ವಾಡಿ: ಜಾತಿ ವ್ಯವಸ್ಥೆ ಜೀವಂತವಾಗಿಟ್ಟಿರುವ ಧರ್ಮ ಸಂಪ್ರದಾಯ ಸ್ತ್ರೀಕುಲವನ್ನು ತುಚ್ಚವಾಗಿ ಕಾಣುತ್ತಿದೆ. ಪುರುಷ ಪ್ರಧಾನ್ಯತೆ ಮತ್ತು ಮತಾಂಧತೆ ಮಹಿಳೆಯರ ಬದುಕಿನಲ್ಲಿ ವಿಕೃತ ಹಿಂಸೆ ಹುಟ್ಟುಹಾಕುತ್ತಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ರಾಜ್ಯ ನಾಯಕಿ, ಹಿರಿಯ ಲೇಖಕಿ ದು. ಸರಸ್ವತಿ ಹೇಳಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಪಟ್ಟಣದ ಅಂಬೇಡ್ಕರ್ ಕಾಲೋನಿಯ ಸಿದ್ಧಾರ್ಥ ಭವನದಲ್ಲಿ ಏರ್ಪಡಿಸಲಾಗಿದ್ದ “ಸಮತೆಯಡೆಗೆ ನಮ್ಮ ನಡಿಗೆ’ ಧ್ಯೇಯವಾಕ್ಯದ ಅರಿವಿನ ಪಯಣ ಜಾಥಾ ಉದ್ದೇಶಿಸಿ ಅವರು ಮಾತನಾಡಿದರು.
ಮಹಿಳೆಯರ ಮೇಲಿನ ದೌರ್ಜನ್ಯಗಳು ಇತ್ತೀಚೆಗೆ ಮಾಮೂಲಿ ವಿಷಯವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪತ್ನಿಗೆ ಹೊಡೆಯುವ ಪತಿಯೇ ನಿಜವಾದ ಪುರುಷ ಎನ್ನುವ ಕ್ರೌರ್ಯ ಸಮರ್ಥಕ ಮನಸ್ಥಿತಿವುಳ್ಳ ಮಹಿಳೆಯರನ್ನು ಜೀವಂತ ಶವವಾಗಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೌರ್ಜನ್ಯ ಧಿಕ್ಕರಿಸಿ ಸ್ತ್ರೀಶಕ್ತಿ ದುರ್ಗಿಯ ಅವತಾರದಲ್ಲಿ ಸಿಡಿದೇಳಬೇಕಿದೆ. ಹಿಂಸೆಯನ್ನು ಇಲ್ಲವಾಗಿಸಲು ಸಮಸಮಾಜ ಕಟ್ಟುವುದೊಂದೇ ನಮ್ಮ ಗುರಿಯಾಗಬೇಕು. ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ ಅಂಬೇಡ್ಕರ್ ಸ್ತ್ರೀ ಸಮಾನತೆ ಬಯಸದ ಸರ್ಕಾರದ ವಿರುದ್ಧ ಸಂಘರ್ಷ ನಡೆಸಿದ್ದರು. ಮಹಿಳೆಯರಿಗಾಗಿಯೇ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಹೋರಾಟದ ಸಾಗರಕ್ಕೆ ಸೇರಿಕೊಂಡಿದ್ದರು. ಅದಾಗ್ಯೂ ಹೆಣ್ಣಿನ ಶೋಷಣೆ ಮುಂದುವರಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉಪನ್ಯಾಸಕ ಡಾ| ಪ್ರಭು ಖಾನಾಪುರೆ, ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ, ಪುರಸಭೆ ಉಪಾಧ್ಯಕ್ಷ ದೇವಿಂದ್ರ ಕರದಳ್ಳಿ, ವಕೀಲ ಶ್ರವಣಕುಮಾರ ಮೊಸಲಗಿ, ಮುಖಂಡರಾದ ದೇವಿಂದ್ರ ನಿಂಬರ್ಗಾ, ಸೂರ್ಯಕಾಂತ ರದ್ದೇವಾಡಿ, ಶರಣಬಸು ಸಿರೂರಕರ, ರವಿ ಕೋಳಕೂರ, ವಿಕ್ರಮ ನಿಂಬರ್ಗಾ, ಮಹಿಳಾ ಒಕ್ಕೂಟದ ಅಶ್ವಿನಿ ಮದನಕರ, ಶೋಭಾ ನಿಂಬರ್ಗಾ, ಪೂಜಾ ಸಿಂಗೆ, ಪ್ರಿಯಾಂಕಾ ಮಾವಿನಕರ, ಭವನಿಪ್ರಸಾದ ಶಿವುಕೇರಿ ಹಾಗೂ ಇನ್ನಿತರ ಮಹಿಳೆಯರು ಪಾಲ್ಗೊಂಡಿದ್ದರು. ಸ್ತ್ರೀ ದೌರ್ಜನ್ಯ ವಿರುದ್ಧ ಜಾಗೃತಿ ಮೂಡಿಸಬಲ್ಲ ಮೂರು ಕಿರು ನಾಟಕ ಪ್ರದರ್ಶಿಸಲಾಯಿತು. ಸ್ತ್ರೀ ಸಮಾನತೆ ಬಯಸಿ ಮೊಂಬತ್ತಿ ಮೆರವಣಿಗೆ ಮಾಡಲಾಯಿತು.