ಹರಿಹರ: ತುಂಬು ಗರ್ಭಿಣಿಯಾಗಿಯೂ ಕಾಡಿಗೆ ತೆರಳಬೇಕಾದ ರಾಮಾಯಣದ ಸೀತಾ ಮಾತೆಯ ಪಾಡಿಗಿಂತ ಇಂದಿನ ಮಹಿಳೆಯರ ಸ್ಥಿತಿ ಭಿನ್ನವಾಗೇನೂ ಇಲ್ಲ ಎಂದು ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ|ಮಲ್ಲಿಕಾ ಎಸ್. ಘಂಟಿ ಹೇಳಿದರು.
ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಪೀಠದ ಮೂರನೇ ವರ್ಷದ ವಾಲ್ಮೀಕಿ ಜಾತ್ರೆಯಲ್ಲಿ ಸೋಮವಾರ ನಡೆದ ಮಹಿಳಾ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಜನ ಮಗಳು ಸೀತೆಗೂ ಆಪತ್ತು ತಪ್ಪಲಿಲ್ಲ, ಅಡವಿಯಲ್ಲಿ ತೊಟ್ಟಿಲು ಕಟ್ಟಿ ಮಕ್ಕಳ ಪೋಷಣೆ ಮಾಡಬೇಕಾಯಿತು. ಈಗಲೂ ನಮ್ಮ ಸಾಂಸ್ಕೃತಿಕ ಮತ್ತು ಸಾಮಾಜಿಕ ವಾತಾವರಣ ಬದಲಾಗಿಲ್ಲ ಎಂದರು. ಹಿಂದಿನಿಂದಲೂ ಹೆಣ್ಣುಮಕ್ಕಳ ಜ್ಞಾನ, ತಿಳುವಳಿಕೆಲೆಕ್ಕಕ್ಕಿಲ್ಲ, ಪ್ರತಿ ಮನೆಯಲ್ಲೂ ಹೆಂಡತಿ ಬಾಯಿಗೆ ಗಂಡ ಬೀಗ ಹಾಕಿದರೆ,ಅವರ ಬಾಯಿಗೆ ಸಮಾಜ ಬೀಗ ಹಾಕಿದೆ. ವೈಜ್ಞಾನಿಕ, ವೈಚಾರಿಕವಾಗಿ ಮಹಿಳೆ ಆಲೋಚಿಸಬೇಕು, ಶಿಕ್ಷಣದಿಂದ ಸ್ವಾವಲಂಬಿಗಳಾಗಿ ಪುರುಷ ಪ್ರಧಾನ ಸಮಾಜದ ದೌರ್ಜನ್ಯವನ್ನು ಹಿಮ್ಮೆಟ್ಟಿಸಬೇಕು ಎಂದು ಕರೆ ನೀಡಿದರು.
ಅಕ್ಷರದ ಗುತ್ತಿಗೆ ಹಿಡಿದ ಪುರೋಹಿತಶಾಹಿ ವರ್ಗದವರು ತಳ ಸಮುದಾಯವನ್ನು ಶೋಷಣೆ ಮಾಡು ವುದರ ವಿರುದ್ಧ ಸಾವಿತ್ರಿಬಾಯಿ ಅವರು ಜ್ಯೋತಿಬಾಯಿ ಫುಲೆ ಅವರ ಮೂಲಕ ಮಹಿಳೆಯರಿಗೆ ಶಿಕ್ಷಣ ನೀಡಲು ಮುಂದಾದರು. ಮೂರ್ತಿ ಪೂಜೆಗಿಂತ ಅಕ್ಷರ ಜ್ಞಾನ ಶ್ರೇಷ್ಠ, ಕಲಿಕೆಯಿಂದ ಮಾತ್ರ ಶೋಷಣೆ ತಪ್ಪಿಸಲು ಸಾಧ್ಯ ಎಂಬುದು ಅವರ ಘೋಷಣೆಯಾಗಿತ್ತು ಎಂದರು.
ವೈದಿಕ ಪ್ರೇರಿತ ಜಾತ್ರೆಗಳಲ್ಲಿ ಶಸ್ತ್ರ ಹಾಕುವ, ತಾಯತ ಕಟ್ಟುವ ಮೂಢನಂಬಿಕೆಗಳು ನಡೆಯುತ್ತಿದ್ದವು. ಆದರೆ ವಾಲ್ಮೀಕಿ ಜಾತ್ರೆಯಲ್ಲಿ ವಾಲ್ಮೀಕಿ, ಬುದ್ಧ, ಬಸವಣ್ಣ, ಅಬೇಡ್ಕರ್ ಅವರ ತತ್ವ, ಸಿದ್ಧಾಂತಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಸಮಾಜದ ಎಲ್ಲಾ ತಳ ಸಮುದಾಯಗಳ ಅಸ್ತಿತ್ವ, ಸ್ವಾಭಿಮಾನಕ್ಕೆ ರಾಜನಹಳ್ಳಿ ವಾಲ್ಮೀಕಿ ಪೀಠ ಅಡಿಗಲ್ಲಾಗಲಿದೆ ಎಂದು ತಿಳಿಸಿದರು. ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕಿ ಡಾ| ಮಂಜುಳಾ ಮಾತನಾಡಿ, ಶೋಷಿತ ಸಮುದಾಯದ ಏಳ್ಗೆಗೆ ಸಂವಿಧಾನ ಸಾಕಷ್ಟು ಅವಕಾಶ ಕಲ್ಪಿಸಿದೆ. ವ್ಯವಸ್ಥೆ ಯಲ್ಲಿ ಸಾಕಷ್ಟು ಅನುಕೂಲಗಳಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಪರಿಶ್ರಮದಿಂದ ಮುಂದೆ ಬರಬೇಕು.
