ವಾಲ್ಡ್‌ಸ್ಪಿರಾಲೆ!
ಏನಪ್ಪ ಇದು?
ಜರ್ಮನಿಯ ಡಾಮ್‌ಸ್ಟಾrಟ್ ಎನ್ನುವ ಪಟ್ಟಣದಲ್ಲಿರುವ ಒಂದು ವಿಭಿನ್ನ ಮಾದರಿಯ ಕಟ್ಟಡದ ಹೆಸರು. ಜರ್ಮನ್ ಭಾಷೆಯ ಹೆಸರಿದು. ಭಾಷಾಂತರಿಸಿದರೆ “ಫಾರೆಸ್ಟ್ ಸ್ಪೈರಲ…’ ಆಂಗ್ಲಭಾಷೆಯಲ್ಲಿ. ಕನ್ನಡದಲ್ಲಿ ಕಾಡು ಸುರುಳಿ ಎನ್ನೋಣವೇ? ಈ ಸೌಧದ ಸಾಮಾನ್ಯ ವಿನ್ಯಾಸ ಹಾಗೂ ತಾರಸಿಯಲ್ಲಿರುವ ಹಸಿರು ಉದ್ಯಾನವನ್ನು ಈ ಶಬ್ದ ಬಿಂಬಿಸುತ್ತದೆ. ಇದರ ವಿನ್ಯಾಸ ಶಿಲ್ಪಿ ಹುಂಡೆರ್ಟ್ ವಸರ್, ಆಸ್ಟ್ರಿಯಾ ದೇಶದ ಕಲೆಗಾರ. ಸ್ಪ್ರಿಂಗ್ ಮಾನ್ ಎಂಬವನು ಇದರ ನಿರ್ಮಾಣ ಶಿಲ್ಪಿ . ಬವೆರಿನ್ ಡಾಮ್‌ಸ್ಟಾrಟ್ ಕಂಪೆನಿಯು ಇದನ್ನು ಕಟ್ಟುವ ಜವಾಬ್ದಾರಿ ಹೊತ್ತಿತ್ತು. ಕ್ರಿ. ಶ. 1990ರಲ್ಲಿ ಶುರುವಾದ ಕಾಮಗಾರಿಯು 2000ದಲ್ಲಿ ಪೂರ್ಣಗೊಂಡಿತು.
ಯಾವುದೇ ಕಟ್ಟಡವನ್ನು ಕಟ್ಟುವಾಗ ನಾವು ಪರಿಸರದಿಂದ ಸಾಕಷ್ಟು ಸಂಪನ್ಮೂಲಗಳನ್ನು ಉಪಯೋಗಿಸುತ್ತೇವೆ. ಹಾಗಾಗಿ ನಾವು ಆ ಕಟ್ಟಡದಲ್ಲಿ ವಾಸಿಸುವಾಗ ಸಾಧ್ಯವಾದಷ್ಟು ಪ್ರಾಕೃತಿಕ ಸಂಪತ್ತನ್ನು ಪರಿಸರಕ್ಕೆ ಮರಳಿಸಬೇಕೆಂಬುದು ಹುಂಡೆರ್ಟ್ ವಸರ್‌ನ ಯೋಜನೆ. ಇದಕ್ಕೆ ತಕ್ಕಂತೆ ತಾರಸಿಯಲ್ಲಿ ಆಕರ್ಷಕವಾದ ಹಸಿರು ಉದ್ಯಾನವು ಕಂಗೊಳಿಸುತ್ತದೆ. ಇದಲ್ಲದೆ ಈ ಜಾಗದಲ್ಲಿ ಉಪಯೋಗವಾಗುವ ನೀರಿನ ಬಹು ಅಂಶ ಮರುಚಾಲನೆಯಾಗುತ್ತದೆ.
