Advertisement
ಬ್ರಿಸ್ಟಲ್ ಎನ್ನುವ ಈ ಪಟ್ಟಣವನ್ನು ಕೇಳದ ತಿಳಿಯದ ಮನುಷ್ಯರು ಜಗತ್ತಿನಲ್ಲಿ ಬಹಳ ಮಂದಿ ಇರಬಹುದು, ಆದರೆ, ಬ್ರಿಸ್ಟಲ್‌ನ ಪರಿಚಯ ಇರದ ವಿಮಾನಗಳು ಹೆಚ್ಚು ಇರಲಿಕ್ಕಿಲ್ಲ. ವಿಮಾನ ಜಗತ್ತಿನ ಜನಪ್ರಿಯ ಊರು ಬ್ರಿಸ್ಟಲ…. ಈಗಷ್ಟೇ ತನ್ನ ವಿಮಾನ ಸೇವೆ ಆರಂಭಿಸಿದ ಎಳೆ ಯೌವ್ವನದ ಹುಡುಗಾಟದ ವಿಮಾನಗಳಿರಬಹುದು ಅಥವಾ ವರ್ಷಾನುಗಟ್ಟಲೆ ಏರಿ ಹಾರಿ ಸೋತು ಬಸವಳಿದು ನಿವೃತ್ತವಾದ ಮುದಿವಿಮಾನಗಳಿರಬಹುದು- ಅಂತಹ ಹಲವು ವಿಮಾನಗಳ ತವರು ಬ್ರಿಸ್ಟಲ…. ಕಳೆದ ಒಂದು ಶತಮಾನಕ್ಕಿಂತಲೂ ಹೆಚ್ಚು ಕಾಲ ವಿಮಾನಲೋಕದ ಜೊತೆ ಬ್ರಿಸ್ಟಲ್‌ಗೆ ಬಹಳ ಹತ್ತಿರದ ಸಂಬಂಧ.
Related Articles
Advertisement
ಮತ್ತೆ ನಿರ್ಮಾಣದ ಕೊನೆಯ ಹಂತವಾಗಿ ಆಯಾ ದೇಶದ ಊರುಗಳಿಂದ ಫ್ರಾನ್ಸ್‌ನ ಟುಲೂಸ್ ಎನ್ನುವ ಊರಿಗೆ ವಿಮಾನದ ಭಾಗಗಳೆಲ್ಲ ಸಾಗಿಸಲ್ಪಟ್ಟು ಕೊನೆಯ ಹಂತದ ಜೋಡಣೆ ನಡೆಯುತ್ತದೆ. ಆಮೇಲೆ ಕಠಿಣ ಪರೀಕ್ಷೆ, ತೀವ್ರ ತಪಾಸಣೆಗಳಿಗೆ ಒಳಪಟ್ಟು ಆಕಾಶಕ್ಕೆ ಹಾರುವ ಪರವಾನಿಗೆ ಪಡೆಯುತ್ತದೆ. ಮತ್ತೆ ವಿಮಾನ ನಡೆಸುವ ಬೇರೆ ಬೇರೆ ಕಂಪೆನಿಗಳಿಗೆ ಮಾರಲ್ಪಡುತ್ತವೆ. ಅಂತಹ ವಿಮಾನಗಳು ನಮ್ಮ-ನಿಮ್ಮ ಮೇಲಿನ ಆಕಾಶದಲ್ಲಿ ಹಾರತೊಡಗುತ್ತವೆ.
