Advertisement

ರೌದ್ರಾವತಾರ ತಳೆಯಲಿದೆ ಹವಾಮಾನ!

01:10 AM Jun 07, 2020 | Sriram |

ಪ್ರಾಣ ತೆಗೆಯುವಂತಹ ಬಿಸಿ ಗಾಳಿ, ತೀವ್ರ ಸ್ವರೂಪದ ಪ್ರವಾಹ, ಭಯಂಕರ ಬಿಸಿಲು, ಹಿಮದ ಮಳೆ ಮತ್ತು ಹಿಮ ಕರಗುವಿಕೆ… ಇವೆಲ್ಲವನ್ನೂ ಒಳಗೊಂಡಂತೆ ಒಂದು ಅತ್ಯಂತ ವಿನಾಶಕಾರಿಯಾದಂಥ ಹವಾಮಾನ ಬದಲಾವಣೆಯನ್ನು ಭಾರತ ಎದುರಿಸಲಿದೆ. ಮುಂದಿನ 80 ವರ್ಷಗಳ ಅವಧಿಯಲ್ಲಿ ಸದ್ಯದ ಹವಾಮಾನ ಇಂತಹ ರೌದ್ರಾವತಾರ ತಾಳುವ ಸಾಧ್ಯತೆಯಿದೆ ಎಂದು ಅಧ್ಯಯನವೊಂದು ಎಚ್ಚರಿಸಿದೆ. ಅದನ್ನು ತಪ್ಪಿಸಲು ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ಹಾಗೂ ಇನ್ನಿತರ ಕ್ರಮಗಳಿಗೆ ಮುಂದಾಗಬೇಕು ಎಂದು ಸಂಶೋಧಕರು ತಿಳಿಸಿದ್ದಾರೆ.

Advertisement

ಏನಿದು ಅಧ್ಯಯನ?
ಸೌದಿ ಅರೇಬಿಯಾದ “ಕಿಂಗ್‌ ಅಬ್ದುಲಜೀಜ್‌ ವಿಶ್ವವಿದ್ಯಾಲಯ’ದ ತಂಡ ಈ ಅಧ್ಯಯನ ನಡೆಸಿದೆ. ವಿವಿಯ ಪ್ರೊಫೆಸರ್‌ ಮನ್ಸೂರ್‌ ಅಲ್ಮಾಜೌಯಿ ನೇತೃತ್ವದ ತಂಡ ಕಳೆದ ತಿಂಗಳು “ಭೂ ವ್ಯವಸ್ಥೆ ಮತ್ತು ಪರಿಸರ’ ಕುರಿತು ಸಾಕಷ್ಟು ವಿವರಗಳನ್ನು ಸಂಗ್ರಹಿಸಿದೆ. ಹವಾಮಾನ ಬದಲಾವಣೆಯಿಂದ ವಾಯವ್ಯ ಭಾರತ ತೀವ್ರ ಸಂಕಷ್ಟ ಎದುರಿಸಲಿದ್ದು, 21ನೇ ಶತಮಾನದ ಅಂತ್ಯದ ವೇಳೆಗೆ ಹಿಮ ಮಳೆ, ಹಿಮ ಕರಗುವಿಕೆಯಿಂದ ತೀವ್ರ ಪ್ರವಾಹಕ್ಕೆ ತುತ್ತಾಗಬಹುದು ಎಂದು ತಂಡ ಎಚ್ಚರಿಸಿದೆ.

ಭಾರತಕ್ಕೇ ಏಕೆ ಅಪಾಯ?
ವಿಶ್ವದಲ್ಲೇ 2ನೇ ಅತಿ ಹೆಚ್ಚು ಜನಸಂಖ್ಯೆ ಇರುವುದು ಭಾರತದಲ್ಲಿ. ಅತಿ ಹೆಚ್ಚು ಜನದಟ್ಟಣೆ ಇರುವುದೂ ಇಲ್ಲೇ. ಈ ದೇಶಕ್ಕೆ ಸೂಕ್ಷ್ಮ ಹಾಗೂ ಅಪಾಯದ ಸಂದರ್ಭಗಳನ್ನು ಎದುರಿಸುವ ಶಕ್ತಿ ಕಡಿಮೆ. ಹವಾಮಾನದಲ್ಲಿ ಗಂಭೀರ ಬದಲಾವಣೆಗಳಾದರೆ ಸಹಿಸಿಕೊಳ್ಳುವ ಸಾಮರ್ಥ್ಯವಿಲ್ಲ. ಆದ ಕಾರಣ, ಭಾರತಕ್ಕೆ ಅಪಾಯ ಎಂದಿದ್ದಾರೆ ಸಂಶೋಧಕರು.

ಏನೇನು ಅಪಾಯ ಸಂಭವ?
21ನೇ ಶತಮಾನದ ಅಂತ್ಯದ ವೇಳೆಗೆ ಭಾರತ ವಿಪರೀತ ತಾಪಮಾನ ಎದುರಿಸಲಿದೆ
ಈಗ ಇರುವ ಗರಿಷ್ಟ ತಾಪಮಾನಕ್ಕಿಂತ 4.5 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆ
ದೇಶದ ಬೃಹತ್‌ ಪ್ರಮಾಣದ ಜನಸಂಖ್ಯೆ, ಪರಿಸರ ಮತ್ತು ಆರ್ಥಿಕತೆಗೆ ದೊಡ್ಡ ಪೆಟ್ಟು
ಹವಾಮಾನ ಬದಲಾವಣೆಯಿಂದ ಭಾರೀ ಪ್ರವಾಹಕ್ಕೆ ತುತ್ತಾಗಲಿರುವ ವಾಯುವ್ಯ ಭಾರತ

 

Advertisement
Advertisement

Udayavani is now on Telegram. Click here to join our channel and stay updated with the latest news.

Next