ಬೆಂಗಳೂರು: ತನ್ನ ಪತಿ ಆತನ ಸ್ನೇಹಿತರ ಜತೆ ಲೈಂಗಿಕ ಸಂಬಂಧ ಬೆಳೆಸುವಂತೆ ಪೀಡಿಸುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಈ ಸಂಬಂಧ ಅಮೃತಹಳ್ಳಿ ನಿವಾಸಿ 42 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಆಕೆಯ ಪತಿ ಮಂಗಳೂರು ಮೂಲದ ಸುಧೀರ್ ಪೈ (47) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಮಹಿಳೆ ಹಾಗೂ ಆರೋಪಿ ಸುಧೀರ್ ಪೈ 2007ರಲ್ಲಿ ಮದುವೆಯಾಗಿದ್ದರು. ದಂಪತಿಗೆ 11 ವರ್ಷದ ಮಗ ಹಾಗೂ 10 ವರ್ಷದ ಮಗಳಿದ್ದಾರೆ. ಈ ಮೊದಲು ಮಂಗಳೂರಿನ ಅಪ್ಪರ್ ಬೈಂದೂರಿನಲ್ಲಿ ವಾಸವಾಗಿದ್ದರು. ಈ ವೇಳೆಯೇ ದಂಪತಿ ನಡುವೆ ಕೌಟುಂಬಿಕ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಈ ಮಧ್ಯೆ ಪತಿಯ ಮೊಬೈಲ್ನ ವಾ ಟ್ಸ ಆಪ್ ಪರಿಶೀಲಿಸಿದಾಗ, ತನ್ನ ಸ್ನೇಹಿತರ ಜತೆ ತಮ್ಮಿಬ್ಬರ ದೈಹಿಕ ಸಂಬಂಧದ ಕುರಿತು ಮಾತನಾಡಿದ್ದಾನೆ. ಜತೆಗೆ ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ಚರ್ಚಿಸಿರುವುದು ಪತ್ತೆಯಾಗಿತ್ತು. ಅದನ್ನು ಪ್ರಶ್ನಿಸಿದಾಗ ಆರೋಪಿ ಪತಿ “ನಿನಗೆ ನಿನ್ನ ಮಕ್ಕಳಿಗೆ ಜೀವನಾಂಶ ಕೊಡುವುದಿಲ್ಲವೆಂದು’ ಗಲಾಟೆ ಮಾಡಿ, ಸಾಯಿಸುವುದಾಗಿ ಬೆದರಿಸಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಬಳಿಕ ಎರಡ್ಮೂರು ಬಾರಿ ಹಿರಿಯ ಸಮ್ಮುಖದಲ್ಲಿ ಸಂಧಾನ ಮಾಡಲಾಗಿತ್ತು. ಬಳಿಕ ಅಮೃತಹಳ್ಳಿಯಲ್ಲಿ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಾಗಿದ್ದರು. ಆದರೆ, ಕೆಲ ತಿಂಗಳಿಂದ ಪತಿ, ತನ್ನ ಸ್ನೇಹಿತರ ಜತೆ ದೈಹಿಕ ಸಂಪರ್ಕ ಬೆಳೆಸುವಂತೆ ಒತ್ತಾಯಿಸುತ್ತಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.