Advertisement

Mangaluru: ಇವರ ಬದುಕಿನ ಬಂಡಿಯ ಗಾಲಿಗಳೇ ಧ್ವಂಸವಾಗಿವೆ!

12:43 PM Aug 01, 2024 | Team Udayavani |

ಮಹಾನಗರ: ನಗರದಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಬೀದಿಬದಿ ಅಂಗಡಿಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆಯಿಂದ ಮೂರು ದಿನಗಳಿಂದ ನಡೆಯುತ್ತಿರುವ ಟೈಗರ್‌ ಕಾರ್ಯಾಚರಣೆ ಪರ- ವಿರೋಧ ಚರ್ಚೆಗಳಿಗೆ ಕಾರಣವಾಗಿದೆ.

Advertisement

ಸುಗಮ ಸಂಚಾರಕ್ಕೆ ಅಡ್ಡಿಯಾಗುವುದರಿಂದ, ನಗರದ ಸೌಂದರ್ಯದ ದೃಷ್ಟಿಯಿಂದ ತೆರವು ಸರಿ ಎನ್ನುವವಾದ ಒಂದೆಡೆ. ಈ ವ್ಯಾಪಾರದಿಂದಲೇ ಒಪ್ಪೊತ್ತಿನ ಊಟವನ್ನು ಪಡೆಯುತ್ತಿರುವ ನೂರಾರು ಕುಟುಂಬಗಳ ಮೇಲೆ ಗದಾಪ್ರಹಾರ ಸರಿಯಲ್ಲ ಅವರಿಗೂ ಬದುಕುವ ಹಕ್ಕು ಇಲ್ಲವೇ, ಕಾನೂನು ಮಾತ್ರವೇ ಅಲ್ಲ, ಮಾನವೀಯತೆಯೂ ಮುಖ್ಯ ಎನ್ನುವ ವಾದಗಳೂ ಕೇಳಿಬರುತ್ತಿವೆ.
ಲೇಡಿಹಿಲ್‌ನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿಯಿಂದ ಮಣ್ಣಗುಡ್ಡೆ ರಸ್ತೆ, ಕೆಪಿಟಿಯ ವಿಮಾನ ನಿಲ್ದಾಣ ರಸ್ತೆ, ಕಂಕನಾಡಿ, ಕಂಕನಾಡಿ ಮಾರುಕಟ್ಟೆ, ಪಂಪ್‌ವೆಲ್‌, ಅತ್ತಾವರ ಸಹಿತ ಹಲವು ಕಡೆಗಳಲ್ಲಿ ಈಗಾಗಲೇ ಅನಧಿಕೃತ ಬೀದಿ ಬದಿ ಅಂಗಡಿಗಳನ್ನು ಪಾಲಿಕೆ ಅಧಿಕಾರಿಗಳು ಕೆಡವಿದ್ದಾರೆ. ಜೆಸಿಬಿ ಮೂಲಕ ಪುಡಿ ಮಾಡಿ ಟಿಪ್ಪರ್‌ಗಳಲ್ಲಿ ತುಂಬಿಸಿ ಪಚ್ಚನಾಡಿಗೆ ಸಾಗಿಸಲಾಗಿದೆ. ಕಾನೂನು ದೃಷ್ಟಿಯಿಂದ ಪಾಲಿಕೆ ನಡೆ ಸರಿಯಾದರೂ ಈ ವ್ಯಾಪಾರದಿಂದ ಒಂದು ಕುಟುಂಬದ ಜೀವನ ನಿರ್ವಹಣೆ ಸಾಗುತ್ತದೆ. ಹೀಗಿದ್ದಾಗ ಮಾನವೀಯತೆಯೂ ಮುಖ್ಯ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಮೊದಲು ಸ್ಥಳಾಂತರ ಮಾಡಿ
ಪಾಲಿಕೆಯಿಂದ ಈಗಾಗಲೇ ಬೀದಿ ಬದಿ ವ್ಯಾಪಾರಿಗಳ ಸರ್ವೇ ನಡೆಸಲಾಗಿದೆ. 665 ಬೀದಿ ಬದಿ ವ್ಯಾಪಾರಿಗಳನ್ನು ಗುರುತು ಮಾಡಲಾಗಿದ್ದು, ಅವರಿಗೆ ಐಡಿ ಕಾರ್ಡ್‌ ನೀಡಿ, ಸಂಬಂಧಪಟ್ಟ ವಲಯಕ್ಕೆ ಸ್ಥಳಾಂತರ ಮಾಡಬೇಕಿತ್ತು. ಆದರೆ ಈ ಯೋಜನೆ ಇನ್ನೂಸಮರ್ಪಕವಾಗಿ ಕಾರ್ಯಗತಗೊಂಡಿಲ್ಲ. ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ಸ್ಥಳ ನಿಯೋಜನೆ ಮಾಡದೆ ಏಕಾಏಕಿ ತೆರವು ಸರಿಯಲ್ಲ ಎನ್ನುತ್ತಾರೆ ವ್ಯಾಪಾರಿಗಳು.

