಿ ಸ್ಥಳೀಯರಿಗೆ ಅನ್ಯಾಯ ಮಾಡುತ್ತಿದ್ದೀರಲ್ಲ ಎಂದು ಕಂಪನಿ ಅಧಿಕಾರಿಗಳನ್ನು ತೀಕ್ಷ್ಣವಾಗಿ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಂಪನಿ ಅಧಿಕಾರಿಗಳಾದ ಬಲ್ಲಾಳ್‌ ಹಾಗೂ ಮತ್ತಿತರರು, ಕಾರ್ಖಾನೆಯ ಒಟ್ಟು ಕಾರ್ಮಿಕರಲ್ಲಿ ಸ್ಥಳೀಯರ ಸಂಖ್ಯೆಯೇ ಹೆಚ್ಚಿದೆ. ಹೊರ ರಾಜ್ಯದವರು ಕಡಿಮೆ ಸಂಖ್ಯೆಯಲ್ಲಿದ್ದು, ಅಗತ್ಯ ಕೌಶಲ ಹೊಂದಿರುವುದರಿಂದ ಅನಿವಾರ್ಯವಾಗಿ ಅವರನ್ನು ನೇಮಿಸಿಕೊಂಡಿದ್ದೇವೆ ಎಂದು ಸ್ಪಷ್ಟೀಕರಣ ನೀಡಿದರು.

ಆಗ ಶಾಸಕ ರಾಮಪ್ಪ ಸ್ಥಳೀಯರ ವಿವರ ಕೇಳಿದಾಗ, ಕಾರ್ಖಾನೆ ಅಧಿಕಾರಿಗಳು ರಾಜ್ಯದ ವಿವಿಧ ಜಿಲ್ಲೆಗಳ ಸಿಬ್ಬಂದಿ ಮಾಹಿತಿ ನೀಡತೊಡಗಿದರು. ಕೂಡಲೆ ರಾಮಪ್ಪ, ಸ್ಥಳೀಯರು ಎಂದರೆ ನಮ್ಮ ರಾಜ್ಯದವರು ಎಂದಲ್ಲ. ಕಂಪನಿಗೆ ಭೂಮಿ ನೀಡಿದವರು, ಸುತ್ತಮುತ್ತಲಿನವರು ಹಾಗೂ ಈ ತಾಲೂಕಿನವರು ಎಂದು ಸ್ಪಷ್ಟಪಡಿಸಿ, ಕಿರ್ಲೋಸ್ಕರ್‌ ಕಾರ್ಖಾನೆ ಮುಚ್ಚಿ ನಿರುದ್ಯೋಗ ಕಾಡುತ್ತಿದ್ದು, ತಾಲೂಕಿನ ಜನತೆಗೆ ಆದ್ಯತೆ ನೀಡಿರಿ ಎಂದು ತಾಕೀತು ಮಾಡಿದರು.

Advertisement

ಕಾರ್ಖಾನೆಯನ್ನು ಇನ್ನೂ 30-40 ಎಕರೆ ಪ್ರದೇಶದಲ್ಲಿ ವಿಸ್ತರಣೆ ಮಾಡಲಿದ್ದೇವೆ. ಆ ಸಂದರ್ಭದಲ್ಲಿ ತಾಲೂಕಿನ ಜನತೆಗೆ ಉದ್ಯೋಗ ನೀಡುವಲ್ಲಿ ಆದ್ಯತೆ ನೀಡಲಾಗುವುದೆಂದು ಅಧಿಕಾರಿಗಳು ನುಡಿದರು. ಕಂಪನಿ ಸುತ್ತಲಿನ ಗ್ರಾಮಗಳ ಜನರು ದುರ್ವಾಸನೆ ಕುರಿತು ದೂರುತ್ತಿದ್ದಾರೆ. ಇದರಿಂದ ಗ್ರಾಮಸ್ಥರಿಗೆ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ದುರ್ವಾಸನೆ ಬೀರದಂತೆ, ಪರಿಸರ ಮಾಲಿನ್ಯವಾಗದಂತೆ ಕ್ರಮ ಕೈಗೊಳ್ಳಿ ಎಂದು ಶಾಸಕರು ಸೂಚಿಸಿದರು.

ಈ ಮುಂಚೆ ದುರ್ವಾಸನೆ ಇತ್ತು. ಆದರೆ ಈಗ ಕ್ರಮ ಕೈಗೊಳ್ಳಲಾಗಿದೆ. ಪರಿಸರ ಮಾಲಿನ್ಯ ಮಂಡಳಿ ಅಧಿಕಾರಿಗಳು ಪರಿಶೀಲಿಸಿ ನಾವು ಕೈಗೊಂಡ ಸುರಕ್ಷತಾ ಕ್ರಮಗಳಿಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದರು. ನಂತರ ಶಾಸಕರು ಕಾರ್ಖಾನೆ ವೀಕ್ಷಿಸಿ ಮಾಲಿನ್ಯ ನಿಯಂತ್ರಣ ಕ್ರಮಗಳ ಮಾಹಿತಿ ಪಡೆದರು.

ನಗರಸಭಾ ಸದಸ್ಯ ಕಿರಣ್‌ ಭೂತೆ, ನಾಗೇನಹಳ್ಳಿ ರೇವಣಸಿದ್ದಪ್ಪ, ವಿಜಯ್‌ ಮಹಾಂತೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next