ಬೆಂಗಳೂರು: ಚಾಮುಂಡೇಶ್ವರಿ ಕ್ಷೇತ್ರದ ಮತದಾರರು ಎಚ್.ಡಿ.ಕುಮಾರಸ್ವಾಮಿ ಜೇಬಿನಲ್ಲಿಲ್ಲ. ನನ್ನ ಸೋಲು-ಗೆಲುವು ತೀರ್ಮಾನಿಸುವವರು ಆ ಕ್ಷೇತ್ರದ ಮತದಾರರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರ ಈ ಬಾರಿ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಏನು ಎಂಬುದು ಆ ಕ್ಷೇತ್ರದ ಮತದಾರರಿಗೆ ಗೊತ್ತಿದೆ. ಕುಮಾರಸ್ವಾಮಿ ಅಥವಾ ಬೇರೊಬ್ಬರ ಜೇಬಲ್ಲಿ ಮತಗಳು ಇಲ್ಲ ಎಂದು ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದಿಂದ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಬಯಸಿರುವ ತಮ್ಮ ವಿರುದ್ಧ ರಾಜಕೀಯ ವಿರೋಧಿಗಳು ಒಟ್ಟಾಗುವುದು ನನಗೆ ಪ್ಲಸ್ ಪಾಯಿಂಟ್ ಎಂದು ತಿಳಿಸಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಮತ್ತೆ ಸ್ಪರ್ಧೆಗೆ ಬಯಸಿದ್ದೇನೆ. ತಮ್ಮ ವಿರುದಟಛಿ ರಾಜಕೀಯ ವಿರೋಧಿಗಳು ಒಟ್ಟಾಗುತ್ತಿದ್ದಾರೆ. ಇದರಿಂದ ತಮಗೇ ಹೆಚ್ಚಿನ ಲಾಭ. ನನ್ನನ್ನು ಸೋಲಿಸಲು ಒಟ್ಟಾಗುತ್ತಿದ್ದಾರೆಂದು ಮತದಾರರು ಸಹಾನುಭೂತಿಯಿಂದ ನನಗೆ ಮತ ಹಾಕುತ್ತಾರೆ ಎಂದರು. ಕುಮಾರಸ್ವಾಮಿ ಅವರು ನ.3ರಂದು ಚಾಮುಂಡೇಶ್ವರಿ ಕ್ಷೇತ್ರದಿಂದ ಚುನಾವಣಾ ಪ್ರಚಾರ ಆರಂಭ ಮಾಡುತ್ತಿರುವ ಬಗ್ಗೆ ಮಾತನಾಡಿದ ಸಿಎಂ, ಮಾಡಿಕೊಳ್ಳಲಿ ಬಿಡಿ. ಬೇಡ ಎಂದವರು ಯಾರು? ಚಾಮುಂಡೇಶ್ವರಿ ಕ್ಷೇತ್ರದ 2 ಲಕ್ಷ ಮತದಾರರೂ ಕುಮಾರಸ್ವಾಮಿ ಜೇಬಿನಲ್ಲಿಲ್ಲ ಎಂಬುದನ್ನು ತಿಳಿದುಕೊಳ್ಳಲಿ. ನನ್ನನ್ನು ಗೆಲ್ಲಿಸಬೇಕೋ ಅಥವಾ ಸೋಲಿಸಬೇಕೋ ಎಂಬುದನ್ನು ಕ್ಷೇತ್ರದ ಮತದಾರರು ತೀರ್ಮಾನ ಮಾಡುತ್ತಾರೆಂದು ಹೇಳಿದರು.