105 ಮನೆಗಳಿರುವ ಈ ಮಹಲಿನಲ್ಲಿ ಯಾರೂ ಮನೆಯನ್ನು ಕ್ರಯಕ್ಕೆ ತೆಗೆದುಕೊಳ್ಳುವಂತಿಲ್ಲ. ಬಾಡಿಗೆಗೆ ಪಡೆಯಬೇಕು. ಅಂಗಳದಲ್ಲಿ ಮಕ್ಕಳ ಆಟದ ಮೈದಾನ ಮತ್ತು ಕೃತಕವಾದ ಕೆರೆ ಇವೆ. ವಾಹನಗಳನ್ನು ನಿಲ್ಲಿಸುವ ಸ್ಥಳವೂ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಖೀ ಆಕಾರದಲ್ಲಿರುವ ಈ ಕಟ್ಟಡ ಯಾವುದೇ ಪ್ರಮಾಣೀಕೃತ ಶೈಲಿಯನ್ನು ಅನುಕರಿಸುವುದಿಲ್ಲ. ಒಂದು ಕಡೆ ಎರಡೇ ಅಂತಸ್ತುಗಳಿದ್ದರೆ ಇನ್ನೊಂದು ಕಡೆ 12 ಅಂತಸ್ತುಗಳಿವೆ. ಒಂದು ಸಾವಿರಕ್ಕೂ ಹೆಚ್ಚಿರುವ ಕಿಟಕಿಗಳಲ್ಲಿ ಯಾವುವೂ ಒಂದಕ್ಕೊಂದು ಸಮನಾಗಿಲ್ಲ ಹಾಗೂ ಯಾವುದೇ ನಿರ್ದಿಷ್ಟ ಆಕಾರ ಹೊಂದಿಲ್ಲ. ಅದೇ ತರಹ ಮನೆಗಳ ಒಳಭಾಗದ ಬಾಗಿಲುಗಳು, ಹಿಡಿಕೆಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಹೊರಭಾಗದಲ್ಲಿ ಹಾಕಿರುವ ಬಣ್ಣಗಳೂ ಕಾಮನಬಿಲ್ಲಿನ ರಂಗುಗಳನ್ನು ಹೋಲುತ್ತವೆ. ತುತ್ತತುದಿಯಲ್ಲಿ ಈರುಳ್ಳಿಯ ಆಕಾರದ ಕಲಶಗಳಿವೆ. ಕಟ್ಟಡದ ಯಾವುದೇ ಭಾಗದಲ್ಲಿ ನೇರ ಗೆರೆಗಳಿಲ್ಲ. ಗೋಡೆ ಮತ್ತು ಛಾವಣಿಗಳು ಕೂಡುವಲ್ಲಿಯೂ ಕೋನಗಳಿಲ್ಲದೆ ಕಮಾನಿನ ಆಕಾರವಾಗಿರುವಂತೆ ಮಾಡಿ¨ªಾರೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಏರುವ ತಾರಸಿಯಲ್ಲಿ ವಿವಿಧ ಪ್ರಭೇದಗಳ ಹುಲ್ಲು, ಗಿಡಗಳು ಹಾಗೂ ಮರಗಳನ್ನು ಬೆಳೆದಿ¨ªಾರೆ. ಕೆಲವು ಕಿಟಕಿಗಳ ತಳಭಾಗದಿಂದಲೂ ಮರಗಳು ಬೆಳೆಯುತ್ತಿವೆ. (Tree tenants)
ಉದ್ಘಾಟನೆಯಾದ ಹೊಸತರಲ್ಲಿ ಕಟ್ಟಡದ ಮೇಲ್ಭಾಗದಲ್ಲಿ ಒಂದು ಹೊಟೇಲ್ ಹಾಗೂ ಬಾರನ್ನು ಸಾರ್ವಜನಿಕರಿಗಾಗಿ ತೆರೆದಿದ್ದರು. ಇತ್ತೀಚೆಗೆ ಇವುಗಳನ್ನು ಮುಚ್ಚಿರುತ್ತಾರೆ. ಸಾರ್ವಜನಿಕರಿಗೆ ಹೊರಗಿನಿಂದಷ್ಟೇ ನೋಡುವ ಅವಕಾಶ.
– ಉಮಾಮಹೇಶ್ವರಿ ಎನ್.