Advertisement
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಹಾಗೂ ಅದರ ಅಂಚಿನಲ್ಲಿರುವ ಗ್ರಾಮಗಳಿಗೆ ಕಾಡುಪ್ರಾಣಿಗಳ ಉಪಟಳ ತಪ್ಪಿದ್ದಲ್ಲ. ಬೆಳೆ ಕೈತಲುಪುವ ವೇಳೆ ಕಾಡಾನೆ, ಕಾಡುಕೋಣ ಮೊದಲಾದ ಕಾಡುಪ್ರಾಣಿಗಳು ದಾಳಿ ಮಾಡುತ್ತಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ. ಕಾಡು ಪ್ರಾಣಿಗಳಿಗೆ ಆಟ, ಕೃಷಿಕರಿಗೆ ಪ್ರಾಣಸಂಕಟ ಎಂಬಂತಾಗಿದೆ.
ಎ. 19ರಂದು ರಾತ್ರಿ ಮಲವಂತಿಗೆ ಗ್ರಾ.ಪಂ. ವ್ಯಾಪ್ತಿಯ ಆವರನಂದಿ ಕಾಡಿನ ಬಳಿ ಇರುವ ಚಂದಪ್ಪ ಮಲೆಕುಡಿಯ ಅವರ ತೋಟಕ್ಕೆ ಕಾಡಾನೆ ಹಿಂಡು ನುಗ್ಗಿದ್ದು, ಅಡಿಕೆ ಮರ, ತೆಂಗಿನ ಮರ ಹಾಗೂ ಬಾಳೆ ಗಿಡಗಳನ್ನು ನಾಶಪಡಿಸಿವೆ. ರಾತ್ರಿ 10ರ ಸುಮಾರಿಗೆ ಆಗಮಿಸಿದ್ದ ವೇಳೆ ಮಳೆ ಸುರಿಯುತ್ತಿದ್ದುದರಿಂದ ಮನೆಯವರಿಗೂ ವಿಚಾರ ತಿಳಿದಿರಲಿಲ್ಲ. ಮನೆಗಿಂತ ಸುಮಾರು 100 ಮೀ. ದೂರದವರೆಗೂ ಬಂದು ಕಾಡಾನೆಗಳು ಪುಂಡಾಟ ತೋರಿವೆ. ಒಟ್ಟು ನಾಲ್ಕು ಕಾಡಾನೆಗಳು ಇದ್ದು, ಇದರಲ್ಲಿ 1 ವರ್ಷದೊಳಗಿನ ಮರಿ ಆನೆಯೂ ಇದೆ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು. ಕಾಡಾನೆ ದಾಳಿ
ತಾಲೂಕಿನಲ್ಲಿ ಒಟ್ಟು 5 ಕಾಡಾನೆಗಳು ತಿರುಗಾಡುತ್ತಿವೆ. ಇದರಲ್ಲಿ ಹಿಂದೆ ಮೂರು ದೊಡ್ಡ ಆನೆಗಳಿದ್ದು, ವರ್ಷದಿಂದೀಚೆಗೆ ಮರಿ ಆನೆಯೂ ಇದೆ. ಈ ನಾಲ್ಕು ಕಾಡಾನೆಗಳು ಜತೆಯಾಗಿ ತಿರುಗಾಡುತ್ತಿವೆ. ಚಂದಪ್ಪ ಅವರ ತೋಟಕ್ಕೆ ಆಗಮಿಸಿದ್ದ ವೇಳೆ ಅಡಿಕೆ ಗಿಡಕ್ಕೆ ತೋಡಿದ್ದ ಗುಂಡಿಯಲ್ಲಿ ಮರಿ ಆನೆ ಸಿಲುಕಿದ್ದು, ಅದನ್ನು ಹೊರಗೆಳೆಯಲು ಇತರ ಆನೆಗಳು ಒದ್ದಾಟ ನಡೆಸಿರುವ ಕುರುಹುಗಳೂ ಇವೆ. ಗುಂಪು ಅಲ್ಲದೆ ಒಂಟಿ ಸಲಗವೂ ಇದ್ದು, ಆಗಾಗ ಗ್ರಾಮಗಳಿಗೆ ಆಗಮಿಸಿ ಹಾವಳಿ ನೀಡುತ್ತಿದೆ.
