Advertisement

ವಿಮ್ಸ್‌ ಆಸ್ಪತ್ರೆ ಭೂಮಿ ಮೇಲಿನ ನರಕ

03:52 PM Jun 14, 2018 | |

ಬಳ್ಳಾರಿ: ಭೂಮಿ ಮೇಲಿನ ನರಕವನ್ನು ಕಾಣಬೇಕಾದರೆ, ಒಮ್ಮೆ ವಿಮ್ಸ್‌ ಆಸ್ಪತ್ರೆಗೆ ಭೇಟಿ ನೀಡಿದರೆ ಸಾಕು… ಅವ್ಯವಸ್ಥೆ, ಅಸ್ವಚ್ಛತೆ, ನಿರ್ವಹಣೆಯ ಕೊರತೆ, ಮೂಲ ಸೌಲಭ್ಯಗಳ ಕೊರತೆ ಎಲ್ಲವೂ ಒಂದೇ ಸೂರಿನಡಿ ದರ್ಶನ ನೀಡುತ್ತವೆ… ಇಲ್ಲಿನ ಅಸ್ವಚ್ಛತೆ, ದುರ್ವಾಸನೆ ರೋಗಿಗಳೊಂದಿಗೆ ಬಂದವರಿಗೂ ರೋಗ ಆವರಿಸಲಿದ್ದು, ವಿಮ್ಸ್‌ನ್ನು ತೆಗೆಯುವುದಕ್ಕಿಂತ ಮುಚ್ಚುವುದೇ ಲೇಸು…… ಅದಕ್ಕೆ ಶಿಫಾರಸು ಮಾಡಲು ನಾನು ಸಹ ಸಿದ್ಧ….

Advertisement

ನಗರದ ವಿಮ್ಸ್‌ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ವಿವಿಧ ವಾರ್ಡ್‌ಗಳನ್ನು ಪರಿಶೀಲನೆ ನಡೆಸಿದ್ದ ರಾಜ್ಯ ಮಹಿಳಾ
ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ, ಅಲ್ಲಿನ ಅವ್ಯವಸ್ಥೆ, ನಿರ್ವಹಣೆಯ ಕೊರತೆ, ಮೂಲ ಸೌಲಭ್ಯಗಳ ಕೊರತೆಯನ್ನು
ಕಂಡು ವ್ಯಕ್ತಪಡಿಸಿದ ಅಸಮಾಧಾನದ ಮಾತುಗಳಿವು.

ವಿಮ್ಸ್‌ ಆಸ್ಪತ್ರೆಗೆ ಭೇಟಿ ನೀಡುವುದಕ್ಕೂ ಮುನ್ನ ನಗರದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಅಲ್ಲಿನ ವ್ಯವಸ್ಥೆ, ಸ್ವಚ್ಛತೆ,
ಮೂಲ ಸೌಲಭ್ಯ, ರೋಗಿಗಳ ಆರೈಕೆ, ದಾಖಲೆಗಳ ನಿರ್ವಹಣೆ ಕಂಡು ಖುಷಿಯಾಯಿತು. ವಿಮ್ಸ್‌ ಆಸ್ಪತ್ರೆಯೂ
ಅಷ್ಟೇ ಸ್ವಚ್ಛತೆಯಲ್ಲಿರಬಹುದು ಎಂಬ ನಿರೀಕ್ಷೆಯಿಂದ ಭೇಟಿ ನೀಡಿದೆ. ಆದರೆ, ಇಲ್ಲಿ ಭೂಮಿ ಮೇಲಿನ ನರಕವನ್ನು ದರ್ಶನ ಮಾಡಿಸುತ್ತದೆ. ವಿಮ್ಸ್‌ನಲ್ಲಿನ ರೋಗಿಗಳ ಬೆಡ್‌, ಶೌಚಗೃಹ, ಸ್ವಚ್ಛತೆ, ವಾರ್ಡ್‌ಗಳ ನಿರ್ವಾಹಣೆ ಕಂಡು ನಿರ್ದೇಶಕರಿಗೆ, ವೈದ್ಯರಿಗೆ ಹಾಗೂ ನರ್ಸ್‌ಗಳಿಗೆ ತರಾಟೆಗೆ ತಗೆದುಕೊಂಡು ಛೀಮಾರಿ ಹಾಕಿದರು.

