Advertisement

ಬೆದ್ರಕೆರೆ ಅಭಿವೃದ್ಧಿಗೆ ಗ್ರಾಮಸ್ಥರ ಆಗ್ರಹ

04:36 PM May 20, 2019 | Team Udayavani |

ಕುಮಟಾ: ತಾಲೂಕಿನ ಕಲ್ಲಬ್ಬೆ ಪಂಚಾಯಿತಿ ವ್ಯಾಪ್ತಿಯ ಸಾಣಕಲ್ ಬಳಿ ಬೆದ್ರಕೆರೆ ಅಭಿವೃದ್ಧಿ ಕಾಮಗಾರಿಗೆ ಬಿಡುಗಡೆಯಾದ ಹಣ ಕೆರೆಯ ಅರ್ಧ ಹೂಳೆತ್ತಲೂ ಸಾಲದು. ಆದ್ದರಿಂದ ಹೆಚ್ಚಿನ ಅನುದಾನ ಕೊಟ್ಟು ಕೆರೆಯನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸುವಂತೆ ಸ್ಥಳೀಯರು ವಿನಂತಿಸಿದ್ದಾರೆ.

Advertisement

ಕಲ್ಲಬ್ಬೆ ಗ್ರಾಮದ ಎತ್ತರದ ಪ್ರದೇಶದಲ್ಲಿರುವ ಬೆದ್ರಕೆರೆ ಸುಮಾರು 9 ಗುಂಟೆಗೂ ಹೆಚ್ಚು ವಿಶಾಲವಾಗಿದೆ. ಊರಿನ ನಡುವೆ ಇರುವ ಈ ಕೆರೆಯಿಂದ ನೀರು ನಿರಂತರ ಹರಿಯುತ್ತಿತ್ತು. ಯಾವತ್ತೂ ಹೂಳೆತ್ತದೇ ಇದ್ದುದರಿಂದ ಜಲಮೂಲ ಕ್ಷೀಣಿಸಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರ ಮನವಿಯ ಮೇರೆಗೆ ಜಿಪಂದಿಂದ ಕೆರೆಯನ್ನು ಅಭಿವೃದ್ಧಿಗೆ ಗುರುತಿಸಿ 5 ಲಕ್ಷ ರೂ. ಅನುದಾನ ಮಂಜೂರಿ ಮಾಡಿ ಕಾಮಗಾರಿ ಪ್ರಗತಿಯಲ್ಲಿದೆ.

ಬೆದ್ರಕೆರೆ ಜಾಗದ ಮಾಲಕ ಆರ್‌.ಜಿ. ಹೆಗಡೆ ಹೇಳುವಂತೆ, 9 ಗುಂಟೆ ಜಾಗದಲ್ಲಿರುವ ಈ ಕೆರೆಯ ಸಂಪೂರ್ಣ ಹೂಳೆತ್ತಿದರೆ ಮಾತ್ರ ನಿಜವಾದ ಪ್ರಯೋಜನವಿದೆ. ಆದರೆ ಲಭ್ಯವಿರುವ ಅನುದಾನದಲ್ಲಿ ಸದ್ಯ 4-5 ಗುಂಟೆಯಷ್ಟು ಜಾಗಕ್ಕೆ ಮಾತ್ರ ಹೂಳೆತ್ತಿ ಸುತ್ತಲೂ ಪಿಚಿಂಗ್‌ ಕಟ್ಟಲು ಸಾಧ್ಯ. ಬೆದ್ರಕೆರೆ ಸಂಪೂರ್ಣ ಹೂಳೆತ್ತಿ ಅಭಿವೃದ್ಧಿಯಾದರೆ ಇಡೀ ಕಲ್ಲಬ್ಬೆ ಗ್ರಾಮಕ್ಕೇ ಅನುಕೂಲವಿದೆ. ಸರ್ಕಾರ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ಅಭಿವೃದ್ಧಿಗೆ ಕೆರೆಯನ್ನು ಗುರುತಿಸಿ ಕಡಿಮೆ ಅನುದಾನಕೊಟ್ಟು ಅರೆಬರೆ ಹೂಳೆತ್ತಿ ಪಿಚಿಂಗ್‌ ಕಟ್ಟಿದರೆ ಕೆರೆ ಅಭಿವೃದ್ಧಿಯ ಮೂಲ ಆಶಯವೇ ವ್ಯರ್ಥವಾಗಲಿದೆ. ಈಗ ತೆಗೆದಿರುವ ಹೂಳು ಮಳೆಗಾಲ ಮುಗಿದ ನಂತರ ಪುನಃ ತುಂಬಿಕೊಳ್ಳುತ್ತದೆ. ಒಮ್ಮೆ ಅಭಿವೃದ್ಧಿ ಮಾಡಿದ ಕೆರೆಯೆಂದು ಮತ್ತೆ ಅನುದಾನ ಮಂಜೂರಿಗೂ ಕಷ್ಟ, ಮಂಜೂರಿ ದೊರೆತರೂ ಅಲ್ಪ ಪ್ರಮಾಣದಲ್ಲಿ ಮಾತ್ರ ಸಿಗಬಹುದು. ಒಟ್ಟಾರೆ ಕೆರೆಯ ನಿಜವಾದ ಪ್ರಯೋಜನಕಾರಿ ಪೂರ್ಣ ಸ್ವರೂಪ ಮತ್ತೆಂದೂ ಕಾಣಲು ಸಾಧ್ಯವೇ ಇಲ್ಲದಂತೆ ಆಗುತ್ತದೆ. ಬೊಕ್ಕಸದ ಹಣ ವ್ಯರ್ಥ ಮಾಡಿದಂತಾಗುತ್ತದೆ. ಹೀಗಾಗಿ ಇಂಥ ಕೆರೆಗಳ ಅಭಿವೃದ್ಧಿಯನ್ನು ಒಂದೇ ಹಂತದಲ್ಲಿ ಪೂರ್ಣ ಪ್ರಮಾಣದಲ್ಲಿ ಮಾಡುವ ಬಗ್ಗೆ ಸಂಬಂಧಪಟ್ಟವರು ಮುತುವರ್ಜಿ ವಹಿಸಬೇಕು ಎಂದು ಸ್ಥಳೀಯರು ಕೋರಿದ್ದಾರೆ.

ಕಲ್ಲಬ್ಬೆ ಬೆದ್ರಕೆರೆ ಹಾಗೂ ಇತರ ನಾಲ್ಕು ಕೆರೆಗಳ ಅಭಿವೃದ್ಧಿಗೆ ಜಿ.ಪಂ ಅನುದಾನದಿಂದ ಕಾಮಗಾರಿ ಪ್ರಗತಿಯಲ್ಲಿದೆ. ಪೂರ್ಣ ಕೆರೆ ಅಭಿವೃದ್ಧಿಗೆ ಅನುದಾನ ಸಾಲದು. ಪೂರ್ಣ ಕೆರೆ ಅಭಿವೃದ್ಧಿಯ ಕ್ರಿಯಾಯೋಜನೆ ಅನ್ವಯಿಸಿ ಹೆಚ್ಚಿನ ಹಣ ಲಭ್ಯವಾದರೆ ಮಾತ್ರ ಜನರ ಆಶಯದಂತೆ ಕೆಲಸ ಮಾಡಲು ಸಾಧ್ಯ.

Advertisement

•ಗಜಾನನ ಪೈ, ಜಿ.ಪಂ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next