Related Articles
ಮೂರರಿಂದ ನಾಲ್ಕು ತಿಂಗಳ ಹಿಂದೆಯೂ ಕಾಡಾನೆ ಹಿಂಡು ಗ್ರಾಮಕ್ಕೆ ಬಂದಿದ್ದು, ಫಸಲಿಗೆ ಬಂದಿದ್ದ ಭತ್ತದ ಬೆಳೆ(ನೇಜಿ)ಯನ್ನು ತಿಂದು ನಾಶಗೊಳಿಸಿದ್ದವು. ಈ ವೇಳೆಯೂ ಅಪಾರ ಪ್ರಮಾಣದ ನಷ್ಟ ಉಂಟಾಗಿತ್ತು. ಇಲಾಖೆಗಳಿಂದ ಪರಿಹಾರವೂ ಲಭಿಸಿತ್ತು.
Advertisement
ಬೆಳೆಗಳಿಗೆ ಹಾನಿಫಸಲಿಗೆ ಬಂದ 70ಕ್ಕೂ ಹೆಚ್ಚು ಅಡಿಕೆ ಮರ, 5 ತೆಂಗಿನ ಮರ ಹಾಗೂ ಬಾಳೆ ಗಿಡಗಳು ನಾಶವಾಗಿವೆ. ಇನ್ನು ನೀರಿಗಾಗಿ ಹಾಕಿದ್ದ ಪೈಪ್ ಹಾಗೂ ಇತರ ಕೃಷಿಗಳಿಗೂ ಹಾನಿ ಮಾಡಿವೆ. ತೆಂಗಿನ ಮರ, ಅಡಿಕೆ ಮರಗಳನ್ನೂ ಛಿದ್ರಗೊಳಿಸಿವೆ. ಸಿಕ್ಕ ಸಿಕ್ಕ ಗಿಡಗಳನ್ನೂ ನಾಶಪಡಿಸಿ ಕೃಷಿಕರಿಗೆ ಅಪಾರ ನಷ್ಟ ಉಂಟು ಮಾಡುತ್ತಿವೆ. ಚಾರ್ಮಾಡಿ, ಭೈರತ್ತಿ, ಕುದುರೆಮುಖ ಮೊದಲಾದ ರಕ್ಷಿತಾರಣ್ಯ ಪ್ರದೇಶಗಳಲ್ಲಿ ಆನೆಗಳು ಓಡಾಡುತ್ತಿದ್ದು, ಇತ್ತೀಚಿನ ಕೆಲವು ವರ್ಷಗಳಲ್ಲಿ ವರ್ಷಕ್ಕೆ ಕನಿಷ್ಠ 4 ಬಾರಿಯಾದರೂ ದಾಳಿ ಮಾಡುತ್ತಿವೆ. ತಾಲೂಕಿನ ಮುಂಡಾಜೆ, ಕಡಿರುದ್ಯಾವರ, ಮಿತ್ತಬಾಗಿಲು, ನಂದಿಕಾಡು, ಸಿಂಗನಾರು, ಕುಡಾಲು, ಮಲ್ಲ, ಕುಮೇರು, ತುಳುಪುಳೆ, ಕಜಕ್ಕೆ, ತಿಮ್ಮಾರುಕಂಡ ಮೊದಲಾದೆಡೆ ಆಗಮಿಸಿ ಕೃಷಿಗೆ ಹಾನಿಯುಂಟು ಮಾಡಿದ ಪ್ರಕರಣಗಳು ನಡೆದಿವೆ. ಆಗಾಗ ಕಡಿರುದ್ಯಾವರ, ಎಳನೀರು ಮೊದಲಾದೆಡೆ ದಾಳಿ ಮಾಡುತ್ತಿವೆ. ಕೆಲವು ವರ್ಷಗಳ ಹಿಂದೆ ಚಾರ್ಮಾಡಿಯಲ್ಲಿ ಕಾಂಕ್ರೀಟ್ ಕಾಮಗಾರಿ ಮಾಡಲಾಗಿದ್ದು, ಬಳಿಕ ಉಪಟಳ ಹೆಚ್ಚಾಗಿದೆ. ಹಿಂದೆ ವರ್ಷಕ್ಕೆ ಒಂದು ಬಾರಿ ಬರುತ್ತಿದ್ದ ಕಾಡಾನೆಗಳು, ಈಗ ವರ್ಷಕ್ಕೆ ನಾಲ್ಕು ಬಾರಿಯೂ ಬರುವಂತಾಗಿದೆ ಎನ್ನುತ್ತಾರೆ ಗ್ರಾಮದ ಹಿರಿಯರು. ಕಾಡಾನೆ ಹಿಂಡು ಸದ್ಯ ಸಮೀಪದ ಕಾಡಿಗೆ ಹಿಂದಿರುಗಿದ್ದು, ಮತ್ತೆ ಆಗಮಿಸುವ ಭಯದಲ್ಲಿ ಸಾರ್ವಜನಿಕರು ದಿನ ಕಳೆಯುತ್ತಿದ್ದಾರೆ. ಅರಣ್ಯ ಇಲಾಖೆ ಸಿಬಂದಿ ಭೇಟಿ
