Advertisement

ಮಹಿಳೆ ಮೈ ಮುಟ್ಟಿದ ಯುವಕ ವಶಕ್ಕೆ

06:45 AM Jan 02, 2019 | |

ಬೆಂಗಳೂರು: ಮಹಾತ್ಮ ಗಾಂಧಿ ರಸ್ತೆಯಲ್ಲಿ ಹೊಸವರ್ಷದ ಸಂಭ್ರಮ ಮುಗಿಸಿಕೊಂಡು ನಡೆದು ಹೋಗುತ್ತಿದ್ದ ಮಹಿಳೆಯ ಮೈ ಮುಟ್ಟಿ ಮೂವರು ಯುವಕರು ಪುಂಡಾಟಿಕೆ ಮೆರೆದ ಘಟನೆ ರಿಚ್‌ಮಂಡ್‌ ವೃತ್ತದಲ್ಲಿ ಸೋಮವಾರ ರಾತ್ರಿ ನಡೆದಿದೆ.

Advertisement

ಈ ಕುರಿತು ಬಿಹಾರ ಮೂಲದ ಮಹಿಳೆ ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿರುವ ಅಶೋಕನಗರ ಠಾಣೆ ಪೊಲೀಸರು, ತಮಿಳುನಾಡು ಮೂಲದ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಬಿಹಾರ ಮೂಲದ ದಂಪತಿ ಜಯನಗರದಲ್ಲಿ ವಾಸವಿದ್ದು, ಸಾಫ್ಟ್ವೇರ್‌ ಕಂಪನಿಯೊಂದರ ಉದ್ಯೋಗಿಗಳಾಗಿದ್ದಾರೆ. ಸೋಮವಾರ ರಾತ್ರಿ ಎಂ.ಜಿ.ರಸ್ತೆಯಲ್ಲಿ ನಡೆದ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಪಾಲ್ಗೊಂಡು ರಾತ್ರಿ 12.50ರ ಸುಮಾರಿಗೆ ರಿಚ್‌ಮಂಡ್‌ ವೃತ್ತದ ಕೆ.ಎಚ್‌. ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು.

ಈ ವೇಳೆ ಹಿಂದಿನಿಂದ ಬಂದ ಮೂವರು ಯುವಕರ ಪೈಕಿ ಒಬ್ಟಾತ ಮಹಿಳೆಯ ಕೈ, ಹಿಡಿದು ಅಸಭ್ಯವಾಗಿ ವರ್ತಿಸಿದ್ದಾನೆ. ಇದನ್ನು ಪ್ರಶ್ನಿಸಿದ ಪತಿಯ ಮೇಲೂ ಹಲ್ಲೆ ನಡೆಸಿ ಮೊಬೈಲ್‌ ಕಿತ್ತುಕೊಂಡು ಹೋಗಿರುವುದಾಗಿ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ನಡೆದ ಕೂಡಲೇ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ತೆರಳಿ ಗುಂಪು ಚದುರಿಸಿ ಆರೋಪಿ ಯುವಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ. ಮಹಿಳೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

ಯುವಕ ಹೇಳಿದ್ದೇನು?: ಉದ್ದೇಶಪೂರ್ವಕವಾಗಿ ಮಹಿಳೆಯ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿಲ್ಲ. ಎಂ.ಜಿ.ರಸ್ತೆಯಲ್ಲಿ ಸಂಭ್ರಮ ಮುಗಿಸಿಕೊಂಡು ಸ್ನೇಹಿತರ ಜತೆ ನಡೆದುಕೊಂಡು ಹೋಗುತ್ತಿದ್ದಾಗ ನಮ್ಮ ಮುಂದೆ ಹೋಗುತ್ತಿದ್ದ ಮಹಿಳೆ ಇದ್ದಕ್ಕಿದ್ದಂತೆ ಹಿಂದಕ್ಕೆ ತಿರುಗಿದಾಗ ಕೈ ತಾಗಿತು. ಇದೇ ಕಾರಣಕ್ಕೆ ಆಕೆ ಹಾಗೂ ಆಕೆಯ ಪತಿ ನನ್ನ ಮೇಲೆ ಹಲ್ಲೆ ನಡೆಸಿದರು. ಮಾತಿಗೆ ಮಾತು ಬೆಳೆದು ಜಗಳ ನಡೆಯಿತು.

ಈ ಘಟನೆ ಕಂಡು ಜನರು ಗುಂಪುಗೂಡಿ ನಮ್ಮ ಮೇಲೆ ಹಲ್ಲೆ ನಡೆಸಲು ಮುಂದಾದರೂ, ಅಷ್ಟರಲ್ಲಿ ಪೊಲೀಸರು ಬಂದಿದ್ದಕ್ಕೆ ಬಚಾವಾದೆವು ಎಂದು ವಿಚಾರಣೆ ವೇಳೆ ಯುವಕ ಹೇಳುತ್ತಿದ್ದಾನೆ. ತಲೆ ಮರೆಸಿಕೊಂಡಿರುವ ಆತನ ಸ್ನೇಹಿತರನ್ನೂ ಠಾಣೆಗೆ ಕರೆಸಿ ವಿಚಾರಣೆ ನಡೆಸಬೇಕಿದೆ.

ಯುವಕರು ಹಿಂಬಾಲಿಸಿಕೊಂಡು ಬಂದು ಉದ್ದೇಶಪೂರ್ವಕವಾಗಿ ಕೃತ್ಯ ಎಸಗಿದ್ದಾರೆ ಎಂದು ಮಹಿಳೆಯ ಪತಿ ಹೇಳುತ್ತಾರೆ. ಹೀಗಾಗಿ,  ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾ ಫ‌ುಟೇಜ್‌ ಪರಿಶೀಲಿಸುತ್ತಿದ್ದೇವೆ. ದೂರುದಾರ ಮಹಿಳೆ, ಅವರ ಪತಿ ಹಾಗೂ ಪ್ರತ್ಯಕ್ಷ ದರ್ಶಿಗಳನ್ನು ಕರೆಸಿ ವಿಚಾರಣೆ ನಡೆಸಲಿದ್ದೇವೆ. ತನಿಖೆ ಪೂರ್ಣಗೊಂಡ ಬಳಿಕ ಸತ್ಯಾಸತ್ಯತೆ ತಿಳಿದುಬರಲಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. 

ಮೊಬೈಲ್‌ ಕದ್ದದ್ದು ಯಾರು?: ಖಾಸಗಿ ಕಂಪನಿ ಉದ್ಯೋಗಿಯಾಗಿರುವಆರೋಪಿ ಯುವಕ, ತಾನು ಮೊಬೈಲ್‌ ಕಳವು ಮಾಡಿಲ್ಲ ಎಂದು ಹೇಳುತ್ತಿದ್ದಾನೆ. ದಂಪತಿ ತಮ್ಮ ಬೈಕ್‌ನ ಪೌಚ್‌ನಲ್ಲಿ ಮೊಬೈಲ್‌ ಇಟ್ಟಿದ್ದಾಗಿ ತಿಳಿಸಿದ್ದಾರೆ. ಯುವಕರು ಹಾಗೂ ದಂಪತಿ ನಡುವಿನ ಜಗಳ ತಾರಕಕ್ಕೇರಿದಾಗ ಜನ ಗುಂಪು ಸೇರಿದ್ದರು ಎನ್ನಲಾಗಿದ್ದು, ಮೊಬೈಲ್‌ ಕದ್ದವರು ಯಾರು ಎಂಬುದು ಪತ್ತೆಯಾಗಬೇಕಿದೆ ಎಂದು ಅಧಿಕಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next