Advertisement

ಮಹಿಳೆ ಇಂದಿಗೂ 2ನೇ ದರ್ಜೆ ಪ್ರಜೆ

12:53 PM Oct 24, 2017 | Team Udayavani |

ಮೈಸೂರು: ಮಹಿಳೆಯರಿಗೆ ಸೂಕ್ತ ಅವಕಾಶಗಳು ಸಿಕ್ಕಿದ್ದರೆ ಮನೆಗೊಬ್ಬ ಕಿತ್ತೂರು ಚೆನ್ನಮ್ಮ ಇರುತ್ತಿದ್ದಳು. ಆದರೆ ಈ ಪುರುಷ ಪ್ರಧಾನ ಸಮಾಜದಲ್ಲಿ ಇವತ್ತಿಗೂ ಮಹಿಳೆ ಎರಡನೇ ದರ್ಜೆ ಪ್ರಜೆಯಾಗಿ ಬದುಕುತ್ತಿದ್ದಾಳೆ ಎಂದು ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ವಿಷಾದಿಸಿದರು.

Advertisement

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಕಲಾಮಂದಿರದಲ್ಲಿ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯಲ್ಲಿ  ಮುಖ್ಯ ಭಾಷಣ ಮಾಡಿದರು. ಸರ್ಕಾರ ಅನೇಕ ಮಹನೀಯರ ಜಯಂತಿ ಕಾರ್ಯಕ್ರಮಗಳನ್ನು ಆಚರಿಸುತ್ತಿದ್ದು, ಮಹಿಳೆಯರಿಗೆ ಗೌರವ ಸೂಚಿಸಲು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಮಾಡಲಾಗುತ್ತಿದೆ. 

21ನೇ ಶತಮಾನದಲ್ಲೂ ಮಹಿಳೆ ಎಲ್ಲಾ ರಂಗಗಳಲ್ಲೂ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ. ಇತಿಹಾಸದ ಪುಟ ತೆರೆದಾಗ ಅಲ್ಲೊಬ್ಬರು-ಇಲ್ಲೊಬ್ಬರು ಮಹಿಳಾ ಸಾಧಕಿಯರು ಕಾಣಸಿಗುತ್ತಾರೆ. ಪ್ರತಿ ಮನೆಯಲ್ಲೂ ಚೆನ್ನಮ್ಮನಂತವರು ಜನ್ಮ ತಳೆಯಬೇಕು ಎಂದು ಹೇಳಿದರು. ಸ್ಥಳೀಯ ಸಂಸ್ಥೆಗಳಲ್ಲಿ ಶೇ.50 ಮಹಿಳಾ ಮೀಸಲು ಸಿಕ್ಕಿರುವಂತೆ ವಿಧಾನಸಭೆ ಹಾಗೂ ಲೋಕಸಭೆಗಳಲ್ಲೂ ಶೇ.50 ಮಹಿಳಾ ಮೀಸಲಿಗೆ ಹೋರಾಡುವ ಮೂಲಕ ಮಹಿಳೆಯರು ಮುಖ್ಯವಾಹಿನಿಗೆ ಬರಬೇಕಿದೆ ಎಂದರು.

ಮೇಯರ್‌ ಎಂ.ಜೆ.ರವಿಕುಮಾರ್‌ ಉದ್ಘಾಟಿಸಿದರು. ಶಾಸಕ ವಾಸು ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ್‌, ಜಿಪಂ ಸದಸ್ಯೆ ಡಾ.ಪುಷ್ಪ ಅಮರನಾಥ್‌, ಮೈಲ್ಯಾಕ್‌ ಅಧ್ಯಕ್ಷ ಎಚ್‌.ಎ.ವೆಂಕಟೇಶ್‌, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್‌, ಕನ್ನಡಪರ ಹೋರಾಟಗಾರರಾದ ತಾಯೂರು ವಿಠಲಮೂರ್ತಿ, ರವಿಶಂಕರ್‌ ಇದ್ದರು.

ಖಾಲಿ ಕುರ್ಚಿಗಳಿಗೆ ಭಾಷಣ!: ರಾಜ್ಯಸರ್ಕಾರದ ವತಿಯಿಂದ ಇದೇ ಮೊದಲ ಬಾರಿಗೆ ಆಚರಿಸಿದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಜನರಿಲ್ಲದೆ ಭಣಗುಟ್ಟಿತು. ಕಾರ್ಯಕ್ರಮ ಉದ್ಘಾಟಿಸಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಸೇರಿದಂತೆ ಶಿಷ್ಟಾಚಾರದ ಪ್ರಕಾರ 31 ಜನ ಚುನಾಯಿತ ಜನ ಪ್ರತಿನಿಧಿಗಳ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಿಸಲಾಗಿತ್ತು.

Advertisement

ಆದರೆ, ಈ ಪೈಕಿ ಬಂದವರು 4 ಜನ ಮಾತ್ರ. ಇನ್ನು ಸಾವಿರಕ್ಕೂ ಹೆಚ್ಚು ಆಸನ ಸಾಮರ್ಥ್ಯದ ಕಲಾಮಂದಿರದಲ್ಲಿ 50ಕ್ಕಿಂತ ಹೆಚ್ಚಿನ ಜನರಿರಲಿಲ್ಲ. ಹೀಗಾಗಿ 11ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಮಧ್ಯಾಹ್ನ 12.30 ಆದರೂ ಜನರು ಬರುವ ಲಕ್ಷಣ ಕಾಣದಿದ್ದಾಗ ಆಗಮಿಸಿದ್ದ ಗಣ್ಯರು ಖಾಲಿ ಕುರ್ಚಿಗಳಿಗೇ ಭಾಷಣ ಮಾಡಿದರು.

ಈ ಮುನ್ನ ಮಾಲಿನಿ ಮತ್ತು ತಂಡದವರು ಸುಗಮ ಸಂಗೀತಾ ಕಾರ್ಯಕ್ರಮ ನಡೆಸಿಕೊಟ್ಟರೆ, ಮೈಸೂರಿನ ಸುಪ್ರೀಂ ಶಾಲೆಯ ಮಕ್ಕಳು ಕಿತ್ತೂರು ರಾಣಿ ಚೆನ್ನಮ್ಮ ನೃತ್ಯ ರೂಪಕ ಪ್ರಸ್ತುತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next