Advertisement

ಕನಸು ಕರಗಬಹುದು ಎಂಬ ಎಚ್ಚರದ ಬದುಕು

12:04 AM Oct 03, 2020 | mahesh |

ನಾಸಿರುದ್ದೀನ್‌ಗೆ ಒಂದು ದಿನ ರಾತ್ರಿ ಕನಸು ಬಿತ್ತು. ಒಬ್ಬ ಮನುಷ್ಯ ಮನೆ ಬಾಗಿಲನ್ನು ತಟ್ಟುತ್ತಿದ್ದ. ನಾಸಿರುದ್ದೀನ್‌ ಬಾಗಿಲು ತೆರೆದಾಗ ಆತ “ಇಂದು ರಾತ್ರಿ ನಾನು ನಿನ್ನ ಮನೆಯಲ್ಲಿ ಉಳಿದುಕೊಳ್ಳಬಹುದೇ?’ ಎಂದು ಕೇಳಿದ. ಆತಿಥ್ಯಕ್ಕೆ ಪ್ರತಿಯಾಗಿ 10 ಚಿನ್ನದ ವರಹ ನೀಡುವುದಾಗಿ ಆತ ಆಶ್ವಾಸನೆಯನ್ನು ಕೊಟ್ಟ. ಹಣದಾಸೆಗಾಗಿ ನಾಸಿರುದ್ದೀನ್‌ ಇದಕ್ಕೆ ಒಪ್ಪಿಕೊಂಡ. ಆತನಿಗೆ ಮಲಗುವ ಕೊಠಡಿಯನ್ನು ತೋರಿಸಿಕೊಟ್ಟ. ಒಳ್ಳೆಯ ಊಟ, ಬೆಚ್ಚನೆಯ ಹೊದಿಕೆ ಎಲ್ಲವನ್ನೂ ಕೊಟ್ಟ. ಮರುದಿನ ಬೆಳಗಾಯಿತು. ಅತಿಥಿ ಎದ್ದು ಉಪಾಹಾರ ಸ್ವೀಕರಿಸಿ ಹೊರಡಲು ಅನುವಾದ. ತನ್ನ ಬಳಿ ಇದ್ದ ಗಂಟಿನಿಂದ ಒಂಬತ್ತು ಚಿನ್ನದ ವರಹಗಳನ್ನು ಎಣಿಸಿಕೊಟ್ಟ.

Advertisement

“ನೀನು 10 ಚಿನ್ನದ ವರಹಗಳನ್ನು ಕೊಡುವುದಾಗಿ ಮಾತು ಕೊಟ್ಟಿದ್ದೀ’ ಎಂದು ಚೀರಾಡುವಾಗ ನಾಸಿರುದ್ದೀನನಿಗೆ ಎಚ್ಚರವಾಯಿತು. ಅತಿಥಿ ಎಲ್ಲಿ ಎಂದು ಹುಡುಕಿದರೆ ಅಲ್ಲಿ ಯಾರೂ ಇರಲಿಲ್ಲ.

ನಾಸಿರುದ್ದೀನ್‌ ತನ್ನ ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿಕೊಂಡು “ಒಂಬತ್ತು ವರಹಗಳನ್ನಾದರೂ ಕೊಡು’ ಎಂದು ಬೇಡಿಕೊಂಡ. ಆದರೆ ಕನಸು ಕರಗಿ ಹೋಗಿತ್ತು.

ನಾವು ನಿದ್ರಿಸುತ್ತಿರುವಾಗ ನಮ್ಮ ಆತ್ಮ ಎಚ್ಚರವಾಗಿರುತ್ತದೆ ಎಂಬುದು ಉಪನಿಷತ್ತುಗಳು ಹೇಳುವ ಮಾತು. ದೇಹ ಮಲಗಿ ವಿಶ್ರಾಂತಿ ಪಡೆಯುತ್ತಿರು ವಾಗ ಆತ್ಮ ಅಥವಾ ಬ್ರಹ್ಮ ಎಲ್ಲ ಇಂದ್ರಿಯ ಶಕ್ತಿಗಳನ್ನು ತನ್ನ ವಶಕ್ಕೆ ತೆಗೆದುಕೊಂಡು ಸಕ್ರಿಯವಾಗಿರುತ್ತದೆ. ವಾಸ್ತವದಲ್ಲಿ ದೇಹವು ಅನುಭವಿಸಲು ಸಾಧ್ಯವಾಗದ ಎಲ್ಲವನ್ನೂ ನಿದ್ರೆಯಲ್ಲಿ ಅನುಭವಿಸಲು ಸಾಧ್ಯವಾಗುವುದು ಇದೇ ಕಾರಣಕ್ಕೆ. ಕನಸಿನಲ್ಲಿ ಅರಸನಾಗಬಹುದು, ವೃದ್ಧ ಮತ್ತೆ ಮಗುವಾಗಬಹುದು, ಕಡುಬಡವನೂ ಐಷಾರಾಮಿ ಭೋಜನ ಸವಿಯಬಹುದು – ಕನಸಿನಲ್ಲಿ ಎಲ್ಲವೂ ಸಾಧ್ಯ. ದೇಹಕ್ಕೆ ಎಚ್ಚರವಾದಾಗ ಇಂದ್ರಿಯ ಶಕ್ತಿಗಳು ಲೌಕಿಕಕ್ಕೆ ಮರಳುತ್ತವೆ.