ಆಸ್ಪತ್ರೆಯಲ್ಲಿನ ಶೌಚಾಲಯವನ್ನು ಕಂಡ ನಾಗಲಕ್ಷೀಯವರು, ನಿಮ್ಮ ಮನೆಯಲ್ಲಿ ಹೀಗೆ ಇಟ್ಟುಕೊಳ್ಳುತ್ತೀರಾ ಎಂದು ಆಸ್ಪತ್ರೆಯ ಪ್ರಭಾರಿ ನಿರ್ದೇಶಕರು ಮತ್ತು ಅಧೀಕ್ಷಕರನ್ನು ತರಾಟೆಗೆ ತೆಗೆದುಕೊಂಡರು. ವಾರ್ಡ್ಗಳಲ್ಲಿ ಇರಿಸಿದ್ದ ತುಕ್ಕು ಹಿಡಿದ ಟೇಬಲ್‌ ಗಳನ್ನು ಖುದ್ದು ಬದಲಾಯಿಸಿದರು. ಆಸ್ಪತ್ರೆಯುದ್ಧಕ್ಕೂ ಮೂಗು ಮುಚ್ಚಿಕೊಂಡು ಪರಿಶೀಲನೆ ನಡೆಸಿದರು.

ಬಳಿಕ ಆಸ್ಪತ್ರೆಯ ಮಹಿಳೆಯರ, ಮಕ್ಕಳ ವಿಭಾಗಕ್ಕೆ ತೆರಳಿ, ಅಲ್ಲಿನ ಸ್ವಚ್ಛತೆ, ವೈದ್ಯರ, ನರ್ಸ್‌ಗಳ, ಚಿಕಿತ್ಸೆ ನೀಡುವ ಬಗ್ಗೆ ಮತ್ತು ಸೌಲಭ್ಯಗಳ ಕುರಿತು ರೋಗಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದರು. ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್‌,
ಆಯಾಗಳು ಒಳಗೆ ಬಿಡಲು ಹಣ ಕೇಳುತ್ತಾರೆ. ವಿಮ್ಸ್‌ ಕೇವಲ ಸರ್ಕಾರಿ ಆಸ್ಪತ್ರೆಯಾಗಿದ್ದು, ಹಣ ನೀಡಿದರೆ ಮಾತ್ರ
ಕೆಲಸಗಳಾಗುತ್ತವೆ. ಬೆಡ್‌ಗೂ ಹಣ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರೋಗಿಗಳಿಗೆ ಸೂಕ್ತ ಸೌಲಭ್ಯ ನೀಡುತ್ತಿಲ್ಲ.

Advertisement

ನಿರ್ವಹಣೆ ಕೊರತೆಯಿಂದ ಎಲ್ಲೆಡೆ ದುರ್ವಾಸನೆ ಬೀರುತ್ತಿದ್ದು, ಒಂದೂವರೆ ಗಂಟೆ ಆಸ್ಪತ್ರೆಯಲ್ಲೇ ಇದ್ದರೆ ರೋಗಿಗಳ
ಸಂಬಂಧಿಕರು ಸಹ ಕಾಯಿಲೆಗಳಿಂದ ಬಳಲಬೇಕಾಗುತ್ತದೆ. ಆಸ್ಪತ್ರೆಗೆ ಬಂದ ಬಡ ರೋಗಿಗಳು ತೀವ್ರ ತೊಂದರೆ
ಅನುಭವಿಸಬೇಕಾಗಿದೆ ಎಂದು ರೋಗಿಗಳ ಸಂಬಂಧಿಕರು, ದೊಡ್ಡ ಸಮಸ್ಯೆಗಳ ಪಟ್ಟಿಯನ್ನೇ ಮುಂದಿಟ್ಟರು.

