ಬೆಂಗಳೂರು: ಮಹಿಳೆ ಸೇರಿ ಆರು ಮಂದಿಗೆ ರೌಡಿಶೀಟರ್ ಒಬ್ಬ ಚಾಕುವಿನಿಂದ ಇರಿದ ಘಟನೆ ಎಂ.ಜಿ.ರಸ್ತೆಯ ಮೆಟ್ರೋ ಬಳಿಯ ರಂಗೋಲಿ ಆರ್ಟ್ ಗ್ಯಾಲರಿ ಬಳಿ ಭಾನುವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಹಲಸೂರು ನಿವಾಸಿ ಶೀತಲ್ (35), ಕಬ್ಬನ್‌ಪಾರ್ಕ್ ಠಾಣೆ ಪೇದೆಗಳಾದ ಪ್ರತಾಪ್, ಮಹೇಶ್ ಮತ್ತು ಡಿಎಆರ್ ಪೇದೆ ನಾಗೇಶ್ ಹಾಗೂ ಇಬ್ಬರು ಸಾರ್ವಜನಿಕರು ಗಾಯಗೊಂಡಿದ್ದಾರೆ.
ಇದರ ನಡುವೆಯೇ, ಸರ ಕಳವು ಮಾಡಿ ಪರಾರಿಯಾಗುತ್ತಿದ್ದ ಬನಶಂಕರಿಯ ರೌಡಿಶೀಟರ್ ಮೊಹಮದ್ ದಸ್ತಗಿರ್‌ನನ್ನು ಸ್ಥಳದಲ್ಲಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೇದೆ ಹಾಗೂ ಕಂದಾಯ ಇಲಾಖೆ ಆಯುಕ್ತರ ಅಂಗರಕ್ಷಕ ಎಂ.ಎಸ್.ನಾಗೇಶ್ ಹಾಗೂ ಕೆಲ ಯುವಕರು ಹಿಡಿದಿದ್ದಾರೆ.
ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಶೀತಲ್ ತಮ್ಮ ಇಬ್ಬರು ಮಕ್ಕಳ ಜತೆ ಎಂ.ಜಿ.ರಸ್ತೆಯ ಮೆಟ್ರೋ ನಿಲ್ದಾಣ ಬಳಿಯ ರಂಗೋಲಿ ಆರ್ಟ್ ಗ್ಯಾಲರಿಗೆ ಬಂದಿದ್ದರು. ಆಗ ಸ್ಥಳಕ್ಕೆ ಬಂದ ಆರೋಪಿ, ಶೀತಲ್ ಅವರಿಗೆ ಚಾಕು ತೋರಿಸಿ ಚಿನ್ನದ ಸರ ಕೊಡುವಂತೆ ಬೆದರಿಕೆ ಹಾಕಿದ್ದಾನೆ.
ಇದಕ್ಕೆ ವಿರೋಧಿಸಿದಾಗ ಶೀತಲ್ ಅವರ ಕೈಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿ ಸರ ಕಸಿದುಕೊಂಡು ಪರಾರಿಯಾಗಿದ್ದಾನೆ. ಇದನ್ನು ನೋಡಿದ ಇಬ್ಬರು ಯವಕರು ಹಾಗೂ ಭದ್ರತೆಗೆ ನಿಯೋಜನೆಗೊಂಡಿದ್ದ ಪೇದೆ ಪ್ರತಾಪ್ ಮತ್ತು ಮಹೇಶ್ ಆರೋಪಿಯನ್ನು ಹಿಡಿಯಲು ಯತ್ನಿಸಿದ್ದಾರೆ. ಇವರ ಮೇಲೆಯೂ ಚಾಕುವಿನಿಂದ ಹಲ್ಲೆ ನಡೆಸಿ ತಪ್ಪಿಸಿಕೊಂಡಿದ್ದಾನೆ.
ಇದೇ ವೇಳೆ ಎಂ.ಜಿ.ರಸ್ತೆಯಲ್ಲಿ ತಮ್ಮ ಹಿರಿಯ ಅಧಿಕಾರಿಗಾಗಿ ಕಾಯುತ್ತಿದ್ದ ಅಂಗರಕ್ಷಕ ನಾಗೇಶ್ ಹಾಗೂ ಇತರೆ ಮೂವರು ಯುವಕರು ಆರೋಪಿಯನ್ನು ಹಿಂಬಾಲಿಸಿ, ಚರ್ಚ್‌ಸ್ಟ್ರೀಟ್ ಕಾರ್ಪೊರೇಷನ್ ಬ್ಯಾಂಕ್ ಬಳಿ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂದರ್ಭದಲ್ಲಿ ನಾಗೇಶ್ ಮೇಲೆ ಆರೋಪಿ ಚಾಕುವಿನಿಂದ ಹಲ್ಲೆ ನಡೆಸಿದ್ದು, ಅವರ ಬಲಕೈಗೆ ಗಾಯವಾಗಿದೆ. ಈ ವೇಳೆ ಕೆಲ ಸಾರ್ವಜನಿಕರು ಆರೋಪಿಯನ್ನು ಥಳಿಸಿ ಕಬ್ಬನ್‌ಪಾರ್ಕ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಗೊಂಡಿರುವ ಮೂವರು ಪೇದೆಗಳು ಹಾಗೂ ಸಾರ್ವಜನಿಕರು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ರೌಡಿಶೀಟರ್ ದಸ್ತಗಿರ್: ಆರೋಪಿ ವಿರುದ್ಧ ನಗರದ 10ಕ್ಕೂ ಹೆಚ್ಚು ಠಾಣೆಗಳಲ್ಲಿ ಕೊಲೆ, ದರೋಡೆ, ಕೊಲೆ ಯತ್ನ ಪ್ರಕರಣಗಳಿದ್ದು, ಬನಶಂಕರಿ ಮತ್ತು ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿದೆ. ದರೋಡೆ, ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿ, ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.