Advertisement

ಮತದಾರರ ಪಟ್ಟಿ ಸರಿ ಇರಲಿ

10:22 AM Feb 26, 2018 | |

ಕಲಬುರಗಿ: ಮತದಾನದ ದಿನದಂದು ಮತದಾರರಿಗೆ ಹಕ್ಕು ಚಲಾವಣೆಗೆ ಯಾವುದೇ ತೊಂದರೆಯಾಗದಂತೆ ಸ್ಪಷ್ಟ ಮತ್ತು ನಿಖರ ಮತದಾರರ ಪಟ್ಟಿ ಸಿದ್ಧಪಡಿಸುವಂತೆ ಚುನಾವಣಾ ಮತದಾರರ ಪಟ್ಟಿ ವೀಕ್ಷಕ ಮೊಹಮ್ಮದ್‌ ಮೊಹಸಿನ್‌ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮತದಾರರ ಪಟ್ಟಿ ಸಿದ್ಧಪಡಿಸುವಿಕೆ ಕುರಿತ ಮೂರನೇ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಹಶೀಲ್ದಾರ ಮತ್ತು ಸಹಾಯಕ ಆಯುಕ್ತರು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳುವ ಮುಂಚೆ ಎಲ್ಲ ಅಗತ್ಯ ಕ್ರಮ ಕೈಗೊಂಡು ಮತದಾರರ ಪಟ್ಟಿ ಸಿದ್ಧಗೊಳಿಸಬೇಕು. ಮತದಾರರ ಪಟ್ಟಿಯಲ್ಲಿ ಕನಿಷ್ಠ ಪಕ್ಷ ಪ್ರತಿಯೊಂದು ಕುಟುಂಬದ ಮುಖ್ಯಸ್ಥರ ಮೊಬೈಲ್‌ ಸಂಖ್ಯೆ ನಮೂದಿಸಬೇಕು ಎಂದು ಹೇಳಿದರು.

ಮತದಾರರ ಪಟ್ಟಿಯಲ್ಲಿ 18 ವರ್ಷ ದಾಟಿದ ಮತದಾರರ ಹೆಸರನ್ನು ಸರಾಗವಾಗಿ ನೋಂದಾಯಿಸಿ ಕೊಳ್ಳಬಹುದು. ಆದರೆ ಮತದಾರರ ಪಟ್ಟಿಯಿಂದ ಮತದಾರರನ್ನು ತೆಗೆದು ಹಾಕಲು ಅಗತ್ಯ ಕ್ರಮ ಕೈಗೊಳ್ಳಬೇಕು. ಮತದಾರರ ಪಟ್ಟಿಯಿಂದ ಕೈಬಿಡುತ್ತಿರುವ ಮತದಾರರ ವಿವರವನ್ನು ಬೂತ್‌ ಮಟ್ಟದಲ್ಲಿ ಪ್ರಚುರಪಡಿಸಿ ಬೂತ್‌ ಮಟ್ಟದ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ಕುಟುಂಬದ ವಿವರಣೆ ಪಡೆದು ಹೆಸರನ್ನು ಪಟ್ಟಿಯಿಂದ ಕೈಬಿಡಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಮಾತನಾಡಿ, ಜಿಲ್ಲೆಯಲ್ಲಿ 18ರಿಂದ 19ವರ್ಷದೊಳಗಿನ ಒಟ್ಟು 9059 ನೂತನ ಮತದಾರರನ್ನು ನೋಂದಣಿ ಮಾಡಿಕೊಳ್ಳಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿದ್ದು, ಫೆ. 28ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. 

ಜಿಲ್ಲೆಯಲ್ಲಿ ಮತದಾರರ ಗುರುತಿನ ಚೀಟಿ ಮೇಲೆ ಬಳಸುವ ಹೋಲೋಗ್ರಾಂ ಕೊರತೆಯಿಂದ 76 ಸಾವಿರ ಮತದಾರರ ಚೀಟಿ ವಿತರಣೆ ಬಾಕಿಯಿದೆ. ಜಿಲ್ಲಾದ್ಯಂತ ಮತದಾನ ಕೇಂದ್ರಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿದ್ದು, 1300 ಮತದಾನ ಕೇಂದ್ರಗಳ ದುರಸ್ತಿ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.

Advertisement

ಮುಖಂಡರೊಂದಿಗೆ ಸಭೆ: ಸಾರ್ವ ಜನಿಕರಿಂದ ಹಾಗೂ ರಾಜಕೀಯ ಪಕ್ಷದ ಮುಖಂಡರುಗಳಿಂದ ಮತದಾರರ ಪಟ್ಟಿ ಬಗ್ಗೆ ಸಲಹೆ-ಸೂಚನೆ ಮತ್ತು ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಮೊಹಮ್ಮದ್‌ ಮೊಹಸಿನ್‌, ರಾಜಕೀಯ ಪಕ್ಷದ ಮುಖಂಡರು ತಮ್ಮ ಪಕ್ಷದಿಂದ ಬೂತ್‌ ಮಟ್ಟದ ಏಜೆಂಟರ್‌ ಮಾಹಿತಿ ನೀಡಬೇಕು. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನನ್ನು ಖಚಿತ ಪಡಿಸಿಕೊಳ್ಳಬೇಕು. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರತಿ ಮತಕ್ಷೇತ್ರವಾರು ಹಾಗೂ ಮತಗಟ್ಟೆವಾರು ಸರಹದ್ದು ಗುರುತಿಸಿ ಅಳವಡಿಸಲಾಗಿದೆ.

