ಧಾರವಾಡ: ಮಹಿಳೆಯರು ಮಠಮಾನ್ಯಗಳಿಗೆ ಪೀಠಾಧ್ಯಕ್ಷರಾಗುವಂತಹ ಸ್ತ್ರೀ ಸ್ವಾತಂತ್ರ ಬಂದಿದ್ದು ಬಸವಣ್ಣನವರ ಕಲ್ಯಾಣ ಕ್ರಾಂತಿಯಿಂದ ಎಂದು ಅಕ್ಕಮಹಾದೇವಿ ಅನುಭಾವ ಪೀಠದ 3ನೇ ಪೀಠಾಧ್ಯಕ್ಷೆ ಮಾತಾ ಜ್ಞಾನೇಶ್ವರಿ ಹೇಳಿದರು.
ಇಲ್ಲಿನ ಅಕ್ಕಮಹಾದೇವಿ ಮಠದಲ್ಲಿ ಸೋಮವಾರ ನಡೆದ ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪೀಠದ 47ನೇ ವಾರ್ಷಿಕೋತ್ಸವದಲ್ಲಿ ಪೀಠಾರೋಹಣ ಮಾಡಿ ಅವರು ಮಾತನಾಡಿದರು. ಸ್ತ್ರೀ ಸಮಾನತೆ ಜೊತೆಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದ ಜಗತ್ತಿನ ಏಕೈಕ ಗುರುವೆಂದರೆ ಬಸವಣ್ಣನವರು.
ಅವರಿಂದ ನಮ್ಮಂತಹ ಮಹಿಳೆಯರು ಪೀಠಾಧ್ಯಕ್ಷರಾಗಲು ಸಾಧ್ಯವಾಯಿತು. ಸಾಕಷ್ಟು ಮಠಾಧೀಶರು ಸ್ತ್ರೀಯರ ಬಗ್ಗೆ ಉತ್ತಮ ಭಾಷಣ ಮಾಡುತ್ತಾರೆ. ಆದರೆ ತಮ್ಮ ಮಠಗಳಲ್ಲಿ ಸ್ತ್ರೀಯರನ್ನು ಪೀಠಾಧ್ಯಕ್ಷರನ್ನಾಗಿ ನೇಮಕ ಮಾಡುತ್ತಿಲ್ಲ. ಆದರೆ ಬಸವಧರ್ಮ ಪೀಠವು ಮಾತ್ರ ಜಗದ್ಗುರು ಸ್ಥಾನ ನೀಡಿ ಮಹಿಳೆಯರನ್ನು ಅತೀ ಹೆಚ್ಚು ಗೌರವಿಸಿದೆ ಎಂದರು.
ಇಂದು ವಸ್ತ್ರನೀತಿ ಅನುಸರಿಸದ ಅದೆಷ್ಟೋ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದನ್ನು ನಾವು ಕಾಣುತ್ತಿದ್ದೇವೆ. ಹೀಗಾಗಿ ಮಹಿಳೆಯರು ಮೈ ತುಂಬಾ ಬಟ್ಟೆ ತೊಟ್ಟು ಸಂಸ್ಕಾರವಂತರಾಗಿದ್ದರೆ ಪುರುಷರು ನಮ್ಮನ್ನು ನೋಡುವ ದೃಷ್ಟಿಕೋನ ಬದಲಾಗುತ್ತದೆ ಎಂದರು.
ಪೀಠಕ್ಕೆ ಅಂಟಿಕೊಳ್ಳಬೇಡಿ: ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪೀಠದ ದ್ವಿತೀಯ ಪೀಠಾಧ್ಯಕ್ಷೆ ಗಂಗಾ ಮಾತಾಜೀ ಮಾತನಾಡಿ, ಮಠಾಧೀಶರು ಪೀಠಕ್ಕೆ ಅಂಟಿಕೊಂಡು ಕುಳಿತುಕೊಳ್ಳುವ ಬದಲಾಗಿ ಪ್ರವಚನ, ಸತ್ಸಂಗ, ಸದ್ವಿಚಾರದ ಅನುಭಾವ ಗೋಷ್ಠಿಗಳನ್ನು ಮಾಡಬೇಕಿದೆ ಎಂದರು.
ಲಿಂಗಾನಂದ ಸ್ವಾಮೀಜಿ ಅವರು ಸ್ತ್ರೀಯರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿ ಅವರನ್ನು ಜಗದ್ಗುರುಗಳನ್ನಾಗಿ ಮಾಡಿದ ಕಾರಣ ಮಾತೆ ಮಹಾದೇವಿಯವರು ಪ್ರಥಮ ಮಹಿಳಾ ಜಗದ್ಗುರುಗಳಾದರು. ನಂತರ ನಾನು ಕಾರ್ಯ ನಿರ್ವಹಿಸಿದೆ. ಇದೀಗ ಜ್ಞಾನೇಶ್ವರಿ ಮಾತೆಯವರನ್ನು ತೃತೀಯ ಪೀಠಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದರು.
ಶ್ರೀ ಚನ್ನಬಸವಾನಂದ ಸ್ವಾಮೀಜಿ ಪ್ರಾಸ್ತಾವಿಕ ಮಾತನಾಡಿದರು. ಮಾತೆ ಸತ್ಯಾದೇವಿ, ಪ್ರಭುಲಿಂಗ ಸ್ವಾಮಿಜಿ, ಸಿದ್ದಣ್ಣ ನಟೆಗಲ್, ಮಲ್ಲೇಶಪ್ಪ ಕುಸುಗಲ್, ದೇವೆಂದ್ರಪ್ಪ ಇಂಗಳಹಳ್ಳಿ, ಬಿ.ಜಿ.ಹೊಸಗೌಡರ, ಸುಬ್ಬಣ್ಣ ಮೈಸೂರ, ಅಶೋಕ ಶೀಲವಂತ ಇದ್ದರು. ಕಾವೇರಿ ಕಟಗಿ ಹಾಗೂ ಸಂಗಡಿಗರಿಂದ ವಚನ ನೃತ್ಯ ಜರುಗಿತು.