ಕಂಡಿರುವ ಕನಸು ನಿಜವೇ ಎಂದು ಕೇಳಿದರೆ “ಅಲ್ಲ’. ಆದರೆ ಕನಸು ಕಂಡಿರುವುದು ನಿಜ, ಅದರಲ್ಲಿ ಅನುಭವಿಸಿದ್ದು ನಿಜ – ಕನಸಿನ ಮಟ್ಟಿಗೆ ಮಾತ್ರ. ನಿದ್ದೆಯಿಂದ ಎದ್ದ ಬಳಿಕ ಅಲ್ಲ.

Advertisement

ನಾವು ಈಗ ವಾಸ್ತವ ಎಂದು ಗ್ರಹಿಸಿರುವುದೇ ಒಂದು ಕನಸಾಗಿದ್ದು, ಈ ಕನಸನ್ನು ಕಾಣುತ್ತಿರುವ ನಿದ್ದೆಯಿಂದ ಒಂದು ದಿನ ಎಚ್ಚೆತ್ತುಕೊಳ್ಳುವುದಕ್ಕೆ ಇರಬಹುದೇ? ಆಗ ನಾಸಿರುದ್ದೀನನಂತೆ ಕಣ್ಣೆದುರು ಕಾಣುತ್ತಿದ್ದ ಕನಸಿನಲ್ಲಿ ಎಷ್ಟು ಲಭಿಸಿತ್ತೋ ಅಷ್ಟರಿಂದ ಸಂತೃಪ್ತಿ ಪಟ್ಟುಕೊಳ್ಳಬೇಕಿತ್ತು ಎಂದು ಪರಿತಪಿಸಿಕೊಳ್ಳುವ ಸ್ಥಿತಿ ಬರಬಹುದೇ?!

ನಾವು ಬದುಕುತ್ತಿರುವ ಈ ವಾಸ್ತವವು ಒಂದು ಕನಸಾಗಿರುವುದಕ್ಕೂ ಸಾಧ್ಯ ಎಂಬ ಆಧ್ಯಾತ್ಮಿಕ ಒಳ ನೋಟವನ್ನು ಸೂಚ್ಯವಾಗಿ ಹೇಳುತ್ತಲೇ ಮನುಷ್ಯ ಜನ್ಮ ದೊಡ್ಡದು ಎಂದು ದಾಸರು ಹಾಡಿದ್ದಾರೆ. ಕೈಯಲ್ಲಿರುವ ಬದುಕು ಕನಸಿನಂತೆ ಒಡೆದು ಹೋಗಬಹುದು. ಹಾಗಾಗಿ ಇರುವ ಬದುಕನ್ನು ಅದರ ಪೂರ್ಣ ಅರ್ಥದಲ್ಲಿ ಜೀವಿಸಬೇಕು. ಪ್ರತೀಕ್ಷಣವೂ ಸಕಾರಾತ್ಮಕ ವಾಗಿರಬೇಕು, ಸಕ್ರಿಯವಾಗಿರಬೇಕು. ಪ್ರಾಮಾಣಿಕತೆ, ಸತ್ಯಪರತೆ, ಪರೋಪ ಕಾರಗಳಂತಹ ಸದ್ಗುಣಗಳ ಬೆಳಕಿನಲ್ಲಿ ಲವಲವಿಕೆಯ ಬದುಕನ್ನು ಮುನ್ನಡೆಸಬೇಕು. ಆಗ ನಮ್ಮೆದುರಿಗಿರುವ ಬದುಕು ಅರ್ಥಪೂರ್ಣ ಎಂಬ ಸಂತೃಪ್ತಿ, ಸಮಾಧಾನ ನಮ್ಮಲ್ಲಿ ಉದಯಿಸುತ್ತದೆ, ಜೀವನದ ಪ್ರತೀ ಕ್ಷಣವೂ ಖುಷಿಯದಾಗುತ್ತದೆ.

ಈಗಿರುವ ಬದುಕು ಒಂದು ಕನಸಿನಂತೆ, ಯಾವುದೇ ಕ್ಷಣದಲ್ಲಿ ಕರಗಬಹುದು ಎಂಬ ಪ್ರತೀಕ್ಷಣದ ಎಚ್ಚರವೇ ಸದಾ ಬೆಳಕನ್ನು ನೀಡುವ ನಂದಾದೀಪದಂತೆ ಬದುಕಿ ಬೆಳಗುವ ಶಕ್ತಿಯನ್ನು ನಮಗೆ ಒದಗಿಸುತ್ತದೆ.

(ಕತೆಯೊಂದರ ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next