ಕೊಳ್ಳೇಗಾಲ: ಕಬಿನಿ ಮತ್ತು ಕೆಆರ್‌ಎಸ್‌ನಿಂದ ಅತಿ ಹೆಚ್ಚು ನೀರನ್ನು ಹೊರ ಬಿಟ್ಟ ಪರಿಣಾಮ ಕಾವೇರಿ ನದಿ ಅಪಾಯಮಟ್ಟ ಮೀರಿದ್ದು, ನದಿ ತೀರದ ಗ್ರಾಮಗಳು ಮುಳುಗಡೆಯಾಗಿ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಮಂಗಳವಾರ ನೀರು ಇಳಿಮುಖವಾದ ಪರಿಣಾಮ ಜಿಲ್ಲಾಡಳಿತ ಕೊಂಚ ನಿಟ್ಟಿಸಿರು ಬಿಡುವಂತಾಗಿದೆ.
ಕಾವೇರಿ ನದಿಯ ತೀರದ ಗ್ರಾಮಗಳಾದ ದಾಸನಪುರ, ಹಳೇ ಅಣಗಳ್ಳಿ, ಹರಳೆ, ಮುಳ್ಳೂರು, ಹಳೇ ಹಂಪಾಪುರ, ಯಡಕುರಿಯ ಗ್ರಾಮಗಳು ನೀರಿನ ಪ್ರವಾಹದಿಂದ ಗ್ರಾಮವನ್ನು ಸುತ್ತುವರಿದ ಪರಿಣಾಮ ಸುಮಾರು 37 ಮನೆಗಳು ನೆಲಕ್ಕೆ ಉರುಳಿರುವ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳ ತಂಡ ಭೇಟಿ: ತಾಲೂಕಿನ ದಾಸನಪುರ 22, ಹಳೇ ಹಂಪಾಪುರ 3, ಮುಳ್ಳೂರು 5, ಹಳೇ ಅಣಗಳ್ಳಿ 7 ಸೇರಿದಂತೆ ಒಟ್ಟು 37 ಮನೆಗಳು ನೆಲಸಮಗೊಂಡಿದೆ. ಎಲ್ಲಾ ಗ್ರಾಮಗಳಿಗೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮತ್ತು ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವರದಿ ನೀಡಲು ಸೂಚನೆ: ತಾಲೂಕು ಮಟ್ಟದ ಅಧಿಕಾರಿಗಳು ಪ್ರವಾಹದಿಂದ ಬಿದ್ದು ಹೋಗಿರುವ ಮನೆಗಳು, ಶಿಥಿಲಗೊಂಡಿರುವ ಮನೆಗಳು ಮತ್ತು ಬೆಳೆ ಹಾನಿಯನ್ನು ಸಂಪೂರ್ಣ ಸಮೀಕ್ಷೆ ಮಾಡಿ ಯಾರಿಗೂ ಅನ್ಯಾಯವಾಗದಂತೆ ಅಂದಾಜು ವೆಚ್ಚ ತಯಾರಿಸಿ ವರದಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೂಲ ಸೌಕರ್ಯ ಕಲ್ಪಿಸಲಾಗಿದೆ: ಸುದ್ಧಿಗಾರರೊಂದಿಗೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ಈಗಾಗಲೇ ಪುನರ್ ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ದಾಸನಪುರ ಗ್ರಾಮದವರಿಗೆ ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿ 398 ಜನರು, ಹಳೇ ಅಣಗಳ್ಳಿ ಗ್ರಾಮದವರಿಗೆ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ 303, ಹಳೇ ಹಂಪಾಪುರ ಗ್ರಾಮದವರಿಗೆ ಮಹದೇಶ್ವರ ಕಲ್ಯಾಣ ಮಂಟಪ 154, ಮುಳ್ಳೂರು ಗ್ರಾಮದವರಿಗೆ ಮುಳ್ಳೂರಿನ ಸರ್ಕಾರಿ ಶಾಲೆಯಲ್ಲಿ 320 ಗ್ರಾಮಸ್ಥರು ತಂಗಿ ಊಟ, ಉಪಚಾರವನ್ನು ಪಡೆದುಕೊಳ್ಳುತ್ತಿದ್ಧಾರೆ. ಅವರಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದರು.
ಸೂಕ್ತ ಪರಿಹಾರದ ಭರವಸೆ: ಹಲವಾರು ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಕಳೆದ ವರ್ಷ ಸರಿಯಾದ ಪರಿಹಾರ ಸಿಕ್ಕಿಲ್ಲವೆಂದು ದೂರುಗಳು ಬಂದಿದ್ದು, ಈ ಬಾರಿ ಆ ರೀತಿಯಾಗದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದು, ಮನೆ ಕಳೆದುಕೊಂಡವರಿಗೆ ದುರಸ್ತಿಯಾಗಿ ದ್ದವರಿಗೆ ಹಾಗೂ ವಿವಿಧ ಫಸಲನ್ನು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಲಾಗುವುದು ಎಂದು ತಿಳಿಸಿದರು.
ಉಪ ವಿಭಾಗಾಧಿಕಾರಿ ನಿಖಿತಾ ಎಂ.ಚಿನ್ನಸ್ವಾಮಿ, ತಹಶೀಲ್ದಾರ್ ಕುನಾಲ್, ಡಿವೈಎಸ್ಪಿ ನವೀನ್‌ಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಕಾಂತ್, ಎಸ್‌ಐಗಳಾದ ರಾಜೇಂದ್ರ, ಅಶೋಕ್, ಜಿಲ್ಲಾ ಆರೋಗ್ಯಾಧಿಕಾರಿ ರವಿ, ಪೌರಾಯುಕ್ತ ನಾಗಶೆಟ್ಟಿ, ಲೋಕೋಪಯೋಗಿ ಇಲಾಖೆ ಎಇಇ ಮಹದೇವಸ್ವಾಮಿ, ಪಶು ವೈದ್ಯಾಧಿಕಾರಿ ಡಾ.ವೆಂಕಟರಾಮು, ಸಮಾಜ ಕಲ್ಯಾಣ ಇಲಾಖೆಯ ಜಯಕಾಂತ ಸೇರಿದಂತೆ ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗ ಇದ್ದರು.