ಸಾಮಾನ್ಯವಾಗಿ ಆಹಾರ ಅರಸಿ ಬಂದ ವೇಳೆ ಸಮಸ್ಯೆಗಳು ಉಂಟಾಗುತ್ತಿವೆ. ದಾಳಿ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬಂದಿ ಭೇಟಿ ನೀಡಿ, ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ಮುಂಜಾಗೃತ ಕ್ರಮ
ಇಲಾಖೆಯಿಂದ ಸ್ಥಳ ಪರಿಶೀಲನೆ ಮಾಡಲಾಗಿದೆ. ನಷ್ಟಕ್ಕೆ ಪರಿಹಾರ ಕೊಡಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಆನೆಗಳು ಮತ್ತೆ ಆಗಮಿಸಿದರೆ, ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ. ಸಿಬಂದಿ ಸ್ಥಳಕ್ಕೆ ತೆರಳಿ ಆನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯ ಮಾಡಲಿದ್ದಾರೆ.
– ಸುಬ್ಬಯ ನಾಯ್ಕ
ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಪರಿಹಾರ ಬೇಕು
ಹಿಂದೆ ಒಂಟಿ ಸಲಗ ಮೂರು ಬಾರಿ ಇಲ್ಲಿಗೆ ಆಗಮಿಸಿತ್ತು. ಆನೆಗಳ ಹಿಂಡು ಎರಡನೇ ಬಾರಿಗೆ ಆಗಮಿಸಿದೆ. ಮನೆಯ ಬಳಿಗೆ ಸುಳಿಯದಿರುವುದೇ ಸಮಾಧಾನಕರ ವಿಚಾರ. ಅವುಗಳು ಆಗಮಿಸಿದ ವೇಳೆ ಹೊರಗೆ ತೆರಳುವುದೂ ಕಷ್ಟ. ಬೆಳೆಗೆ ಸೂಕ್ತ ಪರಿಹಾರ ಸಿಗಬೇಕಿದೆ.
– ಚಂದಪ್ಪ ಕೃಷಿ ನಷ್ಟಕ್ಕೊಳಗಾದ ಕೃಷಿಕ ಬೆಳೆಗಳು ಕೈತಪ್ಪುತ್ತಿವೆ
ಕಾಡಾನೆಗಳು, ಕಾಡುಕೋಣ ಆಗಮಿಸಿ ಕೃಷಿಗೆ ಹಾನಿ ಉಂಟು ಮಾಡಿವೆ. ಗ್ರಾಮಗಳಿಗೆ ಆಗಮಿಸಿ ಬೇಕಾದ್ದನ್ನು ತಿಂದರೂ ಸಮಸ್ಯೆಯಿಲ್ಲ. ಆದರೆ ಹಾಳುಗೆಡವುತ್ತಿರುವುದು ಬೇಸರ ಮೂಡಿಸುತ್ತದೆ. ಕಷ್ಟಪಟ್ಟು ಬೆಳೆದ ಬೆಳೆಗಳು ಕೈತಪ್ಪುತ್ತಿವೆ.
– ಉದಯ,
ಸ್ಥಳೀಯರು ಹರ್ಷಿತ್ ಪಿಂಡಿವನ