ಆಳಂದ: 3.50 ಕೋಟಿ ರೂ. ವೆಚ್ಚದಲ್ಲಿ ಒಟ್ಟು ನಾಲ್ಕು ಗೋದಾಮು ಒಟ್ಟುಗೂಡಿಸಿ ಆಳಂದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ನಿರ್ಮಿಸಲಾಗಿರುವ ಹೊಸ ಮಾದರಿ ಗೋದಾಮು ತಾಲೂಕಿನ ರೈತರಿಗೆ ಅನುಕೂಲವಾಗಲಿದೆ ಎಂದು ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಪಟ್ಟಣದಲ್ಲಿ ಕೃಷಿ ಮಾರುಕಟ್ಟೆ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಳಂದ ಇವುಗಳ ಸಂಯುಕ್ತಾಶ್ರಯದಲ್ಲಿ ಆರ್. ಕೆ.ವಿ.ವೈ. ಯೋಜನೆಯಡಿ ಇಲ್ಲಿನ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ನಿರ್ಮಿಸಲಾಗಿರುವ 5,000 ಮೆ. ಟನ್ ಸಾಮರ್ಥ್ಯದ ಹೊಸ ಮಾದರಿ ಗೋದಾಮು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಬೆನ್ನೆಲುಬಾದ ರೈತ ಬೆಳೆದ ಅನ್ನದಿಂದಲೇ ದೇಶದ ಎಲ್ಲ ಜನರ ಹೊಟ್ಟೆ ತುಂಬುತ್ತಿದೆ ಎಂಬುದನ್ನು ಯಾರೂ ಮರೆಯಬಾರದು. ರೈತರ ಹಿತಕ್ಕಾಗಿ ರಾಜ್ಯ ಸರ್ಕಾರ ಅನೇಕ ಕಾರ್ಯಕ್ರಮ ಜಾರಿಗೊಳಿಸಿದೆ ಎಂದು ಹೇಳಿದರು.
ಹೈದ್ರಾಬಾದ್ ಕರ್ನಾಟಕ ಪ್ರದೇಶದ ಹಿಂದುಳಿದ ಪ್ರದೇಶ ಎಂದು ಮನಗಂಡು ಆರು ಜಿಲ್ಲೆಗಳಿಗೆ ವಿಶೇಷ ಮೀಸಲಾತಿ ಕಲ್ಪಿಸಲು ಸಂವಿಧಾನಕ್ಕೆ ತಿದ್ದುಪಡಿ ತಂದು 371(ಜೆ) ಕಲಂ ಜಾರಿಗೊಳಿಸಲಾಗಿದೆ. ಮೀಸಲಾತಿಯಿಂದ ಹೈ.ಕ. ಭಾಗದ ಸುಮಾರು 700 ಮೆಡಿಕಲ್ ಸೀಟು,4000ಕ್ಕಿಂತ ಹೆಚ್ಚು ಇಂಜನಿಯರಿಂಗ್ ಸೀಟು ಸ್ಥಳೀಯರಿಗೆ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದೆ. ಇದಲ್ಲದೇ ಉದ್ಯೋಗದಲ್ಲಿಯೂ ಮೀಸಲಾತಿ ನೀಡಲಾಗಿದ್ದು, ಸ್ಥಳೀಯವರಿಗೆ ಶೇಕಡವಾರು ಮೀಸಲಾತಿ ನೀಡಿದ್ದು, ಸ್ಥಳೀಯರು ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
ನಿಡುಮಾಮಿಡಿ ಮಾನವ ಪೀಠದ ಪರಮ ಪೂಜ್ಯ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಬಿ.ಆರ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಆಳಂದ ಎಂಪಿಎಂಸಿ ಅಧ್ಯಕ್ಷ ಶರಣಬಸಪ್ಪ ಬಿ. ಭೂಸನೂರ, ಆಳಂದ ಪುರಸಭೆ ಉಪಾಧ್ಯಕ್ಷ ಅಸಗರ್ ಅಲಿ ಹವಾಲ್ದಾರ, ಎಪಿಎಂಸಿ ಆಡಳಿತ ಮಂಡಳಿ ಸದಸ್ಯ ದತ್ತಪ್ಪ ಅಟ್ಟೂರ, ಎಪಿಎಂಸಿ ಕಾರ್ಯದರ್ಶಿ ಸಂತೋಷ ಬುಡಗೆ, ಶಂಕರರಾವ ದೇಶಮುಖ, ಪ್ರಕಾಶ ಮೂಲಭಾರತಿ, ಎಪಿಎಂಸಿ ಆಡಳಿತ ಮಂಡಳಿ ಸದಸ್ಯರು, ಸ್ಥಳೀಯ ಜನಪ್ರತಿನಿಧಿ ಗಳು, ಮುಖಂಡರು ಇದ್ದರು. ಜಿಪಂ ಸದಸ್ಯ ಸಿದ್ದರಾಮ ಪ್ಯಾಟಿ ಸ್ವಾಗತಿಸಿದರು. ರಮೇಶ ಮಾಡಿಯಾಳ ನಿರೂಪಿಸಿದರು.