ಜಗತ್ತಿನ ನಾಗರಿಕ ವಿಮಾನ ಮಾರುಕಟ್ಟೆಯ ಸುಮಾರು ಅರ್ಧ ಭಾಗ ಯೂರೋಪಿನ ವಿಮಾನ ತಯಾರಕ ಏರ್‌ಬಸ್ ಕಂಪೆನಿಯ ಅಧಿಪತ್ಯದಲ್ಲಿದೆ. ಉಳಿದರ್ಧ ಅಮೆರಿಕದ ಬೋಯಿಂಗ್ ಬಳಿ. ಯೂರೋಪಿನ ವಿಮಾನ ತಯಾರಿಕೆಯ ಏರ್‌ಬಸ್ ಕಂಪೆನಿಯ ಎಲ್ಲ ವಿಮಾನಗಳ ರೆಕ್ಕೆಗಳು ವಿನ್ಯಾಸಗೊಳ್ಳುವುದು ಇಂಗ್ಲೆಂಡ್‌ನ ಬ್ರಿಸ್ಟಲ್‌ನಲ್ಲಿ; ಅಂದರೆ ಈಗಿನ ನಮ್ಮೂರಿನಲ್ಲಿ ! ಸಣ್ಣ ಪ್ರಯಾಣ, ಹದ ಪ್ರಯಾಣ, ದೂರ ಪ್ರಯಾಣ, ಇನ್ನೂರು ಜನ ಹಿಡಿಸುವ, ಐನೂರು ಜನ ಹತ್ತಿದರೂ ತುಂಬದ ತರಹ ತರಹದ ವಿಮಾನಗಳು ಎಂದು ಗುರುತಿಸಲ್ಪಡುವ ಎಲ್ಲ ವಿಮಾನಗಳ ರೆಕ್ಕೆಗಳೂ ನಮ್ಮ ಕಚೇರಿಯಲ್ಲಿ ವಿನ್ಯಾಸಗೊಳ್ಳುತ್ತವೆ. ಎ380, ಎ350, ಎ30, ಎ320 ಎಂದೆಲ್ಲ ಹೆಸರು ಪಡೆದ ಏರ್‌ಬಸ್ ತಯಾರಿಸಿದ ವಿಮಾನಗಳ ಸಂತತಿಯ ಪಟ್ಟಿ ಬೆಳೆಯುತ್ತಿದೆ. ಇತ್ತೀಚಿನ ಗಣತಿಯ ಪ್ರಕಾರ ಸುಮಾರು ಹತ್ತು ಸಾವಿರ ಏರ್‌ಬಸ್ ನಿರ್ಮಿತ ವಿಮಾನಗಳು ಈಗ ಸೇವೆಯಲ್ಲಿವೆ. ಹಾಗಾಗಿಯೇ, ನಾವು-ನೀವು ಆಕಾಶದಲ್ಲಿ ನೋಡುವ ವಿಮಾನಗಳು ಒಂದೋ ಬ್ರಿಸ್ಟಲ್ ಅಲ್ಲಿ ತಮ್ಮ ರೆಕ್ಕೆಯನ್ನು ತಯಾರಿಸಿಕೊಂಡಿರಬೇಕು ಅಥವಾ ಅಮೆರಿಕದ ಬೋಯಿಂಗ್ ಅಲ್ಲಿ ತಯಾರಾಗಿ ಬ್ರಿಸ್ಟಲ್ ಮತ್ತು ಯೂರೋಪ್ ಅಲ್ಲಿ ತಯಾರಾದ ಏರ್‌ಬಸ್ ವಿಮಾನಗಳ ಸ್ಪರ್ಧಿ ಆಗಿರಬೇಕು. ಏರ್‌ಬಸ್ ಮತ್ತು ಬೋಯಿಂಗ್‌ಗಳಲ್ಲದೆ ಸಣ್ಣ ವಿಮಾನಗಳನ್ನು ತಯಾರಿಸುವ ಕೆನಡಾ, ಬ್ರೆಝಿಲ್‌ನಂತಹ ದೇಶಗಳ ವಿಮಾನ ಕಂಪೆನಿಗಳೂ ಇವೆ. ಅವೆಲ್ಲ ಗಾತ್ರದಲ್ಲೂ ಶಬ್ದದಲ್ಲೂ ಆಕಾರದಲ್ಲೂ ಜನಾಕರ್ಷಣೆಯಲ್ಲೂ ಏರ್‌ಬಸ್ ಮತ್ತು ಬೋಯಿಂಗ್‌ನ ವಿಮಾನಗಳನ್ನು ಹಿಂದಿಕ್ಕುವುದು ಇಲ್ಲಿಯವರೆಗೆ ಸಾಧ್ಯ ಆಗಿಲ್ಲ. ಚೈನಾ ಈಗಷ್ಟೇ ತಾನು ಸಿದ್ಧಪಡಿಸುತ್ತಿರುವ ಸಣ್ಣ ಗಾತ್ರದ ನಾಗರಿಕ ವಿಮಾನದ ಪರೀಕ್ಷೆ ನಡೆಸುತ್ತಿದೆ. ಶತಮಾನಕ್ಕಿಂತ ದೀರ್ಘ ಇತಿಹಾಸದ ಬ್ರಿಸ್ಟಲ್‌ನಲ್ಲಿ ತಯಾರಿಸಲ್ಪಟ್ಟು ಹಾರುವ ವಿಮಾನ ರೆಕ್ಕೆಗಳು ಇದರಿಂದ ಸಣ್ಣ ಚಿಂತೆಗೂ ಒಳಗಾಗುತ್ತವೆ. ಮುಂದೊಂದು ದಿನ ಚೀನಾ ನಿರ್ಮಿತ ವಿಮಾನಗಳು ಆಕಾಶವನ್ನು ತುಂಬಿಯಾವೇ ಎಂದು ಸಂದೇಹಪಡುತ್ತವೆ. ವಿಮಾನದ ರೆಕ್ಕೆಗಳಿಗಾಗಿ ತನ್ನನ್ನು ನೆನಪಿಡುವ ಮಂದಿ, ಉದ್ಯೋಗಕ್ಕಾಗಿ ತನ್ನನ್ನು ಅರಸಿ ಬರುವ ಜನ ಮುಂದೂ ಇರಬಹುದೇ, ಬರಬಹುದೇ ಎಂದೂ ಯೋಚಿಸುತ್ತವೆ.
