ಮನುಷ್ಯನ ಸಮೃದ್ಧಿಗೆ ಸ್ವಾಧ್ಯಾಯ- ತಪಸ್ಸು ಇವರೆಡೂ ಮುಖ್ಯ. ಹೊಳೆ ದಾಟಬೇಕಾದರೆ ನಾವಿಕ ಬೇಕು. ಎರಡು ಹುಟ್ಟು, ಒಬ್ಬ ಅಂಬಿಗ ಬೇಕು. ಸಂಸಾರವೆಂಬುದೊಂದು ನದಿ. ಜೀವನವೆಂಬುದು ನೌಕೆ ಇದ್ದಂತೆ. ಇದಕ್ಕೆ ಆತ್ಮಾವಲೋಕನ- ಕಾರ್ಯೋತ್ಸಾಹ ಎಂಬೆರಡು ಹುಟ್ಟುಗಳನ್ನು ಹಾಕುತ್ತ ಹೊರಟರೆ ಗುರಿ ತಲುಪುತ್ತೇವೆ. ಪ್ರಪಂಚವನ್ನು ನಾವು ಎರಡು ರೀತಿಯಲ್ಲಿ ವಿಂಗಡಿಸಬಹುದು. ಒಂದು “ಜಡ’, ಇನ್ನೊಂದು “ಜೀವ’.
ನೀರು, ಗಾಳಿ, ಭೂಮಿ, ಬೆಳಕು, ಅಗ್ನಿ, ಬಯಲು ಇವು ಜಡಪ್ರಪಂಚಕ್ಕೆ ಸೇರಿದ್ದು. ಮಾನವಾದಿಯಾಗಿ ಎಲ್ಲಾ ಪ್ರಾಣಿ ಸಂಕುಲ ಜೀವ ಪ್ರಪಂಚಕ್ಕೆ ಸೇರಿವೆ. ಇವೆರಡರ ಮಧ್ಯೆ ಬೆಸುಗೆ ಬೆಸೆದಾತನೇ ಭಗವಂತ. ಸೂರ್ಯನ ಕರುಣೆಯಿಂದ ಮಳೆಯು ಭುವಿಗೆ ಬಿದ್ದು, ಭೂತಾಯಿ ಮಳೆಯಿಂದ ಗರ್ಭ ಧರಿಸಿ ಬಸುರಾಗಿ, ಬಸುರು ಹಸಿರಾಗಿ, ಹಸಿರು ಸರ್ವ ಜೀವಿಗಳಿಗೆ ಉಸಿರಾಯಿತು. ಇದು ವಿಜ್ಞಾನ. ಇರುವ ಒಂದೇ ಹಸಿರು ಬಳ್ಳಿಯೊಳಗೆ ಹರಿದು ಹೂವಾಗಿ ಅರಳಿತು.
ಅದೇ ಹಸಿರು ಗಿಡದಲ್ಲಿ ಹರಿದು ಹರಿದು ಹಣ್ಣಾಯಿತು. ಅದೇ ಹಸಿರು ಹಸುವಿನಲ್ಲಿ ಹರಿದು ಹಾಲಾಯಿತು. ಎಲ್ಲರೊಳಗೆ ಹರಿದಿದ್ದು ಒಂದೇ ಹಸಿರು. ತಾಯಿಗರ್ಭದಲ್ಲಿ ಬೆಳೆಯುವ ಮಗುವಿಗಾಗಿ ಆರು ತಿಂಗಳಲ್ಲೇ ತಾಯಿ ಎದೆಯಲ್ಲಿ ಅಮೃತ ತುಂಬಿರುತ್ತಾನೆ ಭಗವಂತ. ಮಗುವಿಗೆ ಜನ್ಮ ನೀಡಿದಾಕ್ಷಣ ತಾಯಿ ಮುದುಕಿಯಾಗಿ ಮಗಳಿಗೆ ಯೌವ್ವನ ಧಾರೆ ಎರೆಯುತ್ತಾಳೆ. ಮಗುವಿಗೆ ಹಾಲುಣಿಸುವಾಗ ತಾಯಿ ತನ್ನ ದೃಷ್ಟಿ ಮಗುವಿನ ಮೇಲೆ ಬೀಳದಂತೆ ಸೆರಗು ಮುಚ್ಚುತ್ತಾಳೆ ಬೇರೆಯವರ ದೃಷ್ಟಿ ಬೀಳಬಾರದಂತಲ್ಲಾ.
ಮನೆ ಮುಂದೆ ನಂದಿನಿ ಹಾಲಿನವನಿಗೆ ನಿತ್ಯ ಹಾಲಿನ ಬಿಲ್ ಕೊಡುತ್ತೇವೆ. ಆದರೆ, ಮಕ್ಕಳಿಗೆ ತಾಯಿ ಹಾಲುಣಿಸಿದ್ದಕ್ಕೆ ಎಂದಿಗೂ ಬಿಲ್ ಕೇಳಲ್ಲ, ಪ್ರೇಮದ ದಿಲ್ ಕೇಳುತ್ತಾಳೆ. ವಿಶ್ವದಲ್ಲಿ ನೂರಾರು ಭಾಷೆಗಳಿದ್ದರೂ ವಾಸ್ತವವಾಗಿ ಇರುವುದು, ಎರಡೇ ಭಾಷೆ. ಒಂದು ದೇವ ಭಾಷೆ, ಇನ್ನೊಂದು ಭಕ್ತನ ಭಾಷೆ. ಕೊಲ್ಲುವೆನೆಂಬ ಭಾಷೆ ದೇವನದಾದರೆ, ಗೆಲ್ಲುವನೆಂಬ ಭಾಷೆ ಭಕ್ತನದು. ನಾವೆಲ್ಲರೂ ಬಯಸುವುದು ಗೆಲುವನ್ನು, ಸೋಲನ್ನಲ್ಲ.
ಸೋಲನ್ನು ಯಾರೂ, ಎಂದೂ ಬಯಸಲ್ಲ. ಒಬ್ಬ ಋಷಿ ದೇವರ ಹತ್ತರ ಹೋಗಿ, “ಜಗತ್ತಿನ ಜನರಂತೆ ನಾನು ನಿನ್ನಲ್ಲಿ ಕೇಳಲಿಕ್ಕೆ ಬಂದವನಲ್ಲ. ನಿನ್ನಲ್ಲಿ ಶಕ್ತಿ, ಸಾಮರ್ಥ್ಯ ಇರುವಷ್ಟು ನನಗೆ ಕಷ್ಟ ಕೊಡು. ದೇವಾ ನಾ ಕೇಳಿಕೊಳ್ಳುವುದಿಷ್ಟೆ, ನೀನು ಕೊಟ್ಟ ಕಷ್ಟಗಳನ್ನು ತಾಳಿಕೊಳ್ಳುವ ಶಕ್ತಿ ಕೊಡು’ ಎನ್ನುತ್ತಾನೆ. ಇದು ಗೆಲುವಿನ ಭಾಷೆ.
* ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಗವಿಸಿದ್ದೇಶ್ವರ ಮಠ, ಕೊಪ್ಪಳ