ಅದೊಂದು ಪಟ್ಟಣ. ಹತ್ತಾರು ಪುಟ್ಟ ಪುಟ್ಟ ಮನೆಗಳಿದ್ದವು. ಅಲ್ಲಿ ವಾಸವಿದ್ದವರೆಲ್ಲ ಪಟ್ಟಣದ ಫ್ಯಾಕ್ಟರಿಯೊಂದರಲ್ಲಿ ಕಾರ್ಮಿಕರು. ಕಡಿಮೆ ಸಂಬಳದಲ್ಲಿ ಹೇಗೋ ಜೀವನ ಸಾಗಿಸುತ್ತಿದ್ದರು. ಪಟ್ಟಣದ ದುಬಾರಿ ವಸ್ತುಗಳು ಅವರ ಜೀವನವನ್ನು ದುಸ್ತರಗೊಳಿಸಿದ್ದವು. ಹೀಗಾಗಿ ಅವರು ದುಂದುವೆಚ್ಚ ಮಾಡದೇ ಸರಳವಾಗಿ ಬದುಕಿದ್ದರು.
ಅವರ ಮನೆಗಳಿಗೆ ನಿತ್ಯ ಹಾಲು ತರುತ್ತಿದ್ದ ಹಾಲಪ್ಪ ಲೀಟರ್ ಹಾಲಿಗೆ ಹೆಚ್ಚುವರಿಯಾಗಿ ಎರಡು ರೂಪಾಯಿ ಪಡೆಯುತ್ತಿದ್ದವ “ನಾಳೆಯಿಂದ ಐದು ರೂಪಾಯಿ ಹೆಚ್ಚಿಗೆ ಕೊಟ್ಟರೆ ಮಾತ್ರ ಹಾಲು ಕೊಡುತ್ತೇನೆ. ಇಲ್ಲದಿದ್ದರೆ ಆಗದು’ ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟ. ಮೊದಲೇ ಲೆಕ್ಕ ಹಾಕಿ ಖರ್ಚು ಮಾಡುತ್ತಿದ್ದ ಆ ಬಡ ಕಾರ್ಮಿಕರಿಗೆ ಇದು ಭಾರವೆನಿಸಿತು. ಆ ಸಂಜೆ ಎಲ್ಲರೂ ಸಭೆ ಸೇರಿ ತಲಾ ಎರಡು ಸಾವಿರ ರೂಪಾಯಿ ಸೇರಿಸಿ ಒಂದು ಜರ್ಸಿ ಹಸು ಖರೀದಿಸಲು ತೀರ್ಮಾನಿಸಿದರು. ಸಹಕಾರ ತತ್ವದಂತೆ ಅದರ ಜವಾಬ್ದಾರಿ ಹಂಚಿಕೊಳ್ಳುವುದು ಎಂದು ನಿರ್ಧರಿಸಿದರು. ಆದರೆ ಇದು ಜಿಪುಣ ಶಂಕ್ರಪ್ಪನಿಗೆ ಇಷ್ಟವಿರಲಿಲ್ಲ. ಕೈಯಿಂದ ಹಣ ಖರ್ಚು ಮಾಡುವುದೆಂದರೆ ಅವನಿಗೆ ಆಗುತ್ತಿರಲಿಲ್ಲ. ಬಡವರ ಅವಶ್ಯಕತೆಯನ್ನೇ ಬಂಡವಾಳ ಮಾಡಿಕೊಂಡು ಬಡ್ಡಿ ಸಾಲ ನೀಡುತ್ತ ಅವನು ಶಿåàಮಂತನಾಗಿದ್ದ.
ಎಲ್ಲರೂ ಒಪ್ಪಂದದಂತೆ ಎರಡು ಸಾವಿರ ಕೊಟ್ಟರೆ ಶಂಕ್ರಪ್ಪ ನಂತರ ಕೊಡುತ್ತೇನೆಂದ. ಅವನ ಗುಣ ಗೊತ್ತಿದ್ದ ಎಲ್ಲರೂ ತಾವೇ ಹಣ ಹಾಕಿ ಹಸು ತಂದು ಪಾಳಿ ಮೇಲೆ ನಿರ್ವಹಣೆ ಹಂಚಿಕೊಂಡರು. ದಿನಕ್ಕೊಬ್ಬರು ಹಸು ಮೇಯಿಸುವುದು, ಹಾಲು ಕರೆದು ಎಲ್ಲರಿಗೂ ಸಮವಾಗಿ ಹಂಚುವುದು ಎಂದು ಒಪ್ಪಂದವಾಗಿತ್ತು. ಎಲ್ಲರೂ ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದರೆ ಶಂಕ್ರಪ್ಪ ಹಸುವಿಗೆ ಸರಿಯಾಗಿ ಮೇಯಿಸದಿರುವುದು. ಅರ್ಧದಷ್ಟು ಹಾಲು ಕದ್ದು ಹೊರಗಡೆ ಮಾರುವುದು. ಉಳಿದ ಹಾಲಿಗೆ ನೀರು ಬೆರೆಸಿ ಪಾಲುದಾರರಿಗೆ ಹಂಚುವುದು ಮಾಡುತ್ತಿದ್ದ. ಸರಿಯಾದ ಸಮಯ ನೋಡಿ ಅವನಿಗೆ ಪಾಠ ಕಲಿಸಬೇಕೆಂದು ಹಿರಿಯರು ನಿರ್ಧರಿಸಿದರು.
ಶಂಕ್ರಪ್ಪ ಹಾಲು ಕರೆಯುವ ದಿನ ಹಿರಿಯರು ಹಸುವನ್ನು ಕೆರಳುವಂತೆ ಮಾಡಿ ಹೋದರು. ಶಂಕ್ರಪ್ಪ ಹಾಲನ್ನು ಕರೆದ ನಂತರ ಚೊಂಬನ್ನು ನೆಲದ ಮೇಲೆ ಇಡುವ ಸಂದರ್ಭದಲ್ಲಿ ಹಸು ಅವನನ್ನು ಜೋರಾಗಿ ಒದೆಯಿತು. ಆಗ ಚೊಂಬಿನಲ್ಲಿದ್ದ ಹಾಲು ಕೂಡಾ ಚೆಲ್ಲಿಹೋಯಿತು. ಪ್ರತೀ ಸಲ ಶಂಕ್ರಪ್ಪ ಹಾಲು ಕರೆದಾಗಲೂ ಇದು ಮುಂದುವರಿಯಿತು. ಅವನಿಗೆ ಹಾಲು ಸಿಗದಾಯಿತು. ಅವನು ಹಿರಿಯರ ಬಳಿ ತನ್ನ ಸಮಸ್ಯೆಯನ್ನು ತೋಡಿಕೊಂಡ. ಅವರು ಹಸುವಿಗೆ ಚೆನ್ನಾಗಿ ಮೇವು ಹಾಕಿದರೆ, ಅನಾಚಾರ ಮಾಡದೇ ಇದ್ದರೆ ಇಂಥ ಸಮಸ್ಯೆಗಳು ಬರುವುದಿಲ್ಲ ಎಂದರು. ಶಂಕ್ರಪ್ಪನಿಗೆ ಎಲ್ಲವೂ ಅರ್ಥವಾಯಿತು. ಅವನು ತನ್ನ ತಪ್ಪನ್ನು ಸರಿಪಡಿಸಿಕೊಂಡ.
-ಅಶೋಕ ವಿ. ಬಳ್ಳಾ