ಕೊರಟಗೆರೆ: ತಾಲೂಕಿನ ಕಂದಾಯ ಗ್ರಾಮವಾದ ಕುಮಟೇನಹಳ್ಳಿಗೆ ವಾಸ್ತವದಲ್ಲಿ ರಸ್ತೆಯೇ ಇಲ್ಲದಿದ್ದರೂ, ನಕಾಶೆಯಲ್ಲಿ ರಸ್ತೆಯಿದ್ದು, ಜನರು ಹಳ್ಳವನ್ನೆ ರಸ್ತೆಯನ್ನಾಗಿಸಿಕೊಂಡಿದ್ದು, ಗ್ರಾಮಸ್ಥರ ಸಮಸ್ಯೆ ಕೇಳುವವರೇ ಇಲ್ಲವಾಗಿದೆ.
ಚನ್ನರಾಯನದುರ್ಗಾ ಹೋಬಳಿಯ ಬೂದಗವಿ ಗ್ರಾಪಂ ವ್ಯಾಪ್ತಿಯ ಬೆಂಡೋಣೆಯಿಂದ ಸುಮಾರು 1 ಕಿ.ಮೀ ದೂರ ದಲ್ಲಿರುವ ಕುಮಟೇನಹಳ್ಳಿಯಲ್ಲಿ 80 ಮತದಾರರಿ ದ್ದಾರೆ. 20ಕ್ಕೂ ಹೆಚ್ಚು ಮನೆಗಳಿವೆ. 20 ವರ್ಷದಿಂದ ಪರಿಹಾರ ಸಿಕ್ಕಿಲ್ಲ. ಈ ಕುಗ್ರಾಮ ಜನಪ್ರತಿನಿಧಿಗಳಿಗೆ ನೆನಪಿಗೆ ಬರೋದು ಚುನಾವಣೆ ಸಂದರ್ಭವಷ್ಟೇ. ನಂತರ ಇತ್ತ ಕಡೆ ತಲೆಯೂ ಹಾಕುವುದಿಲ್ಲ. ಯಾರೂ ನಮ್ಮ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ವಯೋವೃದ್ಧೆ ಹಿರಿಯ ಚನ್ನಮ್ಮ ಹೇಳುತ್ತಾರೆ.
ಎಲ್ಲರೂ ಪರಿಶಿಷ್ಟ ವರ್ಗದವರೇ: 20 ಮನೆಗಳಲ್ಲಿ 18 ಮನೆಯ ವಾಸಿಗಳು ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಟುಂಬಗಳೇ ಇದ್ದರೂ ಗ್ರಾಪಂ ವತಿಯಿಂದ ಕುಡಿಯುವ ನೀರು ನೀಡಿದ್ದು ಬಿಟ್ಟರೆ ಬೇರೆ ಸೌಕರ್ಯ ನೀಡಿಲ್ಲ. ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಗ್ರಾಮಸ್ಥರ ಸಮಸ್ಯೆ ಅರಿತು ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಸಿದ್ದರು. ಆದರೆ ಯಾರೂ ಟೆಂಡರ್ ಪಡೆಯಲೇ ಇಲ್ಲ. ಬಿಡುಗಡೆ ಆಗಿರುವ ಅನುದಾನದಲ್ಲಿ ರಸ್ತೆ ಮಾಡಲು ಸಾಧ್ಯವಿಲ್ಲ ಎಂಬುದು ಕಾರಣವಾಗಿದೆ. ಮಾಜಿ ಉಪಮುಖ್ಯ ಮಂತ್ರಿ ಡಾ.ಜಿ. ಪರಮೇಶ್ವರ್ ಅವರನ್ನು ಯಾವ ಪಕ್ಷದ ಕಾರ್ಯಕರ್ತರೂ ಕರೆದುಕೊಂಡು ಬಂದಿಲ್ಲ. ಆದರೂ ಅವರಿಗೆ ಮತ ಚಲಾಯಿಸಿದೆವು. ಅವರ ಪರವಾಗಿ ಮತ ಕೇಳಲು ಬಂದ ಮುಖಂಡರೂ ಗ್ರಾಮದ ಸಮಸ್ಯೆ ತಿಳಿಸುತ್ತಿಲ್ಲ ಎಂದು ಗ್ರಾಮಸ್ಥರ ಅಳಲು.
ನಕಾಶೆ ರಸ್ತೆಯೇ ಮಾಯ: ಗ್ರಾಮದಿಂದ ಸಿದ್ಧರಬೆಟ್ಟಕ್ಕೆ ಸಂಪರ್ಕ ರಸ್ತೆ ಇದ್ದು, ಕೆಲವು ಪ್ರಭಾವಿಗಳು ಬಹುತೇಕ ರಸ್ತೆ ಉಳುಮೆ ಮಾಡಿ ರಸ್ತೆ ಇತ್ತು ಎನ್ನುವ ಕುರುಹು ಇಲ್ಲದಂತೆ ಮಾಡಿದ್ದಾರೆ. ಪ್ರಶ್ನಿಸಿದರೆ ದೌರ್ಜನ್ಯ ಮಾಡುತ್ತಾರೆ. ಮಳೆಗಾಲದಲ್ಲಿ ಹಳ್ಳದ ಮೂಲಕವೇ ಓಡಾಡುವ ಪರಿಸ್ಥಿತಿ ಇದೆ. ನೀರು ಹೆಚ್ಚಾದರೆ ಮಕ್ಕಳು ಶಾಲೆಗೆ ಹೋಗಲಾಗುವುದಿಲ್ಲ.
ಪರಂಗೆ ಪರಿಸ್ಥಿತಿ ತಿಳಿಸಬೇಕಿದೆ: ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ಗೆ ಗ್ರಾಮದ ಪರಿಸ್ಥಿತಿ ಬಗ್ಗೆ ತಿಳಿಸಬೇಕಿದೆ. ಚುನಾವಣೆ ಬಂದಾಗ ಮತ ಪಡೆಯಲು ಬರುವ ಕಾರ್ಯಕರ್ತರು ರಸ್ತೆ ಮಾಡಿಸುತ್ತೇವೆ ಎಂದು ಭರವಸೆ ನೀಡುತ್ತಾರೆ. ನಂತರ ಮಾಯವಾಗುತ್ತಾರೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಪಿಎಚ್‌ಡಿ ಪೂರ್ಣಗೊಳಿಸಿದ್ದೇವೆ. ರಸ್ತೆಯಿಲ್ಲದೆ ಯಾವೊಂದು ವಾಹನ ಸಂಚಾರ ಇರುವುದಿಲ್ಲ. ಅಂಗವೈಕಲ್ಯ ಇರುವುದರಿಂದ ಹೋಗಲು ಕಷ್ಟವಾಗುತ್ತಿದೆ ಸಂಬಂಧಿಸಿದ ಜನಪ್ರತಿನಿಧಿಗಳು ಗ್ರಾಮದ ರಸ್ತೆ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕಿದೆ.
-ಎಸ್.ಎಂ.ದಿನೇಶ್, ಅಂಗವಿಕಲ ಶಿಕ್ಷಕ
-ಎನ್.ಪದ್ಮನಾಭ್