ಬೀದರ: ಪ್ರತಿಯೊಬ್ಬ ಹೆಣ್ಣು ಮಕ್ಕಳಲ್ಲಿ ಯಾವುದಾದರೊಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ ಎಂದು ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ ಹೇಳಿದರು.
ನಗರದ ಜಿಲ್ಲಾ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಡೆದ ಮಹಿಳಾ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಹಿಳೆ ಅಬಲೆಯಲ್ಲ ಸಬಲೆ. ಎಲ್ಲಾ ರಂಗಗಳಲ್ಲಿ ಕೆಲಸ ಮಾಡಬಲ್ಲೆ ಎನ್ನುವುದನ್ನು ಹಲವಾರು ಮಹಿಳೆಯರು ಸಾಧಿಸಿ ತೋರಿಸಿದ್ದಾರೆ. ಹಾಗಾಗಿ ಮಹಿಳೆಯರು ಕೇವಲ ಮನೆಗೆಲಸಗಳಿಗೆ ಮಾತ್ರ ಸೀಮಿತವಾಗದೇ ಸಾಹಿತ್ಯ, ಸಂಗೀತ, ನಾಟಕ ಇಂತಹ ಯಾವುದಾದರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾಹಿತಿ ಪ್ರತಿಭಾ ಚಾಮಾ ಮಾತನಾಡಿ, ಹಲವು ಸಾಂಸ್ಕೃತಿಕ ಕಲೆಗಳು ಗ್ರಾಮಗಳಲ್ಲಿ ಮಾತ್ರ ಜೀವಂತವಾಗಿವೆ. ಹಾಗಾಗಿ ಗ್ರಾಮಗಳನ್ನು ಅಭಿವೃದ್ಧಿಪಡಿಸಿದಲ್ಲಿ ಮಾತ್ರ ಕಲೆಗಳ ಬೆಳವಣಿಗೆ ಸಾಧ್ಯ ಎಂದು ಹೇಳಿದರು.
ಬೆಂಗಳೂರು ಮಹಿಳಾ ಟಾಸ್ಕ್ಫೋರ್ಸ್‌ನ ಮಾಜಿ ಅಧ್ಯಕ್ಷೆ ಗುರಮ್ಮಾ ಸಿದ್ದಾರೆಡ್ಡಿ ಮಾತನಾಡಿದರು. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ವಿಜಯಕುಮಾರ ಸೋನಾರೆ, ಹಿರಿಯ ಚಿತ್ರಕಲಾವಿದೆ ಶಾಂತಾ ಕೆ.ಸೌದತ್ತಿ, ಸಾಹಿತಿಗಳಾದ ಭಾರತಿ ವಸ್ತ್ರದ, ಗಂಗಮ್ಮ ಫುಲೆ, ಸಂಜೀವಕುಮಾರ ಅತಿವಾಳೆ ಹಾಗೂ ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ ಸ್ವಾಗತಿಸಿದರು. ಶ್ರೀದೇವಿ ಪಾಟೀಲ ನಿರೂಪಿಸಿದರು. ಪ್ರಿಯಾ ಲಂಜವಾಡಕರ್ ವಂದಿಸಿದರು.
ಕಾರ್ಯಕ್ರಮದಲ್ಲಿ ರಂಗೋಲಿ, ಆಶುಭಾಷಣ ಸ್ಪರ್ಧೆಗಳಲ್ಲಿ ವಿಜೇತರು, ಚಿತ್ರಕಲಾ ಶಿಬಿರ, ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆ, ಆಹಾರ ಮಳಿಗೆಯಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ರಂಗೋಲಿಯಲ್ಲಿ ಮೂಡಿ ಬಂದ ಬಣ್ಣ-ಬಣ್ಣದ ಚಿತ್ರಗಳು ನೋಡುಗರ ಗಮನ ಸೆಳೆದವು. ಬಳಿಕ ಸ್ತ್ರೀಯರ ಸಮಸ್ಯೆಗಳ ಕುರಿತು ನಡೆದ ಕವಿಗೋಷ್ಠಿಯಲ್ಲಿ ಹಿರಿಯ ಸಾಹಿತಿ ರಜಿಯಾ ಬಳಬಟ್ಟಿ ಅವರು ವಿಶೇಷ ಉಪನ್ಯಾಸ ನೀಡಿದರು. ಪುಷ್ಪಾ ಕನಕ, ಸುನೀತಾ ಬಿರಾದಾರ, ಸಾರಿಕಾ ಗಂಗಾ, ಮೇನಕಾ ಪಾಟೀಲ, ರೇಣುಕಾ ಮಠ, ಸುಮನ್ ಹೆಬ್ಟಾಳಕರ್, ಸಾಧನಾ ರಂಜೋಳಕರ್, ಕಾವ್ಯನಂದಿನಿ ಸಿಂಧೆ, ಪುಣ್ಯವತಿ ವಿಸಾಜಿ, ಚನ್ನಮ್ಮ ವಲ್ಲೆಪೂರೆ, ಕೃಷ್ಣಾಬಾಯಿ ಪವಾರ, ಕಲ್ಪನಾ ಶೀಲವಂತ, ಶ್ರೀದೇವಿ ಹೂಗಾರ ಅವರು ಸ್ತ್ರೀಯರ ಕುರಿತಾದ ಕವನಗಳನ್ನು ವಾಚಿಸಿದರು.