ಹುನಗುಂದ: ಎಲ್ಲೆಡೆ ಬೇಸಿಗೆ ತೀವ್ರಗೊಂಡಿದ್ದು, ಜಲಮೂಲ ಹುಡುಕುವ ಪರಿಸ್ಥಿತಿ ಇದೆ. ಜಿಲ್ಲೆಯ ಕೆರೂರ, ರಬಕವಿ-ಬನಹಟ್ಟಿ ಪಟ್ಟಣಗಳಲ್ಲಿ ಐತಿಹಾಸಿಕ ಬಾವಿಗಳನ್ನು ಸ್ವಚ್ಛಗೊಳಿಸಿ ಜನರಿಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ. ಆದರೆ, ಹುನಗುಂದ ಪುರಸಭೆ, ಶತಮಾನ ಕಂಡ ಐತಿಹಾಸಿಕ ಬಾವಿಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದು, ಅದು ಕಸ ಎಸೆಯುವ ಗುಂಡಿಯಾಗಿ ಪರಿಣಮಿಸಿದೆ.
ಹೌದು, ಪಟ್ಟಣದ ಬಸ್ ನಿಲ್ದಾಣ ಪಕ್ಕದಲ್ಲಿರುವ ತರಕಾರಿ ಮಾರುಕಟ್ಟೆಯ ಜಾಗೆಯಲ್ಲಿ ಬ್ರಿಟಿಷ್ ಕಾಲದಲ್ಲಿ ನಿರ್ಮಾಣವಾಗಿರುವ ಬಾವಿಯಿದು. ಸುಮಾರು 20 ಅಡಿಗಳಷ್ಟು ಸುಂದರ ಕಲ್ಲಿನ ಗೋಡೆಯಿಂದ ನಿರ್ಮಿಸಲಾಗಿರುವ ಈ ಬಾವಿ 10 ಅಡಿ ಆಳವಾಗಿದೆ. ಸಿಹಿ ನೀರಿನ ಸೆಲೆಯಳ್ಳ ಬಾವಿಗೆ ಎಂಟು ಗಡಿ ಬಾವಿ ಎಂದೇ ಪ್ರಸಿದ್ಧಿ ಪಡೆದಿತ್ತು. ಇಂದು ಪುರಸಭೆ ಅಧಿಕಾರಿಗಳ ನಿಷ್ಕಾಳಜಿಯಿಂದ ಕಸದ ಗೂಡಾಗಿದೆ.
ಈ ಬಾವಿಯಲ್ಲಿ ಪಟ್ಟಣದ ತ್ಯಾಜ್ಯವೆಲ್ಲ ಗಾಳಿಗೆ ಹಾರಿ ಬಂದು ಬಿದ್ದರೆ, ಜನರೂ ಇದೇ ಬಾವಿಗೆ ಕಸ ಎಸೆಯುವುದು ರೂಢಿಸಿಕೊಂಡಿದ್ದಾರೆ. ಬಾವಿಯ ಸ್ವಚ್ಛ ನಿರ್ಮಲವಾದ ಕುಡಿಯುವ ನೀರು, ಇಂದು ಕಲ್ಮಶ ನೀರಿನಿಂದ ತುಂಬಿದೆ.
ಬಾವಿಯ ಪಕ್ಕದಲ್ಲಿಯೇ ತರಕಾರಿ ಮಾರುಕಟ್ಟೆ ಇದೆ. ಇಡೀ ಮಾರುಕಟ್ಟೆಯ ತ್ಯಾಜ್ಯ ಈ ಬಾವಿ ಸೇರುತ್ತಿದೆ. ಪ್ಲಾಸ್ಟಿಕ್ ಹಾಳೆಯ ಗಂಟು ಮತ್ತು ಪ್ಲಾಸ್ಟಿಕ್ ಬಾಟಲ್, ತೆಂಗಿನ ಕಾಯಿ, ಚಪ್ಪಲಿ, ಮದ್ಯದ ಬಾಟಲಿ, ಸತ್ತ ನಾಯಿ, ಬೆಕ್ಕುಗಳನ್ನು ಎಸೆಯುತ್ತಿದ್ದಾರೆ. ಅದು ಅಲ್ಲದೆ ಗಣೇಶ ಹಬ್ಬದಲ್ಲಿ ಇಡೀ ನಗರದ ಗಣೇಶ ಮೂರ್ತಿಗಳನ್ನು ಇದೇ ಬಾವಿಯಲ್ಲಿ ವಿಸರ್ಜನೆ ಮಾಡುತ್ತಿರುವುದರಿಂದ ಮತ್ತಷ್ಟು ನೀರು ಮಾಲಿನ್ಯಗೊಂಡು ಗಬ್ಬು ನಾರುತ್ತಿದೆ.