ಮನುಷ್ಯ ಬದುಕಿದ್ದಾಗಲೇ ನರಕ ದರ್ಶನ:
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನುಷ್ಯ ಬದುಕಿದ್ದಾಗಲೇ ನರಕ ದರ್ಶನ ಪಡೆಯಲು ವಿಮ್ಸ್‌ಗೆ ಭೇಟಿ ಕೊಟ್ಟರೆ ಸಾಕು. 1017 ಬೆಡ್‌ ಗಳಿರುವ ಈ ಆಸ್ಪತ್ರೆ 1947 ಪೂರ್ವದಲ್ಲಿ ಇದ್ದ ಆಸ್ಪತ್ರೆ ಎಂಬಂತೆ ಭಾಸವಾಗುತ್ತಿದೆ. ಇಂದಿಗೂ ಮೂಲ ಸೌಲಭ್ಯಗಳಿಂದ ಬಳಲುತ್ತಿದೆ. ನಿರ್ದೇಶಕರ, ವೈದ್ಯರ ನಿರ್ಲಕ್ಷ್ಯದಿಂದ
ಆಸ್ಪತ್ರೆಯಲ್ಲಿ ಅವ್ಯವಸ್ಥೆ ಕಾಡುತ್ತಿದೆ. ಸರಿಯಾದ ಸ್ವಚ್ಛತೆಯಿಲ್ಲ.ರೋಗಿಗಳೊಂದಿಗೆ ನರ್ಸ್‌, ಡಿ ಗ್ರೂಪ್‌ ನೌಕರರ ವರ್ತನೆ ಸರಿಯಿಲ್ಲ. ವಿಮ್ಸ್‌ನಲ್ಲಿ ಚಿಕಿತ್ಸೆ ನಂಬಿಕೊಂಡು ಬಂದಿದ್ದ ರೋಗಿಗಳ ಸ್ಥಿತಿ ದೇವರಿಗೇ ಪ್ರೀತಿ ಎನ್ನುವಂತಾಗಿದೆ
ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಪರಿಶೀಲಿಸಲು ವೈದ್ಯಕೀಯ ಇಲಾಖೆಗೆ ಕಣ್ಣು, ಕಿವಿ, ಮೂಗು ಇಲ್ಲದಂತಾಗಿದ್ದು, ಅಧಿಕಾರಿಗಳ ನಡೆ ಅನುಮಾನ ಮೂಡಿಸಿದೆ. ಈ ಆಸ್ಪತ್ರೆ ತೆರೆಯುವುದಕ್ಕಿಂತ ಮುಚ್ಚುವುದು ಉತ್ತಮ. ಇದಕ್ಕೆ ನಾನು ಬೇಕಾದರೆ ಶಿಫಾರಸು ಮಾಡುವೆ. ಇಲ್ಲಿನ ಅವ್ಯವಸ್ಥೆ ಬಗ್ಗೆ ವೈದ್ಯಕೀಯ, ಆರೋಗ್ಯ ಸಚಿವರ ಬಳಿ ಚರ್ಚಿಸಲಾಗುವುದು. ಆಸ್ಪತ್ರೆಯ ನಿರ್ವಾಹಣೆ ಬಗ್ಗೆ ನಿರ್ಲಕ್ಷ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಭ್ರಷ್ಟಾಚಾರ ನಿರ್ಮೂಲನೆ ಎಂದು ದೊಡ್ಡದಾಗಿ ಬೋರ್ಡ್‌ ಹಾಕಿಕೊಂಡಿರುವ ಆಸ್ಪತ್ರೆಯಲ್ಲಿ ವೈದ್ಯರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. 500, 200 ರೂ. ಕೊಟ್ಟರೆ ಮಾತ್ರ ಇಲ್ಲಿ ಚಿಕಿತ್ಸೆ ನೀಡುವುದು ವಿಪರ್ಯಾಸ. ಈ ಆಸ್ಪತ್ರೆ ವೈದ್ಯಲೋಕಕ್ಕೆ ಕಳಂಕವಾಗಿದೆ. ತರಕಾರಿ, ಫಿಶ್‌ ಮಾರ್ಕೆಟ್‌ ಎಂಬಂತಿದೆ. ಇದರಿಂದ ಇಲ್ಲಿ ರೋಗಿಗಳು ಗುಣಮುಖರಾಗುವ ಬದಲು ಪುನಃ ಇಲ್ಲಿಯೇ ದಾಖಲಾಗುವುದು ಮಾತ್ರ ನಿಶ್ಚಿತ.
ನಾಗಲಕ್ಷ್ಮಿ ಬಾಯಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ

ನರ್ಸ್‌, ಆಯಾಗಳು ರೋಗಿಗಳ ಸಂಬಂಧಿಕರಿಂದ ಹಣ ಪಡೆಯುವ ಬಗ್ಗೆ ಗಮನಕ್ಕೆ ಬಂದಿದ್ದು, ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ. ಇಲ್ಲಿನ ಮೂಲ ಸೌಲಭ್ಯಗಳ ಕೊರತೆ ಬಗ್ಗೆಯೂ ಈಗಾಗಲೇ ನಿರ್ದೇಶಕರ ಗಮನ ಸೆಳೆದಿದ್ದು, ಇದೀಗ ಅಧ್ಯಕ್ಷರು ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಮತ್ತೂಮ್ಮೆ ಗಮನ ಸೆಳೆಯಲಾಗುವುದು. ಇನ್ನು ಮುಂದೆ ಆಸ್ಪತ್ರೆಯಲ್ಲಿ ಸ್ವಚ್ಛತೆ, ಹಣ ವಸೂಲಿ ಮಾಡುವವರ ಬಗ್ಗೆ ಕಟ್ಟುನಿಟ್ಟನ ಕ್ರಮ ಕೈಗೊಳ್ಳಲಾಗುವುದು.
 ಮರಿರಾಜ್‌, ವಿಮ್ಸ್‌ ಅಧೀಕ್ಷಕ, ಬಳ್ಳಾರಿ.

Advertisement

Udayavani is now on Telegram. Click here to join our channel and stay updated with the latest news.

Next