ಮಹಿಳೆಯರಿಗೆ ಗೌರವ ನೀಡುವ ಕಾರ್ಯ ಮೊದಲು ನಮ್ಮ ಮನೆಗಳಿಂದಲೇ ಆರಂಭವಾಗಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸರ್ಕಾರದ ಗೃಹ ಇಲಾಖೆ ಕಾರ್ಯದರ್ಶಿ ಮಾಲಿನಿ ಕೃಷ್ಣಮೂರ್ತಿಮಾತನಾಡಿ, ಮಹಿಳೆಯರು ವಿದ್ಯಾಭ್ಯಾಸ ಮಾಡಿದರೆ ಸಾಲದು, ಆರ್ಥಿಕ ಸ್ವಾವಲಂಬನೆಯನ್ನೂ ಗಳಿಸಿಕೊಂಡರೆ ಮಾತ್ರ ಗೌರವದಿಂದ ಬದುಕು ನಡೆಸಲು ಸಾಧ್ಯ. ಎಲ್ಲದಕ್ಕೂ ಪುರುಷರ ಮೇಲೆ ಅವಲಂಬಿತರಾದೆ ಸ್ವತಂತ್ರವಾಗಿ ನಿರ್ವಹಿಸುವುದನ್ನು ಕಲಿಯಬೇಕು, ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ತಿಳಿಸಿದರು. ಚಿತ್ರನಟಿ ಶೃತಿ ಮಾತನಾಡಿ, ಪುರುಷರ ಕೈಯಲ್ಲಿ ಖಡ್ಗವಿದ್ದರೆ, ಮಹಿಳೆಯರ ಕೈಯ್ಯಲ್ಲಿ ಅಕ್ಷರ ಆಯುಧವಿರಬೇಕು. ಶಿಕ್ಷಣದಿಂದ ಮಾತ್ರ ಎಲ್ಲವನ್ನೂ ಗೆಲ್ಲಲು ಸಾಧ್ಯವೆಂದು ತಿಳಿಯಬೇಕು. ತಮ್ಮ ಮೇಲೆಶೋಷಣೆ ಹೆಚ್ಚಿದಷ್ಟೂ ಸಾಧನೆಯತ್ತ ಮುನ್ನುಗ್ಗಬೇಕು ಎಂದರು.
ಇದನ್ನೂ ಓದಿ:ವಾಲ್ಮೀಕಿ ಸಮಾಜ ಅಭ್ಯುದಯವೇ ಗುರಿ
ಪುರಾತನ ಕಾಲದಿಂದಲೂ ಭಾರತದಲ್ಲಿ ಮಹಿಳೆಯರಿಗೆ ಅಪಾರ ಗೌರವವಿದೆ, ಜಗತ್ತಿನ ಉಳಿದೆಲ್ಲೆಡೆ ಪುರುಷ ದೇವರು ಮಾತ್ರ ಪೂಜಿಸಲ್ಪಟ್ಟರೆ ಭಾರತದಲ್ಲಿ ಮಾತ್ರ ಸಾವಿರಾರು ದೇವತೆಯರು ಪೂಜಿಸಲ್ಪಡುತ್ತಾರೆ. ಅನಾದಿ ಕಾಲದಿಂದಲೂ ವಾಲ್ಮೀಕಿ ಜನಾಂಗದವರಿಗೆ ಕಲೆ ಮತ್ತು ಸಂಸ್ಕೃತಿಯೊಂದಿಗೆ ಬಿಡಿಸಲಾರದ ನಂಟಿದೆ ಎಂದು ಅಭಿಪ್ರಾಯಪಟ್ಟರು. ಪೀಠದ ಧರ್ಮದರ್ಶಿ ಶಾಂತಲಾ ರಾಜಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಂಗಳೂರು ಮಹಾರಾಣಿ ಕ್ಲಸ್ಟರ್ ವಿವಿ ಕುಲಪತಿ ಗೋಮತಿದೇವಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕವಿತಾ ವಾರಂಗಲ್, ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಪುಷ್ಪಾ ಲಕ್ಷ್ಮಣಸ್ವಾಮಿ, ಶಿವಮೊಗ್ಗ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ತಾರಾ ಇದ್ದರು.