ವಿಮಾನದ ರೆಕ್ಕೆಗಳನ್ನು ತಯಾರಿಸುವುದು, ವಿಮಾನಗಳನ್ನು ಜೋಡಿಸುವುದು, ಅವುಗಳನ್ನು ವಿಮಾನಯಾನ ನಡೆಸುವ ಏರ್‌ಲೈನ್‌ಗಳಿಗೆ ಮಾರುವುದು, ಅವು ಸುರಕ್ಷಿತವಾಗಿ ದಶಕಗಳ ಕಾಲ ಹಾರುವುದು, ಮುಂದೆ ದುರಸ್ತಿಯ ಕೆಲಸ ಬಂದಾಗ ಅದನ್ನು ತಯಾರಿಸಿದ ಕಂಪೆನಿ ಸರಿಯಾದ ಮತ್ತು ತುರ್ತು ಸೇವೆ ನೀಡುವುದು ಇವೆಲ್ಲ ಸಂಕೀರ್ಣ ಸವಾಲುಗಳು ಮತ್ತು ಕಷ್ಟದ ವಿಷಯಗಳು. ಅಮೆರಿಕ ಮತ್ತು ಯೂರೋಪುಗಳ ಅಧಿಪತ್ಯದ ವಿಮಾನ ಲೋಕದಲ್ಲಿ ಪಾಲು ಪಡೆಯಬೇಕೆಂದು ಚೈನಾ, ಜಪಾನ್, ರಷ್ಯಾಗಳು ತಯಾರಿ ನಡೆಸುತ್ತಿದ್ದರೂ ಆ ಪ್ರಯತ್ನಗಳಿಗೆ ಯಶಸ್ಸು ಸಿಗುತ್ತದೆ ಎನ್ನುವುದು ನಿಶ್ಚಿತ ಇಲ್ಲ. ಹೊಸ ವಿಮಾನಗಳ ಮೂಲಕ ವಿಮಾನ ಲೋಕಕ್ಕೆ ಲಗ್ಗೆ ಇಡುವ ಪ್ರಯತ್ನ, ಸಂಶೋಧನೆ, ಪರೀಕ್ಷೆಗಳು ಅಂತಹ ದೇಶಗಳ ವಿಮಾನ ತಯಾರಕರಿಂದ ನಡೆಯುತ್ತಲೇ ಇವೆ. ಇಂತಹ ಹೊತ್ತಲ್ಲಿ ಬ್ರಿಸ್ಟಲ್‌ನಲ್ಲಿ ಹುಟ್ಟಿದ ವಿಮಾನ ರೆಕ್ಕೆಗಳು ಒಮ್ಮೆ ತನ್ನ ಭವ್ಯ ಇತಿಹಾಸದ ಕಡೆಗೆ ತಿರುಗಿ ನೋಡುತ್ತ ಮತ್ತೂಮ್ಮೆ ಭವಿಷ್ಯದ ಅನಿಶ್ಚಿತತೆಯ ಕಡೆಗೆ ಯೋಚಿಸುತ್ತ ಎತ್ತರದ ಆಕಾಶದಲ್ಲಿ ಹಾರುತ್ತಿವೆ.
– ಯೋಗೀಂದ್ರ ಮರವಂತೆ