ಬಲಿಗಾಗಿ ಕಾಯುತ್ತಿರುವ ಬಾವಿ: ಬಾವಿ ಸುತ್ತ ಕಟ್ಟಿದ್ದ ತಡೆಗೋಡೆ ನೆಲಸಮವಾಗಿದೆ. ಇದು ಮುಖ್ಯವಾಗಿ ಬಜಾರ್ ಸ್ಥಳದಲ್ಲಿದ್ದು, ಚಿಕ್ಕಮಕ್ಕಳು ಆಡುತ್ತಾ ಬಂದು ಬಾವಿಗೆ ಬಿದ್ದರೇ ಆಶ್ಚರ್ಯಪಡುವಂತಿಲ್ಲ. ಇನ್ನು ರಾತ್ರಿಯಾದರೆ ಸಾಕು ಇಲ್ಲಿ ವಿದ್ಯುತ್ ಸೌಲಭ್ಯವಿಲ್ಲ. ಕತ್ತಲಿನಲ್ಲಿ ಗುರುತು ಪರಿಚಯವಿಲ್ಲದವರು ಬಂದರೆ ಬಾವಿ ಬಲಿಗೆ ಆಹುತಿಯಾಗುವುದು ಗ್ಯಾರಂಟಿ.
ಬಾವಿಯ ಜೀರ್ಣೋದ್ದಾರ ಅವಶ್ಯ: ಇಂತಹ ಶತಮಾನದ ಹಳೆಯ ಬಾವಿಯನ್ನು ಪುರಸಭೆಯ ಅಧಿಕಾರಿಗಳು ಮುತುರ್ವಜಿ ವಹಿಸಿಕೊಂಡು ಜೀರ್ಣೋದ್ಧಾರ ಮಾಡಬೇಕಾಗಿರುವುದು ಅವಶ್ಯವಾಗಿದೆ. ಅದನ್ನು ಬಿಟ್ಟು ಪುರಸಭೆ ಕೆಲವು ಅಧಿಕಾರಿಗಳು ಅದನ್ನು ಮುಚ್ಚಿ ಹಾಕುವ ಪ್ಲಾನ್‌ನಲ್ಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಬರಗಾಲದಲ್ಲಿ ನೀರಿನ ಮೂಲಗಳನ್ನು ಹುಡುಕುವುದ್ದಕ್ಕಾಗಿ ಹತ್ತಾರು ಕಡೆಗಳಲ್ಲಿ ಕೊಳವೆ ಬಾವಿಗಳನ್ನು ಕೊರಿಸಿ ನೀರು ಬಿಳದೇ ಹತಾಶೆ ಸ್ಥಿತಿಗೆ ಬರುವ ಅಧಿಕಾರಿಗಳು ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ಊರು ತುಂಬ ಹುಡುಕಿದಂತೆ. ನೀರಿನ ಮೂಲ ಹುಡುಕುವ ಬದಲು ಸಾಕಷ್ಟು ನೀರಿನ ಸೆಲೆ ಹೊಂದಿದ ಹಳೆಯ ಬಾವಿ ಜೀರ್ಣೋದ್ಧಾರಕ್ಕೆ ಮುಂದಾಗಬೇಕಾಗಿದೆ ಎನ್ನುತ್ತಿದ್ದಾರೆ ಪಟ್ಟಣದ ಪ್ರಜ್ಞಾವಂತರು.
•ಮಲ್ಲಿಕಾರ್ಜುನ ಬಂಡರಗಲ್ಲ