ಬೆಂಗಳೂರು: ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ, ಪರ ಪುರುಷನ ಪತ್ನಿಯನ್ನು ತಮಿಳುನಾಡಿನಿಂದ ಕರೆತಂದು ಚಿನ್ನಾಭರಣಕ್ಕಾಗಿ ಆಕೆಯನ್ನು ಕೊಂದಿದ್ದ ಆರೋಪಿಗೆ ಒಂದನೇ ಸಿಸಿಎಚ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿದೆ.
ರಾಮನಗರ ಮೂಲದ ಶಿವಲಿಂಗೇಗೌಡ ಶಿಕ್ಷೆಗೊಳಗಾದವ. ಆರೋಪಿ 2011ರಲ್ಲಿ ತಮಿಳುನಾಡಿನ ಕನ್ಯಾಕುಮಾರಿ ಮೂಲದ ಇಂದಿರಾ (ಸುಕನ್ಯಾ) ಎಂಬ ಮಹಿಳೆಯನ್ನು ಭೀಕರವಾಗಿ ಕೊಲೆಗೈದಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಜ್ಞಾನಭಾರತಿ ಠಾಣೆ ಇನ್‌ಸ್ಪೆಕ್ಟರ್ ಬಿ.ಟಿ.ಚಿದಾನಂದ ಸ್ವಾಮಿ ಹಾಗೂ ಸಿಬ್ಬಂದಿ ಪುಟ್ಟಸ್ವಾಮಿಗೌಡ, ಆರೋಪಿಯನ್ನು ಬಂಧಿಸಿ, ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಒಂದನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶರಾದ ಶಿವಶಂಕರ್ ಬಿ.ಅಮರಣ್ಣವರ್, ಆರೋಪಿಯ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ ಜೀವವಾಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿದ್ದಾರೆ. ಒಂದು ವೇಳೆ ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿಯಾಗಿ ಆರು ತಿಂಗಳ ಸಾದಾ ಶಿಕ್ಷೆ ಅನುಭವಿಸಬೇಕು ಮತ್ತು ದಂಡದ ಹಣದಲ್ಲಿ 20 ಸಾವಿರ ರೂ.ಗಳನ್ನು ಮೃತ ಇಂದಿರಾಅವರ ಪತಿ ಸ್ಟಾಲಿನ್‌ಗೆ ನೀಡುವಂತೆ ತೀರ್ಪಿನಲ್ಲಿ ತಿಳಿಸಿದ್ದಾರೆ. ಸರ್ಕಾರಿ ಅಭಿಯೋಜಕರಾಗಿ ಚನ್ನಪ್ಪ ಜಿ.ಹರಸೂರ ವಾದ ಮಂಡಿಸಿದರು.
ಏನಿದು ಪ್ರಕರಣ?: ರಾಮನಗರ ಮೂಲದ ಆರೋಪಿ ಶಿವಲಿಂಗೇಗೌಡ ಟ್ರಾವೆಲ್ಸ್‌ನಲ್ಲಿ ಚಾಲಕನಾಗಿದ್ದು, ಉಲ್ಲಾಳ ಸಮೀಪದಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ. ಆಗಾಗ್ಗೆ ತಮಿಳುನಾಡಿನ ಕನ್ಯಾಕುಮಾರಿಗೆ ಹೋಗುತ್ತಿದ್ದ. ಈ ವೇಳೆ ಆತ ತಂಗುತ್ತಿದ್ದ ಹೋಟೆಲ್‌ನ ಸಮೀಪ ಸ್ಟಾಲಿನ್ ಹಾಗೂ ಇಂದಿರಾ ದಂಪತಿ ಟೀ ಅಂಗಡಿ ನಡೆಸುತ್ತಿದ್ದರು. ಈ ವೇಳೆ ಇಂದಿರಾರನ್ನು ಪರಿಚಯಸಿಕೊಂಡ ಆರೋಪಿ, ಮದುವೆ ಮಾಡಿಕೊಳ್ಳುವುದಾಗಿ ಆಕೆಯನ್ನು ನಂಬಿಸಿ ನಗರಕ್ಕೆ ಕರೆತಂದಿದ್ದ.
ಈ ಮಧ್ಯೆಇಂದಿರಾ ಮೈಮೇಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳ ಮೇಲೆ ಕಣ್ಣು ಹಾಕಿದ್ದ ಆರೋಪಿ, ವ್ಯವಹಾರದಲ್ಲಿ ತೊಡಗಿಸಲು ಹಣದ ಅಗತ್ಯವಿದ್ದು, ಒಡವೆ ಕೊಡುವಂತೆ ಪೀಡಿಸುತ್ತಿದ್ದ. ಆಕೆ ನಿರಾಕರಿಸಿದ್ದಳು. ಇದರಿಂದ ಆಕ್ರೋಶಗೊಂಡಿದ್ದ ಆತ, 2011ರ ಫೆ.1ರಂದು ಸಂಜೆ ರೈಲ್ವೆ ಬಡಾವಣೆಯ ಭವಾನಿ ನಗರದ ರಸ್ತೆ ಬಳಿ ಕರೆದೊಯ್ದು, ಚಾಕುವಿನಿಂದ ಆಕೆಯ ಕುತ್ತಿಗೆ ಕೊಯ್ದು ಭೀಕರವಾಗಿ ಹತ್ಯೆಗೈದು, ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ.
ಪಾತ್ರೆಯಲ್ಲಿ ಚಿನ್ನ ಬಚ್ಚಿಟ್ಟ: ಇಂದಿರಾ ಅವರನ್ನು ಕೊಂದು, ಆಕೆ ಮೈಮೇಲಿದ್ದ ಚಿನ್ನಾಭರಣ ದೋಚಿದ್ದ ಆರೋಪಿ, ಅವುಗಳನ್ನು ತನ್ನ ಮನೆಯ ಪಾತ್ರೆಯೊಂದರಲ್ಲಿ ಬಚ್ಚಿಟ್ಟಿದ್ದ. ಇದನ್ನು ತನ್ನ ಪತ್ನಿ ಹಾಗೂ ಮಕ್ಕಳಿಗೂ ತಿಳಿಸಿರಲಿಲ್ಲ. ಕೆಲ ದಿನಗಳ ಬಳಿಕ ಒಡವೆಗಳನ್ನು ಅಡ ಇಡಲು ಉದ್ದೇಶಿಸಿದ್ದ. ಅಷ್ಟರಲ್ಲಿ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು ಎಂದು ಪೊಲೀಸರು ಹೇಳಿದರು.