ಫೆ. 27ರಿಂದ ಚುನಾವಣಾ ಮತಯಂತ್ರ ಹಾಗೂ ವಿವಿ ಪ್ಯಾಟ್‌ ಯಂತ್ರಗಳ ಪ್ರಥಮ ಹಂತದ ತಪಾಸಣೆ ನಡೆಯಲಿದೆ. ಈ ಸಂದರ್ಭದಲ್ಲಿ ರಾಜಕೀಯ ಪಕ್ಷದವರು ಹಾಜರಿದ್ದು, ಯಂತ್ರಗಳನ್ನು ಪರಿಶೀಲಿಸಬೇಕು. ಪ್ರತಿ ಶನಿವಾರ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ನಡೆಯುವ ಚುನಾವಣಾ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಜಿಪಂ ಸಿಇಒ ಹಾಗೂ ಸ್ವೀಪ್‌ ಸಮಿತಿ ಅಧ್ಯಕ್ಷೆ ಹೆಪ್ಸಿಬಾರಾಣಿ ಕೊರ್ಲಪಾಟಿ, ಪಾಲಿಕೆ ಆಯುಕ್ತ ರಘುನಂದನಮೂರ್ತಿ, ಸೇಡಂ ಸಹಾಯಕ ಆಯುಕ್ತ ಬಿ.ಸುಶೀಲಾ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಕಲಬುರಗಿ ಸಹಾಯಕ ಆಯುಕ್ತ ರಾಚಪ್ಪ, ಎಲ್ಲ ತಾಲೂಕುಗಳ ತಹಶೀಲ್ದಾರರು ಪಾಲ್ಗೊಂಡಿದ್ದರು. 

ಮತದಾನ ಹೆಚ್ಚಳಕ್ಕೆ ಮೊಹಸಿನ್‌ ಕರೆ
ಕಲಬುರಗಿ: ನಗರ ಪ್ರದೇಶಗಳಲ್ಲಿರುವ ಎಲ್ಲ ಮತದಾರರು ಮತದಾನದಂದು ಮತಗಟ್ಟೆಗಳಿಗೆ ತೆರಳಿ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ನಗರ ಪ್ರದೇಶದ ಮತದಾನದ ಪ್ರಮಾಣ ಹೆಚ್ಚಿಸಬೇಕು ಎಂದು ಚುನಾವಣಾ ಮತದಾರರ ಪಟ್ಟಿ ವೀಕ್ಷಕ ಮೊಹಮ್ಮದ್‌ ಮೊಹಸಿನ್‌ ಹೇಳಿದರು.

ನಗರದ ಏಶಿಯನ್‌ ಮಾಲ್‌ನಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ಮತದಾರರಲ್ಲಿ ಜಾಗೃತಿ ಮೂಡಿಸಲು ಫ್ಯಾಶನ್‌ ಮ್ಯೂಸಿಕ್‌ ಸ್ಕೂಲ್‌ ಮೂಲಕ ಹಮ್ಮಿಕೊಂಡಿದ್ದ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 18 ವರ್ಷ ತುಂಬಿದ ಎಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಚುನಾವಣಾ ಆಯೋಗವು ಚುನಾವಣೆಗಳ ಮೂಲಕ ಉತ್ತಮ ಜನಪ್ರತಿನಿಧಿಗಳ ಆಯ್ಕೆಗಾಗಿ ಮತದಾನದ ಪ್ರಮಾಣ ಹೆಚ್ಚಿಸಲು ಜಾಗೃತಿ ಮೂಡಿಸುತ್ತಿದೆ. ಎಲ್ಲ ಮತದಾರರು ಜಾಗೃತರಾಗಿ ನೈತಿಕತೆಯಿಂದ ಮತದಾನ ಮಾಡಬೇಕು ಎಂದು ಹೇಳಿದರು.

ಸ್ವೀಪ್‌ ಸಮಿತಿ ಅಧ್ಯಕ್ಷೆ ಹೆಪ್ಸಿಬಾರಾಣಿ ಕೊರ್ಲಪಾಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸೇಡಂ ಸಹಾಯಕ ಆಯುಕ್ತೆ ಬಿ. ಸುಶೀಲಾ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. ಫ್ಯಾಶನ್‌ ಮ್ಯೂಸಿಕ್‌ ಶಾಲೆ ಗಾಯಕರು ಚುನಾವಣಾ ಗೀತೆ ಪ್ರಸ್ತುತಪಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next