ಕಣ್ಣೆದುರೇ ಅಂಗಡಿಗಳು ಧ್ವಂಸ
“ಮಂಗಳೂರಿನ ಮಣ್ಣಗುಡ್ಡ ಲೇಡಿಹಿಲ್‌ ಪರಿಸರದಲ್ಲಿ ಬೀದಿ ಬದಿ ವ್ಯಾಪಾರಿಗಳ ಮೇಲೆ ನಡೆದ ಟೈಗರ್‌ ಕಾರ್ಯಾಚರಣೆಯನ್ನು ಕಂಡಾಗ ಆ ವ್ಯಾಪಾರವನ್ನೇ ನಂಬಿದ್ದ ಅವರ ಜೀವನ ಏನಾಗಬೇಡ ಎಂಬ ಗಾಢ ಪ್ರಶ್ನೆಯೊಂದು ಕಾಡಿತು ಎನ್ನುತ್ತಾರೆ ಸಾಮಾ ಜಿಕ ಕಾರ್ಯಕರ್ತ ದಿಲ್‌ರಾಜ್‌ ಆಳ್ವ. ಪಾಲಿಕೆ ನೋಟಿಸ್‌ ಕೊಟ್ಟಿತ್ತು, ಅವರಿಗೆ ಮುಂಚಿತವಾಗಿ ತೆರವುಗೊಳಿ ಸಲು ಸೂಚಿಸಿತ್ತು, ಎಲ್ಲವೂ ಸರಿ.. ಹಾಗೆಂದು ಈ ಮಳೆಗಾಲದ ಈ ಕಷ್ಟಕರ ಸಂದರ್ಭದಲ್ಲಿ ಅವರ ತುತ್ತಿನ ಚೀಲವನ್ನು ತುಂಬುತ್ತಿದ್ದ ಅವರ ಆ ಗಾಡಿಗಳನ್ನು ಬುಲ್ಡೋಜರ್‌ ಬಳಸಿ ಪುಡಿಪುಡಿಗೈದದ್ದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದ್ದಾರೆ. ಮಳೆನೀರು ಬ್ಲಾಕ್‌ ಆಗುವ ಚರಂಡಿ, ರಸ್ತೆಯಲ್ಲಿರುವ ನೀರು ತುಂಬಿದ ಹೊಂಡಗಳು ಇಂತಹ ಸಮಸ್ಯೆಗಳಿಗೆ ತತ್‌ಕ್ಷಣ ಪರಿಹಾರ ಹುಡುಕುವುದನ್ನು ಬಿಟ್ಟು ಏಕಾಏಕಿ ಬೀದಿಬದಿ ವ್ಯಾಪಾರಿಗಳ ಮೇಲೆ ಪರಾಕ್ರಮ ಮೆರೆದದ್ದು ಸರಿಯೇ..?’ ಎಂದು ಕೇಳಿದ್ದಾರೆ ದಿಲ್‌ರಾಜ್‌ ಆಳ್ವ

ಮುಂದುವರಿದ ಕಾರ್ಯಾಚರಣೆ
ಬೀದಿ ಬದಿಯಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಗೂಡಂಗಡಿಗಳ ತೆರವಿಗಾಗಿ ಪಾಲಿಕೆಯಿಂದ ನಡೆಯುತ್ತಿದ್ದ “ಟೈಗರ್‌ ಕಾರ್ಯಾಚರಣೆ’ ಬುಧವಾರವೂ ಮುಂದುವರಿದಿದೆ. ಕೂಳೂರು ಜಂಕ್ಷನ್‌, ಕಾವೂರು, ಪಂಜಿಮೊಗರು ಸಹಿತ ಸುತ್ತಮುತ್ತ ಕಾರ್ಯಾಚರಣೆ ನಡೆದಿದೆ.

