ಹುಣಸೂರು: ನಾಗರಹೊಳೆ ಉದ್ಯಾನದಂಚಿನ ಗ್ರಾಮಗಳಲ್ಲಿ ನಿತ್ಯ ಕಾಡಾನೆ ಹಾವಳಿ ಮಿತಿಮೀರಿದ್ದು. ಒಂದೇ ರಾತ್ರಿಯಲ್ಲಿ ಅಪಾರ ಬೆಳೆ ನಷ್ಟ ಉಂಟು ಮಾಡಿರುವ ಘಟನೆ ತಾಲೂಕಿನ ಚಂದನಗಿರಿಯಲ್ಲಿ ನಡೆದಿದೆ.
ಕಾಡಿನಿಂದ ಸೋಮವಾರ ರಾತ್ರಿ ಮೇವನ್ನರಸಿ ಅರಣ್ಯದಿಂದ ಹೊರಬಂದ ಕಾಡಾನೆಗಳ ಹಿಂಡು ಹುಣಸೂರು ವಲಯದ ಚಂದನಗಿರಿ ಗ್ರಾಮದ ತಾಪಂ ಸದಸ್ಯೆ ರಾಜೇಂದ್ರಬಾಯಿರಿಗೆ ಸೇರಿದ ಎರಡು ಎಕರೆ ರಾಗಿ ಬೆಳೆ ಸಂಪೂರ್ಣ ತಿಂದು ಹಾಕಿವೆ, ಇದೇ ಗ್ರಾಮದ ಪ್ರೇಮ, ಅಣ್ಣಯ್ಯ, ಶಂಕರ್, ಬೆರ,ಚಿರಂಜೀವಿ ರವರಿಗೆ ಸೇರಿದ ಮುಸುಕಿನ ಜೋಳದಬೆಳೆ ಹಾಗೂ ಚಂದ್ರರ ಶುಂಠಿಬೆಳೆ,
ಕಚುವಿನಹಳ್ಳಿ ಗ್ರಾಮದ ಮಾದೇಗೌಡ, ತಾಯಮ್ಮ ಸೇರಿದ ರಾಗಿ ಬೆಳೆಯನ್ನು ತಿಂದು ತುಳಿದು ನಾಶಪಡಿಸಿವೆ. ಜೊತೆಗೆ ರಾಜೇಂದ್ರಬಾಯಿಯವರು ತಮ್ಮ ಜಮೀನಿಗೆ ಅಳವಡಿಸಿದ್ದ ನೀರಾವರಿಯ ಸ್ಪಿಂಕ್ಲರ್ ಪೆಪ್ ಮತ್ತು ಸೋಲಾರ್ ತಂತಿ ಬೇಲಿಯನ್ನು ಸಹ ಕಿತ್ತು ತುಳಿದು ನಾಶಪಡಿಸಿವೆ. ಸ್ಥಳಕ್ಕೆ ಕಚುವಿನಹಳ್ಳಿ ಶ್ರೇಣಿಯ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾಡಾನೆ ಹಾವಳಿ ತಪ್ಪಿಲ್ಲ: ಕಳೆದ ಆರು ತಿಂಗಳಿಂದ ಕಾಡಾನೆಗಳು ಈ ಭಾಗದ ಹೆಬ್ಟಾಳ, ಕಲ್ಲುಗುಂಡಿ, ಹಾಗೂ ಸಣ್ಣಮ್ಮನಕುಂಚಿಯ ಅರಣ್ಯ ಪ್ರದೇಶದಿಂದ ಕಾಡಾನೆಗಳ ಹಿಂಡು ಪ್ರತಿನಿತ್ಯ ಲಗ್ಗೆ ಇಟ್ಟು ರೈತರು ಬೆಳೆದ ಬೆಳೆಗಳನ್ನು ತಿಂದು ತುಳಿದು ನಾಶ ಪಡಿಸುತ್ತಿವೆ. ಅರಣ್ಯ ಇಲಾಖೆಯವರು ಎಚ್ಚೆತ್ತುಕೊಂಡು ಆನೆ ಹಾವಳಿ ನಿಯಂತ್ರಿಸಲು ಇನ್ನು ಹೆಚ್ಚಿನ ರಾತ್ರಿ ಕಾವಲು ಪಡೆ ನಿಯೋಜಿಸಬೇಕೆಂದು ರೈತರ ಆಗ್ರಹಿಸಿದ್ದಾರೆ.
ಬಾರದ ಪರಿಹಾರ, ರೈತರ ಆಕ್ರೋಶ: ಕಳೆದ ವರ್ಷ ಕೆ.ಜಿ. ಹೆಬ್ಬನ ಕುಪ್ಪೆ ಗ್ರಾಮದ ಎಂ.ಪಿ.ಪೂಣಚ್ಚ, ಎಂ.ಪಿ.ಕಮಲ. ಬಿಲ್ಲೇನ ಹೊಸಹಳ್ಳಿಯ ಜಾನ್ಸನ್, ಕಚುವಿನ ಹಳ್ಳಿಯ ಮಾದೇಗೌಡ, ನೇರಳಕುಪ್ಪೆಯ ಎ.ವಿ. ಬಾಲಕಷ್ಣ ಶಗ್ರಿತಾಯ, ಸಣ್ಣತಮ್ಮೇಗೌಡ ವಿ.ಸಿ ಸಂಜೀವ, ಕಾಳಬೋಚನಹಳ್ಳಿಯ ಹೊನ್ನೇಗೌಡ, ಸಿಎನ್ ಬೀರೇಗೌಡ ಸೇರಿದಂತೆ ಇನ್ನು ಹತ್ತಾರು ರೈತರ ಜಮೀನುಗಳಿಗೆ ಕಾಡಾನೆಗಳ ಹಿಂಡು ದಾಳಿ ಮಾಡಿ ಬೆಳೆ ನಾಶ ಪಡಿಸಿದ್ದವು.
ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿ, ವರ್ಷವಾದರೂ ಇನ್ನು ಪರಿಹಾರ ನೀಡಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ವರದಿ ನೀಡಿದ್ದರೂ ಪ್ರಯೋಜನವಾಗಿಲ್ಲ, ಇನ್ನಾದರೂ ರೈತರಿಗೆ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ನೊಂದ ರೈತರೊಂದಿಗೆ ಅರಣ್ಯ ಇಲಾಖೆ ಕಚೇರಿಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಎಸ್ಸಿ,ಎಸ್ಟಿ ಹಿತರಕ್ಷಣಾ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್ ಮತ್ತು ರೈತರು ಎಚ್ಚರಿಕೆ ನೀಡಿದ್ದಾರೆ.