Advertisement
ಚುನಾವಣೆಗಾಗಿ ಈ ದಾಳಿ: ಎಂದಿನಂತೆ ಪಾಕಿಸ್ತಾನ, ಭಾರತದ ಮೇಲೆ ವೃಥಾ ಆರೋಪ ಮಾಡುವ ಪರಂಪರೆ ಮುಂದುವರಿಸಿದೆ. “ಭಾರತ ಸುಳಿವು ನೀಡದೇ ದಾಳಿ ನಡೆಸಿದೆ. ಇದಕ್ಕೆ ಪಾಕಿಸ್ತಾನ ಸೂಕ್ತ ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ, ಸೂಕ್ತ ಸ್ಥಳದಲ್ಲಿ ಪ್ರತಿಕ್ರಿಯಿಸಲಿದೆ. ಸದ್ಯ ಭಾರತದಲ್ಲಿ ಚುನಾವಣೆ ಇರುವುದರಿಂದ, ತನ್ನ ಲಾಭಕ್ಕಾಗಿ ಆ ದೇಶ ಈ ದಾಳಿ ನಡೆಸಿದೆ. ಇದರೊಂದಿಗೆ ಸ್ಥಳೀಯ ಶಾಂತಿ ಮತ್ತು ಸ್ಥಿರತೆಗೇ ಅಪಾಯ ತಂದೊಡ್ಡಿದೆ’ ಎಂದು ಎನ್‌ಎಸ್‌ಸಿ ಸಭೆಯಲ್ಲಿ ಹೇಳಲಾಗಿದೆ. ಘಟನೆಯಿಂದ ಆಘಾತಗೊಂಡಿರುವ ಇಮ್ರಾನ್ ಖಾನ್, ಭಾರತದ ಈ ಕೃತ್ಯದ ಬಗ್ಗೆ ತಾನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ದೂರು ನೀಡುವುದಾಗಿ ತಿಳಿಸಿದ್ದಾರೆ. ಭಾರತದ ಕೃತ್ಯದ ಬಗ್ಗೆ ವಿಶ್ವಸಂಸ್ಥೆ, ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ಮತ್ತಿತರ ಮಿತ್ರರಾಷ್ಟ್ರಗಳ ಗಮನಕ್ಕೆ ತರುವುದಾಗಿ ಘೋಷಿಸಿದ್ದಾರೆ.
ಮಂಗಳವಾರ ಹಲವು ಅನಿರೀಕ್ಷಿತ ಘಟನೆಗಳು ನಡೆದ ಬೆನ್ನಲ್ಲೇ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹೂದ್ ಖುರೇಷಿ, ಬೇರೆ ಬೇರೆ ಸಚಿವಾಲಯಗಳು, ಅಧಿಕಾರಿಗಳ ತುರ್ತು ಸಭೆ ನಡೆಸಿದರು. ಸಭೆಯ ಬಳಿಕ, ಭಾರತದ ದಾಳಿಗೆ ನಾವು ಸೂಕ್ತ ಪ್ರತಿಕ್ರಿಯೆ ನೀಡಲಿದ್ದೇವೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖುರೇಷಿ, ಪಾಕಿಸ್ತಾನದ ವಾಯುಸೇನೆಯ ವೈಫಲ್ಯವನ್ನು ಮುಚ್ಚಿಡುವ ಯತ್ನ ಮಾಡಿದರು. “ಪಾಕಿಸ್ತಾನದ ಗಡಿಯೊಳಗೆ ಭಾರತ ಹಲವು ಕೋನದಲ್ಲಿ ದಾಳಿ ನಡೆಸಿದೆ. ಅದಕ್ಕೆ ಕೂಡಲೇ ಪಾಕಿಸ್ತಾನದ ಜೆಟ್‌ಗಳು ಪ್ರತಿಕ್ರಿಯೆ ನೀಡಿದ್ದರಿಂದ ಭಾರತೀಯ ವಿಮಾನಗಳು ಕೆಲವೇ ನಿಮಿಷದಲ್ಲಿ ಹಿಂತಿರುಗಿವೆ. ಅಲ್ಲದೇ ಪಾಕ್ ವಾಯುಪಡೆ ಸದಾ ಸನ್ನದ್ಧ ಸ್ಥಿತಿಯಲ್ಲಿದೆ’ ಎಂದೂ ಹೇಳಿಕೊಂಡರು. ಎಲ್ಲ ರಾಯಭಾರಿಗಳಿಗೂ ಮಾಹಿತಿ
ಸರ್ಜಿಕಲ್ ದಾಳಿ-2.0 ಬಗ್ಗೆ ಭಾರತವು ಎಲ್ಲ ಪ್ರಮುಖ ರಾಷ್ಟ್ರಗಳಿಗೆ ಮಂಗಳವಾರ ಮಾಹಿತಿ ನೀಡಿದೆ. ಅಮೆರಿಕ, ರಷ್ಯಾ, ಚೀನಾ, ಫ್ರಾನ್ಸ್, ಯುಕೆ ಸೇರಿದಂತೆ ಹಲವು ದೇಶಗಳ ರಾಯಭಾರಿಗಳಿಗೆ ಈ ದಾಳಿಯು ಕುರಿತು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಮತ್ತು ಇತರೆ ಕಾರ್ಯದರ್ಶಿಗಳು ವಿವರಣೆ ನೀಡಿದ್ದಾರೆ. ಪಿ-5 ದೇಶಗಳಿಗೆ ಮಾತ್ರವಲ್ಲದೆ, ಶ್ರೀಲಂಕಾ, ಮಾಲ್ಡೀವ್ಸ್, ಅಫ್ಘಾನಿಸ್ತಾನ, ಭೂತಾನ್, ಟರ್ಕಿ, ಇಂಡೋ ನೇಷ್ಯಾಗೂ ದಾಳಿಯ ವಿವರ ನೀಡಲಾಗಿದೆ.