Advertisement

ಅನಧಿಕೃತ ಗೂಡಂಗಡಿಗೆ ಮಾತ್ರ ಸೀಮಿತ
ಅನಧಿಕೃತ ವ್ಯಾಪಾರ ಒತ್ತುವರಿ ವಿರುದ್ಧ ಟೈಗರ್‌ ಕಾರ್ಯಾಚರಣೆ ನಡೆಸಿರುವುದನ್ನು ವಿರೋಧಿಸಿ ಮಂಗಳೂರು ಮಹಾನಗರಪಾಲಿಕೆ ಕೇಂದ್ರ ಕಚೇರಿಯಲ್ಲಿ ಮುಷ್ಕರ ನಿರತರಾಗಿದ್ದ ಬೀದಿ ವ್ಯಾಪಾರಿಗಳು ನನ್ನನ್ನು ಭೇಟಿಯಾಗಿದ್ದಾರೆ. ಟೈಗರ್‌ ಕಾರ್ಯಾಚರಣೆಯು ಅನಧಿಕೃತ ಗೂಡಂಗಡಿಗಳಿಗೆಮಾತ್ರ ಸೀಮಿತವಾಗಿರಲಿ, ತಳ್ಳುಗಾಡಿ ವ್ಯಾಪಾರ, ಬಟ್ಟೆ
ವ್ಯಾಪಾರ ಮಾಡುತ್ತಿರುವ ಬಡ ವ್ಯಾಪಾರಿಗಳನ್ನು ಹೊರತುಪಡಿಸುವಂತೆ ಮನವಿ ಮಾಡಿರುತ್ತಾರೆ. ಇದಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಟೈಗರ್‌ ಕಾರ್ಯಾಚರಣೆ ಮುಂದುವರಿಯಲಿದೆ. ಕಾರ್ಯಾಚರಣೆ ಸಮಯದಲ್ಲಿ ಜಪ್ತಿ ಮಾಡಲಾದ ವಸ್ತುಗಳನ್ನು ವ್ಯಾಪಾರಿಗಳಿಗೆ ಮರಳಿಸಲಾಗುತ್ತದೆ.

– ಆನಂದ್‌ ಸಿ.ಎಲ್‌., ಮಹಾನಗರ ಪಾಲಿಕೆ ಆಯುಕ್ತರು

ಜಿಲ್ಲಾಡಳಿತ ಮಧ್ಯ ಪ್ರವೇಶಕ್ಕೆ ಆಗ್ರಹ
ಬೀದಿಬದಿ ವ್ಯಾಪಾರಿಗಳ ವಿರೋಧದ ಬಳಿಕ ಟೈಗರ್‌ ಕಾರ್ಯಾಚರಣೆ ನಿಲ್ಲಿಸುವ ಭರವಸೆ ನೀಡಿ ಮತ್ತೆ ಮುಂದುವರಿಸಿರುವುದು ಖಂಡನೀಯ. ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಬಡ ವ್ಯಾಪಾರಿಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಆಗ್ರಹಿಸಿದ್ದಾರೆ. ‌

ಪಂಜಿಮೊಗರು ಪ್ರದೇಶದಲ್ಲಿ ಬುಧವಾರ ಕಾರ್ಯಾಚರಣೆ ಮುಂದುವರೆಸಿದ ಪಾಲಿಕೆಯ ಕ್ರಮ ಖಂಡಿಸಿ ಮಾತನಾಡಿದ ಅವರು, ಬಡವರ ಮೇಲೆ ದಾಳಿ ಮುಂದುವರಿಸಿದರೆ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಬಡವರನ್ನು ಬೀದಿಪಾಲು ಮಾಡುವ ಹುನ್ನಾರ
ರಾಜ್ಯ ಕೇಂದ್ರ ಸರಕಾರಗಳು ಸ್ವೋದ್ಯೋಗ, ಮಹಿಳೆಯರ ಸ್ವಾವಲಂಬಿ ಉದ್ಯೋಗದ ಯೋಜನೆ ಹಾಕಿಕೊಳ್ಳುತ್ತದೆ. ಬೀದಿ ಬದಿ ವ್ಯಾಪಾರವೂ ಜೀವನ ನಡೆಸುವ ಮಾರ್ಗವೆಂದು ತಿಳಿದು ಬಡವರು ವ್ಯಾಪಾರಕ್ಕೆ ಮುಂದಾದಾಗ ಟೈಗರ್‌ ಕಾರ್ಯಾ ಚರಣೆ ಹೆಸರಿನಲ್ಲಿ ಬಡವನ ಬದುಕು ಬೀದಿಗೆ ತರಲು ಹೊರಟಿದೆ ಎಂದು ಸಿಪಿಐಎಂ ಮುಖಂಡ ಮಾಜಿ ಕಾರ್ಪೋರೆಟರ್‌ ದಯಾನಂದ ಶೆಟ್ಟಿ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next