Advertisement

ಗೂಗಲ್ ತೋರಿದ ದಾರಿ!? …

03:01 PM Apr 03, 2022 | Team Udayavani |

ಇಂದಿನ ಕಾಲಘಟ್ಟದಲ್ಲಿ ತಂತ್ರಜ್ಞಾನವು ಜನಜೀವನದಲ್ಲಿ ಹಾಸುಹೊಕ್ಕಾಗಿದೆ. ಅದರಲ್ಲೂ ಯಾವುದೇ ಮಾಹಿತಿಯನ್ನು ಪಡೆಯಲು ಅಥವಾ ಹಂಚಿಕೊಳ್ಳಲು ಅಂತರ್ಜಾಲ ಪ್ರಮುಖ ಸಾಧನವಾಗಿ ಬಳಕೆಯಾಗುತ್ತಿದೆ. ಇದನ್ನು ಅತಿಯಾಗಿ ಅನುಸರಿಸುವುದರಿಂದ ಕೆಲವೊಂದು ಎಡವಟ್ಟುಗಳೂ ನಡೆಯುತ್ತದೆ. ನನ್ನ ಜೀವನದಲ್ಲಿ ನಡೆದ ಈ ರೀತಿಯ ಒಂದು ಘಟನೆ ನಾನಿಂದು ಹೇಳಹೊರಟಿದ್ದೇನೆ.

Advertisement

ಚೆಸ್ ಟೂರ್ನಮೆಂಟ್ ಗೆ ದೂರದ ಊರಾದ ಗುಂಟೂರಿಗೆ ಹೋಗಿದ್ದ ಸಂದರ್ಭ. ಸ್ಪರ್ಧೆ ಮುಗಿಸಿ ತಂಡದೊಂದಿಗೆ ಸೂರಿಗೆ ಮರಳಲು ರೈಲ್ವೆ ಸ್ಟೇಷನ್ ಗೆ ಹೊರಟೆವು. ಅಲ್ಲಿಗೆ ತಲುಪಿದ ಮೇಲೆ ನಮಗೆ ತಿಳಿದದ್ದು ರೈಲು ಬರಲು ಇನ್ನೂ 1 ಗಂಟೆ ಇತ್ತು. ಮಾತು-ಕತೆ, ಹಾಡು-ನಗುವಿನಲ್ಲಿ ಮುಳುಗಿದ್ದ ನಮಗೆ ಶಾಪಿಂಗ್ ಮಾಡುವ ಐಡಿಯಾ ಬಂದಿತ್ತು. ತಕ್ಷಣ ನಮ್ಮ ತಂಡದ ಗೂಗಲ್ ಎಕ್ಸ್ಪರ್ಟ್‌ ಒಬ್ಬಳು ಗೂಗಲ್ ಸರ್ಚ್ ಮಾಡಿ ‘ಫೋರಂ ಮಾಲ್’ ಹತ್ತಿರದಲ್ಲೇ ಇದೆ ಎಂದು ಘೋಷಿಸಿಬಿಟ್ಟಳು. ಅಲ್ಲೇ ಪಕ್ಕದಲ್ಲಿ ಹೋಗುತ್ತಿದ್ದ ಆಟೋ ನಿಲ್ಲಿಸಿದೆವು. ಭಾಷೆ ಗೊತ್ತಿಲ್ಲವಾದ್ದರಿಂದ ‘ಸರ್ ಫೋರಂ ಮಾಲ್?’ ಎಂದು ಸನ್ನೆ ಮಾಡಿ ಕೇಳಿದೆವು. ಅವರು ‘ಡಿ ಮಾರ್ಟ್?’ ಅಂತ ಕೇಳಿದರು. ಇವ್ನಿಗೆ ಗೊತ್ತಿಲ್ಲ ಅನ್ಸುತ್ತೆ ಅಂದುಕೊಂಡು ಇನ್ನೊಂದು ಆಟೋ ಹಿಡಿದೆವು. ಅವರ ಕಡೆಯಿಂದಲೂ ಅದೇ ರೀತಿಯ ಪ್ರತಿಕ್ರಿಯೆ ಬಂದಿತ್ತು. ಮುಂದೆ ಗುರಿ ಹಿಂದೆ ಗುರು ಎಂಬಂತೆ ನಮ್ಮೊಂದಿಗೆ ಇದ್ದದ್ದು ಗೂಗಲ್.  ಮ್ಯಾಪ್ ಹಾಕಿಕೊಂಡು ಕಾಲ್ನಡಿಗೆಯಲ್ಲೇ ಹೊರಟೆವು. ಮುಂದೆ ಸಾಗಿದಂತೆ ನಗರದ ಗಲ್ಲಿ ಪ್ರದೇಶ ತಲುಪಿದ್ದೆವು. ಮುಖ್ಯ ರಸ್ತೆಯ ಸಂಪರ್ಕ ಕಳೆದುಕೊಂಡಂತೆ ಭಾಸವಾಗುವಂತ ದಾರಿ ಆದಾಗಿತ್ತು. ಎದುರು ಪಾಳು ಬಿದ್ದ ಪ್ರದೇಶ, ಆದರೂ  ನಡೆದು ಹೋಗಬಹುದೆಂಬ ಕುರುಹಿನಂತಿದ್ದ ದಾರಿ. ಅಲ್ಲೇ ಪೆಟ್ರೋಲ್ ಬಂಕ್ ಕಂಡು ನಿಟ್ಟುಸಿರು ಬಿಟ್ಟೆವು. ಗೂಗಲ್ ಮ್ಯಾಪ್ 2 ನಿಮಿಷದ ದಾರಿ ಎಂದು ತೋರಿಸುತ್ತಿತ್ತು. ಅದಾಗಲೇ ಖರೀದಿಸುವ ವಸ್ತುಗಳ ಪಟ್ಟಿ ತಯಾರಾಗಿತ್ತು. ಮ್ಯಾಪ್ನಲ್ಲಿ ಲೊಕೇಶನ್ ತಲುಪಿದ ಸೂಚನೆ ನೋಡಿ ಸುತ್ತಲೂ ಕಣ್ಣಾಯಿಸಿದಾಗ ತೋರಿದ್ದು ಅಪೂರ್ಣಗೊಂಡ ಕಟ್ಟಡ! ಕಾಮಗಾರಿ ಪ್ರಗತಿಯಲ್ಲಿದೆ ಎಂಬ ಫಲಕ. ವಿಪರ್ಯಾಸವೆಂದರೆ ನಿರ್ಮಾಣ ಸ್ಥಿತಿಯಲ್ಲಿದ್ದ ಆ ಕಟ್ಟಡವೇ ಫೋರಂ ಮಾಲ್! ಅಂದುಕೊಂಡ ಲೊಕೇಶನ್ ತಲುಪಿದರೂ, ಪ್ರತಿಫಲ ದೊರೆತಿರಲಿಲ್ಲ.

-ಪ್ರೀತಿ ಹಡಪದ, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next