ರಾಹುಲ್ ಪ್ರವಾಸ ಮುಂದೂಡಿಕೆ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರ ನ.19ರ ರಾಜ್ಯ ಪ್ರವಾಸ ಮುಂದೂಡಿಕೆಯಾಗಿದೆ. ಆದರೆ, ನಿರ್ದಿಷ್ಟವಾಗಿ ಕಾರಣ ಏನೆಂಬುದು ಗೊತ್ತಿಲ್ಲ. ಬೆಳಗಾವಿ ಅ ಧಿವೇಶನ ನಡೆಯುವ ಹಿನ್ನೆಲೆಯಲ್ಲಿ ನ.19ರಂದು ಭೇಟಿ ಬೇಡ ಎಂದು ತಿಳಿಸಿದ್ದೆ. ಆದರೆ, ಆ ದಿನ ರಾಹುಲ್‌ಗಾಂಧಿ ಅವರು ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಕಾರಣಕ್ಕಾಗಿ ಪ್ರವಾಸ ಮುಂದೂಡಿಕೆ ಆಗಿದೆ ಎಂಬ ಬಗ್ಗೆ ನನಗೆ ಮಾಹಿತಿಯಿಲ್ಲ. ರಾಹುಲ್‌ಗಾಂಧಿ ಅವರು ಎಐಸಿಸಿ ಅಧ್ಯಕ್ಷರಾಗುವುದು ನಿಜ. ಈ ವಿಚಾರದಲ್ಲಿ ಯಾವ ಅನುಮಾನವೂ ಇಲ್ಲವೆಂದು ತಿಳಿಸಿದರು.
ಸಮೀಕ್ಷೆ ಹುಸಿಯಾಗಲಿದೆ: ಗುಜರಾತ್ ವಿಧಾನ ಸಭೆಗೆ ಚುನಾವಣೆ ದಿನಾಂಕ ನಿಗದಿಯಾಗಿದೆ. ಹಿಮಾಚಲ ಪ್ರದೇಶ ಚುನಾವಣೆ ದಿನಾಂಕ ಘೋಷಿಸಿದಾಗಲೇ ಗುಜರಾತ್‌ಗೂ ಘೋಷಿಸಬೇಕಿತ್ತು. ಆದರೆ, ನರೇಂದ್ರ ಮೋದಿಯವರು ಆ ರಾಜ್ಯಕ್ಕೆ ಕೆಲವೊಂದು ಯೋಜನೆ ಘೋಷಿಸಲು ಅನುಕೂಲ ಮಾಡಿಕೊಡಲು ಚುನಾವಣಾ ಆಯೋಗ ವಿಳಂಬ ಮಾಡಿತು. ಗುಜರಾತ್‌ನಲ್ಲಿ ಮತ್ತೆ ಬಿಜೆಪಿ ಗೆಲ್ಲುತ್ತದೆ ಎಂದು ಸಮೀಕ್ಷೆ ಹೇಳಿವೆಯಾದರೂ ಅದು ಸುಳ್ಳಾಗುತ್ತದೆ. ಕಾಂಗ್ರೆಸ್ ಅಲ್ಲಿ ಗೆಲ್ಲುತ್ತದೆ ಎಂದು ಹೇಳಿದರು.
ಗುಜರಾತ್‌ಗೆ ಪ್ರಚಾರಕ್ಕೆ ನೀವು ಹೋಗಿವಿರಾ ಎಂದಾಗ, ನಾನು ಹೋಗುವುದಿಲ್ಲ. ನನಗೆ ನಮ್ಮ ರಾಜ್ಯ ನೋಡಿಕೊಳ್ಳುವುದೇ ಸಾಕಾಗಿದೆ ಎಂದು ತಿಳಿಸಿದರು.
ಮುಂದಿನ ವಿಧಾನಸಭೆ ಚುನಾವಣೆಗೆ ನನ್ನದೇ ನೇತೃತ್ವ. ಹೈಕಮಾಂಡ್ ಸಹ ಈ ಕುರಿತು ಪತ್ರ ಬರೆದು ಸ್ಪಷ್ಟಪಡಿಸಿದೆ.
ಆದರೆ, ಚುನಾವಣೆ ನಂತರ ಶಾಸಕರು ಹಾಗೂ ವರಿಷ್ಠರು ಮುಂದಿನ ಸಿಎಂ ಯಾರಾಗಬೇಕು ಎಂಬುದನ್ನು ನಿರ್ಧರಿಸುತ್ತಾರೆ.
ಮುಂದೆಯೂ ನಾನೇ ಮುಖ್ಯಮಂತ್ರಿಯೋ ಅಥವಾ ಅಲ್ಲವೋ ಎಂಬುದು ಸದ್ಯ ಅಪ್ರಸ್ತುತ.
– ಸಿದ್ದರಾಮಯ್ಯ, ಮುಖ್ಯಮಂತ್ರಿ